ವಿಜಯ್​ ಮರ್ಚೆಂಟ್​ ಟ್ರೋಫಿಯಲ್ಲಿ ದ್ರಾವಿಡ್​ ಕಿರಿಯ ಪುತ್ರ ಅನ್ವಯ್​ ಅವಳಿ ಅರ್ಧಶತಕದ ಮಿಂಚು!

dravid son web
Published on

ಬೆಂಗಳೂರು: ದಿಗ್ಗಜ ಬ್ಯಾಟರ್​ ಹಾಗೂ ಟೀಮ್​ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವರ ಎರಡನೇ ಪುತ್ರ ಅನ್ವಯ್​ ದ್ರಾವಿಡ್​ 16 ವಯೋಮಿತಿಯ ವಿಜಯ್​ ಮರ್ಚೆಂಟ್​ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಅವಳಿ ಅರ್ಧಶತಕ ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ.

14 ವರ್ಷದ ಅನ್ವಯ್​ 16 ವಯೋಮಿತಿ ರಾಜ್ಯ ತಂಡದ ನಾಯಕರೂ ಆಗಿದ್ದಾರೆ. ಆಂಧ್ರದ ವಿಜಯವಾಡ ಹೊರವಲಯದ ಮಂಗಳಗಿರಿಯಲ್ಲಿ ನಡೆದ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಅನ್ವಯ್​ ದ್ರಾವಿಡ್​ ಮೊದಲ ಇನಿಂಗ್ಸ್​ನಲ್ಲಿ 59 ರನ್​ (133 ಎಸೆತ, 8 ಬೌಂಡರಿ) ಗಳಿಸಿದರೆ, 2ನೇ ಇನಿಂಗ್ಸ್​ನಲ್ಲಿ ಅಜೇಯ 70 ರನ್​ (162 ಎಸೆತ, 8 ಬೌಂಡರಿ) ಸಿಡಿಸುವ ಮೂಲಕ ಕರ್ನಾಟಕ ತಂಡಕ್ಕೆ ಡ್ರಾ ಸಾಧಿಸಲು ನೆರವಾದರು.

ಕರ್ನಾಟಕ ಮೊದಲ ಇನಿಂಗ್ಸ್​ನಲ್ಲಿ 236 ರನ್​ಗಳಿಗೆ ಆಲೌಟ್​ ಆದರೆ, ಉತ್ತರಾಖಂಡ 8 ವಿಕೆಟ್​ಗೆ 474 ರನ್​ ಪೇರಿಸಿ 238 ರನ್​ ಮುನ್ನಡೆ ಸಾಧಿಸಿತು. ಪ್ರತಿಯಾಗಿ ಕರ್ನಾಟಕ 2ನೇ ಇನಿಂಗ್ಸ್​ನಲ್ಲಿ 3 ವಿಕೆಟ್​ಗೆ 151 ರನ್​ ಗಳಿಸಿ ಡ್ರಾ ಸಾಧಿಸಿತು.

ದ್ರಾವಿಡ್​ರ ಮೊದಲ ಪುತ್ರ ಸಮಿತ್​ ದ್ರಾವಿಡ್​ 19 ವಯೋಮಿತಿ ಕರ್ನಾಟಕ ತಂಡದ ಭಾಗವಾಗಿದ್ದು, ಕೂಚ್​ ಬಿಹಾರ್​ ಟ್ರೋಫಿಯಲ್ಲಿ ಆಡುತ್ತಿದ್ದಾರೆ. 18 ವರ್ಷದ ಸಮಿತ್​ ಆಲ್ರೌಂಡರ್​ ಆಗಿದ್ದು, ಇತ್ತೀಚೆಗೆ ಅವರ ಆಟವನ್ನು ನೋಡಲು ದ್ರಾವಿಡ್​ ಮೈಸೂರಿಗೆ ಹೋಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net