ಧರ್ಮಶಾಲಾದಲ್ಲಿ ಭಾರೀ ಮಳೆ: ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ರದ್ದು

ind vs SA
Published on

ಧರ್ಮಶಾಲಾ: ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿದೆ. ಅದರೊಂದಿಗೆ ಕಳೆದ ಆರು ತಿಂಗಳಲ್ಲಿ ಧರ್ಮಶಾಲಾದಲ್ಲಿ ನಡೆದ 2ನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಂತೆ ಆಗಿದೆ. ಆರು ತಿಂಗಳ ಹಿಂದೆಯೂ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವೇ ಮಳೆಯಿಂದಾಗಿ ರದ್ದಾಗಿತ್ತು.

ಎರಡು ದಿನಗಳ ಹಿಂದೆಯೇ ಗುರುವಾರ ಹಾಗೂ ಶುಕ್ರವಾರದ ವೇಳೆಗೆ ಧರ್ಮಶಾಲಾ ಪ್ರದೇಶದಲ್ಲಿ ಮಳೆಯಾಗುವ ಸೂಚನೆ ನೀಡಲಾಗಿತ್ತು. ಆದ್ದರಿಂದ ಪಂದ್ಯ ನಡೆಯುವ ಬಗ್ಗೆ ಆಗಲೇ ಅನುಮಾನ ವ್ಯಕ್ತವಾಗಿತ್ತು. ಈ ನಡುವೆ ಅಭಿಮಾನಿಗಳು ಹಾಗೂ ಎಚ್​ಪಿಸಿಎ ಅಧಿಕಾರಿಗಳು ಸ್ಥಳೀಯ ಇಂದ್ರುನಾಗ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಂದ್ಯದ ವೇಳೆ ಮಳೆ ಬರದಂತೆ ಪ್ರಾರ್ಥನೆ ನಡೆಸಿದ್ದರು. ಆದರೆ, ಇದು ಯಾವುದೂ ಫಲ ಕೊಟ್ಟಿಲ್ಲ. ಬುಧವಾರ ರಾತ್ರಿ ಇಡೀ ಮಳೆ ಸುರಿದ ಕಾರಣದಿಂದ ಮೈದಾನದ ಹೊರಆವರಣ ಸಂಪೂರ್ಣವಾಗಿ ಒದ್ದೆಯಾಗಿತ್ತು.

ಇನ್ನು ಪಂದ್ಯ ಆರಂಭವಾಗಲು ಕೆಲ ಸಮಯಗಳು ಇರುವಾಗಲೂ ಮಳೆ ಸುರಿದಿದ್ದರಿಂದ, ಟಾಸ್ ಪ್ರಕ್ರಿಯೆ ಕೂಡ ವಿಳಂಬವಾಯಿತು. ಮಧ್ಯಾಹ್ನದ ವೇಳೆ ಮಳೆಯ ಪ್ರಮಾಣ ಕಡಿಮೆ ಆದರೂ, ಜಿಟಿಜಿಟಿಯಾಗಿ ಸುರಿಯುತ್ತಿದ್ದ ಕಾರಣ ಪಂದ್ಯವನ್ನು ರದ್ದು ಮಾಡಲು ಅಂಪೈರ್ ತೀರ್ವನಿಸಿದರು. ಕನಿಷ್ಠ 20 ಓವರ್​ಗಳ ಪಂದ್ಯಕ್ಕೆ ಸಂಜೆ 6.30ರವರೆಗೆ ಕಾಯಲಾಗಿತ್ತು. -ಪಿಟಿಐ

ಖಾಲಿ ಕ್ರೀಡಾಂಗಣದಲ್ಲಿ ಲಖನೌ, ಕೋಲ್ಕತ ಏಕದಿನ

ದೇಶದಲ್ಲಿ ಕರೊನಾ ವೈರಸ್ ಭೀತಿ ವ್ಯಾಪಕವಾಗಿರುವ ಕಾರಣ, ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮುಂದಿನ ಎರಡೂ ಏಕದಿನ ಪಂದ್ಯಗಳು ಲಖನೌ, ಕೋಲ್ಕತದಲ್ಲಿ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿವೆ. ಈಗಾಗಲೇ ಕೇಂದ್ರ ಕ್ರೀಡಾ ಸಚಿವಾಲಯ, ಕ್ರೀಡಾ ಚಟುವಟಿಕೆಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸುವಂತೆ ಸೂಚನೆ ನೀಡಿರುವ ಕಾರಣ, ಬಿಸಿಸಿಐ ಕೂಡ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆ. ವೈರಸ್​ನ ಕಾರಣದಿಂದಾಗಿ ಧರ್ಮಶಾಲಾ ಏಕದಿನ ಪಂದ್ಯದ ಟಿಕೆಟ್​ಗಳಿಗೂ ಬೇಡಿಕೆ ಬಂದಿರಲಿಲ್ಲ. ಲಖನೌ ಪಂದ್ಯಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡುವುದಿಲ್ಲ ಎಂದು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಗುರುವಾರ ಪ್ರಕಟಿಸಿದ್ದರೆ, ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ತಕ್ಷಣವೇ ಟಿಕೆಟ್ ಮಾರಾಟ ಪ್ರಕ್ರಿಯೆ ನಿಲ್ಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net