

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸರಿಸುಮಾರು ಎರಡು ತಿಂಗಳ ಬಳಿಕ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದು, ಬುಧವಾರದಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಹರ್ಮಾನ್ಪ್ರೀತ್ ಕೌರ್ ಬಳಗ ವರ್ಷದ ಕೊನೇ ಸರಣಿಯಲ್ಲಿ ಗೆಲುವು ದಾಖಲಿಸುವ ಹಂಬಲದಲ್ಲಿದೆ. ಹೊಸ ಕೋಚ್ ಅಮೊಲ್ ಮುಜುಮ್ದಾರ್ ಮಾರ್ಗದರ್ಶನದಲ್ಲಿ ಭಾರತಕ್ಕೆ ಇದು ಮೊದಲ ಸರಣಿಯಾಗಿದೆ.
ಭಾರತ ಮಹಿಳಾ ತಂಡ ಹಾಲಿ ವರ್ಷ ದಣ ಆಫ್ರಿಕಾದಲ್ಲಿ ಆಡಿದ ತ್ರಿಕೋನ ಸರಣಿಯಲ್ಲಿ ಫೈನಲ್ಗೇರಿದ್ದರೆ, ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ 2&1ರಿಂದ ಗೆದ್ದಿತ್ತು. ಹಾಂಗ್ರೆೌ ಏಷ್ಯನ್ ಗೇಮ್ಸ್ನಲ್ಲೂ ಸ್ವರ್ಣ ಪದಕ ಗೆದ್ದು ಬೀಗಿತ್ತು. ಮತ್ತೊಂದೆಡೆ ಇಂಗ್ಲೆಂಡ್ ತಂಡ ತವರಿನಲ್ಲಿ ಶ್ರೀಲಂಕಾ ಎದುರು 1&2ರಿಂದ ಸರಣಿ ಸೋತ ಹಿನ್ನಡೆಯೊಂದಿಗೆ ಕಣಕ್ಕಿಳಿಯಲಿದೆ.
ಭಾರತ ತಂಡ ತವರಿನ ಟಿ20 ಪಂದ್ಯಗಳಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ಇಂಗ್ಲೆಂಡ್ ವಿರುದ್ಧವೇ ಆಡಿರುವ 9 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯಿಸಿದೆ. ಇದಲ್ಲದೆ ಇಂಗ್ಲೆಂಡ್ ವಿರುದ್ಧ ಆಡಿರುವ ಒಟ್ಟಾರೆ 27 ಟಿ20 ಪಂದ್ಯಗಳಲ್ಲಿ 7ರಲ್ಲಿ ಮಾತ್ರ ಜಯಿಸಿದೆ. ಭಾರತ 2 ವರ್ಷಗಳ ಹಿಂದೆ ಅಂದರೆ 2021ರ ಮಾರ್ಚ್ನಲ್ಲಿ ಕೊನೆಯದಾಗಿ ತವರಿನಲ್ಲಿ ಟಿ20 ಪಂದ್ಯ ಗೆದ್ದುಕೊಂಡಿದೆ. ತವರಿನಲ್ಲಿ ಆಡಿರುವ ಒಟ್ಟಾರೆ 50 ಟಿ20 ಪಂದ್ಯಗಳಲ್ಲಿ ಭಾರತ 19ರಲ್ಲಿ ಗೆದ್ದಿದ್ದು, 30ರಲ್ಲಿ ಸೋತಿದೆ. 1ರಲ್ಲಿ ಟೈ ಸಾಧಿಸಿದೆ.
ಮುಂದಿನ ವರ್ಷ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಸಿದ್ಧತೆಯ ದೃಷ್ಟಿಯಿಂದ ಭಾರತಕ್ಕೆ ಇದು ಮಹತ್ವದ ಸರಣಿಯಾಗಿದೆ. ಸರಣಿಯ ಕೊನೇ 2 ಪಂದ್ಯಗಳು ಶನಿವಾರ ಮತ್ತು ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲೇ ನಡೆಯಲಿವೆ.
ಶ್ರೇಯಾಂಕ ಪದಾರ್ಪಣೆ ನಿರೀಕ್ಷೆ
ಆರ್ಸಿಬಿ ಮತ್ತು ಭಾರತ ಎ ಮಹಿಳಾ ತಂಡಗಳ ಪರ ಮಿಂಚಿರುವ ಕರ್ನಾಟಕದ ಆಲ್ರೌಂಡರ್ ಶ್ರೇಯಾಂಕ ಪಾಟೀಲ್ ಭಾರತ ತಂಡದ ಪರ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಅವರೊಂದಿಗೆ ಎಡಗೈ ಸ್ಪಿನ್ನರ್ಗಳಾದ ಪಂಜಾಬ್ನ ಮನ್ನತ್ ಕಶ್ಯಪ್ ಮತ್ತು ಬಂಗಾಳದ ಶೇಕಾ ಇಶಾಕ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಪ್ರೇಕ್ಷಕರಿಗೆ ಉಚಿತ ಪ್ರವೇಶ
ಮಹಿಳಾ ತಂಡಗಳ ಪಂದ್ಯಗಳನ್ನು ವೀಸಲು ವಾಂಖೆಡೆ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಮಹಿಳಾ ಕ್ರಿಕೆಟ್ ಪಂದ್ಯಗಳಿಗೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ದೃಷ್ಟಿಯಿಂದ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.
*ಆರಂಭ: ರಾತ್ರಿ 7.00
*ನೇರಪ್ರಸಾರ: ಜಿಯೋಸಿನಿಮಾ