

ನವದೆಹಲಿ: ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಟಾಸ್ ಗೆದ್ದ ಆತಿಥೇಯ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಡೆಂಘೆ ಜ್ವರದ ಕಾರಣದಿಂದ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಶುಭಮನ್ ಗಿಲ್ ಚೇತರಿಸಿಕೊಂಡಿದ್ದು, ಇಂದಿನ ಪಂದ್ಯಕ್ಕೆ ಲಭ್ಯವಾಗಿದ್ದಾರೆ. ಇಶಾನ್ ಕಿಶನ್ರನ್ನು ಆಡುವ 11 ಆಟಗಾರರ ಬಳಗದಿಂದ ಕೈಬಿಡಲಾಗಿದೆ. ಗಿಲ್ 2023ರಲ್ಲಿ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಕೇವಲ 20 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್, 1230 ರನ್ಗಳೊಂದಿಗೆ ಈ ವರ್ಷ ಮುಂಚೂಣಿಯಲ್ಲಿ ಇರುವ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. 72.35 ರನ್ ಸರಾಸರಿಯೊಂದಿಗೆ 105.03 ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ. ಐದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ ಒಂದೇ ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿರುವ ಭಾರತೀಯ ಅಗ್ರಗಣ್ಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗಿಲ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಇದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾ ಕಪ್ನಲ್ಲೂ ಗಿಲ್ ಒಳ್ಳೆಯ ರನ್ ಕಲೆಹಾಕಿದರು. ತಮ್ಮ ಹೆಸರಿನಲ್ಲಿ 302 ರನ್ ದಾಖಲಿಸಿದ ಗಿಲ್, ಐಸಿಸಿ ಏಕದಿನ ಬ್ಯಾಟ್ಸ್ಮೆನ್ಗಳ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಒಂದೇ ವರ್ಷದಲ್ಲಿ ಗಳಿಸಿದ 1894 ರನ್ಗಳ ವಿಶ್ವದಾಖಲೆಯನ್ನು ಮುರಿಯಲು ಈ ಕ್ಯಾಲೆಂಡರ್ ವರ್ಷದಲ್ಲಿ ಗಿಲ್ ಅವರಿಗೆ 665 ರನ್ ಮಾತ್ರ ಬಾಕಿ ಇದೆ.
ಟೀಮ್ ಇಂಡಿಯಾ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮ, ಜಸ್ಪ್ರೀತ್ ಬೂಮ್ರಾ, ಕೆ ಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಅವರ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮಳೆ ಸಾಧ್ಯತೆ ವಿರಳ
ಕಳೆದ ಏಷ್ಯಾಕಪ್ನಲ್ಲಿ ನಡೆದ ಭಾರತ&ಪಾಕ್ ನಡುವಿನ ಎರಡೂ ಪಂದ್ಯಗಳು ಮಳೆಯಿಂದ ಅಡಚಣೆ ಎದುರಿಸಿದ್ದವು. ಈ ಪೈಕಿ ಒಂದು ಪಂದ್ಯ ರದ್ದುಗೊಂಡಿದ್ದರೆ, ಇನ್ನೊಂದು ಪಂದ್ಯ ಮರುದಿನಕ್ಕೆ ವಿಸ್ತರಿಸಲ್ಪಟ್ಟಿತ್ತು. ವಿಶ್ವಕಪ್ನಲ್ಲೂ ಭಾರತ-ಪಾಕ್ ಪಂದ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಮಳೆ ಮುನ್ಸೂಚನೆ ಇದ್ದರೂ, ಮಳೆಯಿಂದಾಗಿ ಪಂದ್ಯ ತೊಂದರೆ ಎದುರಿಸುವ ಸಾಧ್ಯತೆ (ಶೇ. 14) ವಿರಳ ಎನ್ನಲಾಗುತ್ತಿದೆ. ಆದರೆ, ಮಳೆ ಕಾಡಿದರೆ ಈ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ವಿಶ್ವಕಪ್ನಲ್ಲಿ ನಾಕೌಟ್ ಪಂದ್ಯಗಳಿಗೆ ಮಾತ್ರ ಮೀಸಲು ದಿನವಿದೆ.
ಪಿಚ್ ರಿಪೋರ್ಟ್
ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ ಉದ್ಘಾಟನಾ ಪಂದ್ಯದ ಬಳಿಕ ಅಹಮದಾಬಾದ್ನಲ್ಲಿ ಹಾಲಿ ವಿಶ್ವಕಪ್ನ 2ನೇ ಪಂದ್ಯ ಇದಾಗಿದೆ. ಮೊದಲ ಪಂದ್ಯವನ್ನು ಗಮನಿಸಿದರೆ ಇಲ್ಲಿನ ಪಿಚ್ ಬ್ಯಾಟಿಂಗ್-ಸ್ನೇಹಿಯಂತಿದೆ. ಆದರೆ ಬ್ಯಾಟರ್ಗಳು ಕ್ರೀಸ್ಗೆ ಇಳಿದ ಆರಂಭದಲ್ಲಿ ಎಚ್ಚರಿಕೆಯ ಆಟವಾಡುವುದು ಅಗತ್ಯ. ಬಳಿಕ ಬಿರುಸಿನ ಆಟಕ್ಕಿಳಿದರೆ ಬೃಹತ್ ಮೊತ್ತ ನಿರೀಕ್ಷಿಸಬಹುದು. ಇಬ್ಬನಿ ಕಾಡುವ ಸಾಧ್ಯತೆ ಇದ್ದು, ಆಗ ಚೇಸಿಂಗ್ ತಂಡಕ್ಕೆ ಅನುಕೂಲವಾಗಲಿದೆ.