

ನವದೆಹಲಿ: ಕೋವಿಡ್ 19 ಲಾಕ್ಡೌನ್ನಿಂದಾಗಿ ಯಾವುದೇ ಕ್ರಿಕೆಟ್ ಸರಣಿಗಳು ನಡೆಯುತ್ತಿಲ್ಲ. ಐಪಿಎಲ್ ಕೂಡ ಮುಂದೂಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿರುವ ಕ್ರಿಕೆಟ್ ಆಟಗಾರರು ಪತ್ನಿ, ಮಕ್ಕಳೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ.
ಆದರೆ ಮಕ್ಕಳ ಬೇಸರ ನೀಗಿಸಲು ಮನೆಯೊಳಗೆ ಕ್ರಿಕೆಟ್ ಆಡುವ ಅನಿವಾರ್ಯತೆ ಉಂಟಾಗಿದೆ. ಇಂಥ ಅನಿವಾರ್ಯತೆಯಲ್ಲೇ ಟೀಂ ಇಂಡಿಯಾದ ಆರಂಭಿಕ ಶಿಖರ್ ಧವನ್, ಪುತ್ರ ಝೋರಾವರ್ ಜತೆ ಮನೆಯಲ್ಲೇ ಕ್ರಿಕೆಟ್ ಆಡುತ್ತಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಶೇರ್ ಮಾಡಿರುವ ಅವರು, ಕ್ವಾರಂಟೈನ್ ಪ್ರೀಮಿಯರ್ ಲೀಗ್, ಧವನ್ V/s ಧವನ್ ಎಂಬ ಅಡಿಬರಹ ಕೊಟ್ಟಿದ್ದಾರೆ. ಈ ದೃಶ್ಯದಲ್ಲಿ ಝೋರಾವರ್ ಬೌಲಿಂಗ್ ಮಾಡುತ್ತಿದ್ದರೆ, ಧವನ್ ರಕ್ಷಣಾತ್ಮಕವಾಗಿ ಆಡುತ್ತಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಶಿಖರ್ ಧವನ್, ಲಾಕ್ಡೌನ್ನ ಈ ಅವಧಿಯಲ್ಲಿ ಪ್ರಾಣಿಗಳು ಊಟ, ನೀರು ಸಿಗದೆ ಪರದಾಡುತ್ತಿವೆ. ಇವುಗಳ ಸಹಾಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದರು.