

ಮುಂಬೈ: ರಸ್ತೆ ಸುರಕ್ಷತಾ ಜಾಗೃತಿ ಅಂಗವಾಗಿ ನಡೆಯುತ್ತಿರುವ ವರ್ಲ್ಡ್ ಸಿರೀಸ್ ಟಿ20 ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ಲೆಜೆಂಡ್ಸ್ ತಂಡ ಮಂಗಳವಾರ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡವನ್ನು ಮಣಿಸಿದ್ದ ಭಾರತ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಆಸ್ಟ್ರೇಲಿಯಾ ಲೆಜೆಂಡ್ಸ್ ಎದುರು ಜಯ ದಾಖಲಿಸಿರುವ ಶ್ರೀಲಂಕಾ ಕೂಡ ಪ್ರಬಲ ಪೈಪೋಟಿಗೆ ಸಜ್ಜಾಗಿದೆ. 90ರ ದಶಕ ನೆನಪಿಸುವಂಥ ಅವಿಸ್ಮರಣೀಯ ನಿರ್ವಹಣೆ ತೋರಿದ್ದ ಭಾರತದ ಹಿರಿಯ ಆಟಗಾರರು ಮೊದಲ ಪಂದ್ಯದಲ್ಲಿ ಅಭಿಮಾನಿಗಳ ಮನ ಗೆದ್ದಿದ್ದರು.
ಸಚಿನ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮದ್ ಕೈಫ್, ಜಹೀರ್ ಖಾನ್ ಇನ್ನು ಹಿಂದಿನ ಲಯದಲ್ಲಿ ಇರುವುದೇ ತಂಡದ ಪ್ಲಸ್ ಪಾಯಿಂಟ್. ದಿಲ್ಶಾನ್, ಚಾಮಿಂದಾ ವಾಸ್, ರಂಗನಾ ಹೆರಾತ್ರಂಥ ಅನುಭವಿ ಪಡೆ ಹೊಂದಿರುವ ಶ್ರೀಲಂಕಾ ಸತತ 2ನೇ ಜಯದ ನಿರೀಕ್ಷೆಯಲ್ಲಿದೆ.