

ಅಹಮದಾಬಾದ್: ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ದಿಟ್ಟ ತಿರುಗೇಟು ನೀಡುವ ಮೂಲಕ ಅಮೋಘ ಸಾಧನೆಯೊಂದಿಗೆ ಬೀಗಿರುವ ಭಾರತ ತಂಡ ಇದೀಗ ಬದಲಾದ ಬಣ್ಣದ ಚೆಂಡು, ಬದಲಾದ ಕ್ರಿಕೆಟ್ ಪ್ರಕಾರ ಮತ್ತು ಬದಲಾದ ಎದುರಾಳಿ ತಂಡದ ನಾಯಕತ್ವದೆದುರು ಗೆಲುವಿನ ಓಟ ಮುಂದುವರಿಸಲು ಸಜ್ಜಾಗಿದೆ. ತವರಿನಲ್ಲೇ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್‌ಗೆ ಸಿದ್ಧತೆಯ ದೃಷ್ಟಿಯಿಂದ ಮಹತ್ವದ್ದಾಗಿರುವ 5 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿ ಶುಕ್ರವಾರದಿಂದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಗಲಿದೆ. ಟಿ20 ಕ್ರಿಕೆಟ್‌ನಲ್ಲಿ ಆಲ್ರೌಂಡ್ ಬಲ ಹೊಂದಿರುವ ಇವೊಯಿನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಪಡೆ ಪರಿಪೂರ್ಣ ತಂಡ ಸಂಯೋಜನೆ ರೂಪಿಸುವ ತವಕದಲ್ಲಿದ್ದು, ಮತ್ತೊಮ್ಮೆ ಸ್ಪಿನ್ ಅಸವೇ ಪ್ರಮುಖವಾಗಿ ಬಳಸಲ್ಪಡುವ ನಿರೀಕ್ಷೆ ಇದೆ.
ವಿಶ್ವಕಪ್‌ಗೆ ಬಲಿಷ್ಠ ತಂಡ ರೂಪಿಸುವುದು ಭಾರತದ ಪ್ರಮುಖ ಗುರಿಯಾಗಿದ್ದು, ಕೆಲ ಸ್ಥಾನಗಳಿಗೆ ಕಾಯಂ ಆಟಗಾರರನ್ನು ಕಂಡುಕೊಳ್ಳಬೇಕಿದೆ. 2019ರಲ್ಲಿ ಏಕದಿನ ವಿಶ್ವಕಪ್‌ವರೆಗೂ ಭಾರತ ತಂಡ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸ್ಥಾನವನ್ನು ಸ್ಪಷ್ಟವಾಗಿ ನಿರ್ಧರಿಸಲಾಗದೆ ಪರದಾಡಿತ್ತು. ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಬೇಕಿದೆ.
ಬಯೋ-ಬಬಲ್ ವಾತಾವರಣದಲ್ಲಿ ಬೃಹತ್ ತಂಡವನ್ನೇ ಹೊಂದಿರುವ ಭಾರತ ಕೆಲ ಸ್ಥಾನಗಳಿಗೆ ಆಯ್ಕೆ ಗೊಂದಲವನ್ನು ಎದುರಿಸುತ್ತಿದೆ. ಈ ನಡುವೆ ಫಿಟ್ನೆಸ್ ಸಮಸ್ಯೆಯೂ ಎದುರಾಗಿದ್ದು, ಸ್ಪಿನ್ನರ್ ವರುಣ್ ಚಕ್ರವರ್ತಿ ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾಗಿ ಸರಣಿಯಿಂದ ಹೊರಬಿದ್ದಿದ್ದರೆ, ರಾಹುಲ್ ತೆವಾಟಿಯಾ ಮತ್ತು ಟಿ. ನಟರಾಜನ್ ಕೂಡ ಫಿಟ್ ಆಗಿಲ್ಲ. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್‌ಗೂ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಅವಕಾಶ ಲಭಿಸುವ ಸಾಧ್ಯತೆ ಇಲ್ಲ.
ಆಂಗ್ಲರಿಗೆ ಸ್ಪಿನ್ ಬೌಲಿಂಗ್ ದೌರ್ಬಲ್ಯ: ಟೆಸ್ಟ್ ಸರಣಿಯಲ್ಲಿ ಸಮರ್ಥ ಸ್ಪಿನ್ ಬೌಲಿಂಗ್ ವಿಭಾಗವಿಲ್ಲದೆ ಮತ್ತು ಆತಿಥೇಯ ಸ್ಪಿನ್ನರ್‌ಗಳನ್ನು ದಿಟ್ಟವಾಗಿ ಎದುರಿಸಲಾಗದೆ ಪರದಾಡಿದ್ದ ಇಂಗ್ಲೆಂಡ್‌ಗೆ ಚುಟುಕು ಕ್ರಿಕೆಟ್ ಸರಣಿಯಲ್ಲೂ ಇದೇ ದೊಡ್ಡ ದೌರ್ಬಲ್ಯವೆನಿಸಬಹುದು. ಆದರೆ ಭಾರತ ತಂಡವೇ ಫೇವರಿಟ್ ಎಂದು ನಿಖರವಾಗಿ ಹೇಳಲಾಗದು. ಯಾಕೆಂದರೆ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಹಲವು ಆಟಗಾರರು ಇಂಗ್ಲೆಂಡ್ ಪಾಳಯದಲ್ಲಿರುವುದರಿಂದ ಜಿದ್ದಾಜಿದ್ದಿನ ಕಾದಾಟವೇ ಏರ್ಪಡುವ ನಿರೀಕ್ಷೆ ಇಡಬಹುದು.
ರಾಹುಲ್‌ಗೆ ಆರಂಭಿಕನ ಸ್ಥಾನ ಖಚಿತ
ರೋಹಿತ್ ಶರ್ಮ ಜತೆಗೆ ಆರಂಭಿಕರಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಗುರುವಾರದವರೆಗೂ ಗೊಂದಲಮಯವಾಗಿತ್ತು. ಆದರೆ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ, ಕನ್ನಡಿಗ ಕೆಎಲ್ ರಾಹುಲ್ ಆರಂಭಿಕರಾಗಿ ಆಡುವುದನ್ನು ಖಚಿತಪಡಿಸಿದ್ದಾರೆ. ಜತೆಗೆ ರೋಹಿತ್‌ಗೆ ವಿಶ್ರಾಂತಿ ನೀಡಿದರೆ ಅಥವಾ ರಾಹುಲ್‌ಗೆ ಗಾಯದ ಸಮಸ್ಯೆ ಎದುರಾದರೆ ಮಾತ್ರ ಎಡಗೈ ಆರಂಭಿಕ ಶಿಖರ್ ಧವನ್‌ಗೆ ಆಡುವ ಅವಕಾಶ ಸಿಗಲಿದೆ ಎಂದೂ ತಿಳಿಸಿದ್ದಾರೆ. ಈ ಮೂಲಕ ಆರಂಭಿಕ ಜೋಡಿಯ ಬಗೆಗಿನ ಗೊಂದಲವನ್ನು ಕೊಹ್ಲಿ ನಿವಾರಿಸಿದ್ದಾರೆ.
ರನ್‌ಮಳೆ ನಿರೀಕ್ಷೆ
ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ಸ್ಪಿನ್ ಸ್ನೇಹಿಯಾಗಿದ್ದ ಮೊಟೆರಾ ಪಿಚ್‌ನಲ್ಲಿ 2 ಟೆಸ್ಟ್‌ಗಳು ಒಟ್ಟಾರೆ 5 ದಿನಗಳಲ್ಲಿ ಮುಗಿದಿದ್ದವು. ಚುಟುಕು ಕ್ರಿಕೆಟ್‌ನಲ್ಲೂ ಪಿಚ್ ಸ್ವಲ್ಪಮಟ್ಟಿಗೆ ಸ್ಪಿನ್ ಸ್ನೇಹಿ ಎನಿಸಿದರೂ, ಉಭಯ ತಂಡಗಳೂ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವುದರಿಂದ ಭರ್ಜರಿ ರನ್‌ಪ್ರವಾಹ ಹರಿಯುವ ನಿರೀಕ್ಷೆ ಇದೆ. ಜನವರಿಯಲ್ಲಿ ಇಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ನಾಕೌಟ್ ಹಂತದಲ್ಲಿ 5 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡವೇ ಜಯಿಸಿತ್ತು. ಹೀಗಾಗಿ 2ನೇ ಸರದಿಯಲ್ಲಿ ಬೌಲಿಂಗ್ ಮಾಡುವ ತಂಡವನ್ನು ಇಬ್ಬನಿ ಸಮಸ್ಯೆ ಕಾಡಬಹುದು ಎನ್ನಲಾಗುತ್ತಿದೆ.
ಟಿ20 ಸರಣಿ ವೇಳಾಪಟ್ಟಿ
ಪಂದ್ಯ ದಿನಾಂಕ
1. ಮಾರ್ಚ್ 12
2. ಮಾರ್ಚ್ 14
3. ಮಾರ್ಚ್ 16
4. ಮಾರ್ಚ್ 18
5. ಮಾರ್ಚ್ 20
*ಎಲ್ಲಿ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.
*ಆರಂಭ: ರಾತ್ರಿ 7.00
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
ಟಿ20 ಮುಖಾಮುಖಿ: 14
ಭಾರತ: 7
ಇಂಗ್ಲೆಂಡ್: 7
*ಭಾರತದಲ್ಲಿ: 6
ಭಾರತ: 3
ಇಂಗ್ಲೆಂಡ್: 3
ಭಾರತ:
ಐಸಿಸಿ ಟಿ20 ರ‌್ಯಾಂಕ್: 2
ಟೀಮ್ ನ್ಯೂಸ್: ರೋಹಿತ್ ಶರ್ಮ ಜತೆಗೆ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುವುದಾಗಿ ಕೊಹ್ಲಿ ಹೇಳಿದ ಬೆನ್ನಲ್ಲೇ, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್‌ಗೂ ಸ್ಥಾನ ಖಚಿತವೆನಿಸಿದೆ. ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಆಡುವ ಅವಕಾಶಕ್ಕಾಗಿ ಇನ್ನೂ ಕೆಲ ಪಂದ್ಯಗಳವರೆಗೆ ಕಾಯಬೇಕಾಗಬಹುದು. ಇಬ್ಬನಿ ಸಮಸ್ಯೆ ಭೀತಿಯಿಂದಾಗಿ ಭಾರತ ಇಬ್ಬರೇ ಸ್ಪಿನ್ನರ್‌ಗಳಿಗೆ ಆದ್ಯತೆ ನೀಡಬಹುದು. ಆಗ 2, 3ನೇ ವೇಗದ ಬೌಲರ್ ಸ್ಥಾನಕ್ಕೆ ಭುವನೇಶ್ವರ್, ದೀಪಕ್ ಚಹರ್ ಮತ್ತು ಶಾರ್ದೂಲ್ ಠಾಕೂರ್ ನಡುವೆ ಸ್ಪರ್ಧೆ ಏರ್ಪಡಲಿದೆ.
ಸಂಭಾವ್ಯ ತಂಡ: ರೋಹಿತ್ ಶರ್ಮ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್/ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಭುವನೇಶ್ವರ್, ಚಾಹಲ್, ನವದೀಪ್ ಸೈನಿ.
ಇಂಗ್ಲೆಂಡ್:
ಐಸಿಸಿ ಟಿ20 ರ‌್ಯಾಂಕ್: 1
ಟೀಮ್ ನ್ಯೂಸ್: ವೇಗಿ ಜೋಫ್ರಾ ಆರ್ಚರ್ ಮೊಣಕೈ ನೋವಿನ ಸಮಸ್ಯೆ ಎದುರಿಸುತ್ತಿದ್ದು, ಅವರು ಫಿಟ್ ಆಗದಿದ್ದರೆ ಮಾರ್ಕ್ ವುಡ್ ಕಣಕ್ಕಿಳಿಯಬಹುದು. ಟಾಮ್ ಕರ‌್ರನ್ ಮತ್ತು ರೀಸ್ ಟಾಪ್ಲೆ ಕೂಡ ಸ್ಪರ್ಧೆಯಲ್ಲಿದ್ದಾರೆ. ಬೆನ್ ಸ್ಟೋಕ್ಸ್, ಸ್ಯಾಮ್ ಕರ‌್ರನ್, ಮೊಯಿನ್ ಅಲಿ ಅವರಂಥ ಆಲ್ರೌಂಡರ್‌ಗಳ ಬಲ ಹೊಂದಿರುವ ತಂಡದಲ್ಲಿ ನಾಯಕ ಇವೊಯಿನ್ ಮಾರ್ಗನ್ 6ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯಬೇಕಾಗಿದೆ.
ಸಂಭಾವ್ಯ ತಂಡ: ಜೇಸನ್ ರಾಯ್, ಜೋಸ್ ಬಟ್ಲರ್ (ವಿ.ಕೀ), ಡೇವಿಡ್ ಮಲಾನ್, ಜಾನಿ ಬೇರ್‌ಸ್ಟೋ, ಬೆನ್ ಸ್ಟೋಕ್ಸ್, ಇವೊಯಿನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಸ್ಯಾಮ್ ಕರ‌್ರನ್, ಕ್ರಿಸ್ ಜೋರ್ಡನ್, ಜೋಫ್ರಾ ಆರ್ಚರ್/ಮಾರ್ಕ್ ವುಡ್, ಆದಿಲ್ ರಶೀದ್.
ಮೂರು ಸಾವಿರ ರನ್ ಸನಿಹ ಕೊಹ್ಲಿ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈಗಾಗಲೆ ಸರ್ವಾಧಿಕ ರನ್ ಸ್ಕೋರರ್ ಎನಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ರಚಿಸುವ ಅವಕಾಶ ಎದುರಾಗಿದೆ. ಸರಣಿಯಲ್ಲಿ ಅವರು 72 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3 ಸಾವಿರ ರನ್ ಪೂರೈಸಿದ ಮೊದಲಿಗರೆನಿಸಲಿದ್ದಾರೆ. ಕೊಹ್ಲಿ ಇದುವರೆಗೆ ಆಡಿರುವ 85 ಟಿ20 ಪಂದ್ಯಗಳಲ್ಲಿ 50.48ರ ಸರಾಸರಿಯಲ್ಲಿ 2928 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ (2,839) ಮತ್ತು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ (2,773) ಕೊಹ್ಲಿಗೆ ಸನಿಹದಲ್ಲಿರುವ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಸರಣಿಯಲ್ಲಿ 227 ರನ್ ಗಳಿಸಿದರೆ ರೋಹಿತ್ ಕೂಡ 3 ಸಾವಿರ ರನ್ ಪೂರೈಸಬಹುದಾಗಿದೆ.
ಪ್ರೇಕ್ಷಕರ ಹಾಜರಿ
1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಂ ಟಿ20 ಸರಣಿಯ ವೇಳೆಯೂ ಶೇ. 50 ತುಂಬಲಿದೆ. ಮೊದಲ ಟಿ20 ಪಂದ್ಯದ 40ಕ್ಕೂ ಅಧಿಕ ಟಿಕೆಟ್‌ಗಳು ಗುರುವಾರದ ವೇಳೆಗೆ ಮಾರಾಟವಾಗಿದ್ದು, ಟೆಸ್ಟ್ ಸರಣಿಗಿಂತ ಹೆಚ್ಚಿನ ಪ್ರೇಕ್ಷಕರು ಇಲ್ಲಿ ಕಾಣಸಿಗುವ ನಿರೀಕ್ಷೆ ಇದೆ.
*17: ವಿರಾಟ್ ಕೊಹ್ಲಿ 17 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕರಾಗಿ 12 ಸಾವಿರ ರನ್ ಪೂರೈಸಿದ 3ನೇ ಸಾಧಕ ಎನಿಸಲಿದ್ದಾರೆ. ರಿಕಿ ಪಾಂಟಿಂಗ್ (15,440) ಮತ್ತು ಗ್ರೇಮ್ ಸ್ಮಿತ್ (14,878) ಮೊದಲಿಬ್ಬರು.
*15: ಭಾರತ ತಂಡ ತಾನಾಡಿದ ಕಳೆದ 15 ಟಿ20 ಪಂದ್ಯಗಳಲ್ಲಿ ಕೇವಲ 2ರಲ್ಲಿ ಸೋತಿದೆ. ಇಂಗ್ಲೆಂಡ್ ವಿರುದ್ಧವೂ ಆಡಿದ ಕೊನೆಯ 5 ಟಿ20 ಪಂದ್ಯಗಳಲ್ಲಿ 4ರಲ್ಲಿ ಜಯಿಸಿದೆ.
*ಐಪಿಎಲ್‌ನಿಂದ ನಮ್ಮ ತಂಡಕ್ಕೆ ಅಪಾರ ಲಾಭ ದೊರೆತಿದೆ. 2019ರ ವಿಶ್ವಕಪ್‌ನಲ್ಲಿ ನಾವು ಕಂಡ ಯಶಸ್ಸಿಗೂ ಐಪಿಎಲ್ ನೆರವಾಗಿದೆ. ಐಪಿಎಲ್ ಅನುಭವ ಅಮೂಲ್ಯವಾದುದು.
| ಇವೊಯಿನ್ ಮಾರ್ಗನ್ ಇಂಗ್ಲೆಂಡ್ ನಾಯಕ
*ಟಿ20 ವಿಶ್ವಕಪ್‌ಗೆ ನಮ್ಮ ತಂಡವೇ ಹಾಟ್ ೇವರಿಟ್ ಎಂಬುದನ್ನು ಒಪ್ಪಲಾರೆ. ಇಂಗ್ಲೆಂಡ್ ವಿಶ್ವ ನಂ. 1 ತಂಡವಾಗಿದ್ದು, ಅದನ್ನು ಸೋಲಿಸುವುದು ಕೂಡ ಸುಲಭವಲ್ಲ. ಇತರ ತಂಡಗಳೂ ಸಾಕಷ್ಟು ಸಾಮರ್ಥ್ಯ ಹೊಂದಿವೆ.
| ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ
ಮಹಿಳೆಯರ 3ನೇ ಏಕದಿನ ಇಂದು
ಮಹಿಳೆಯರ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ 3ನೇ ಪಂದ್ಯ ಲಖನೌದ ವಾಜಪೇಯಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿದೆ. 5 ಪಂದ್ಯಗಳ ಸರಣಿ ಸದ್ಯ 1-1 ಸಮಬಲದಲ್ಲಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಮಿಥಾಲಿ ರಾಜ್ ಪಡೆ 2ನೇ ಪಂದ್ಯದಲ್ಲಿ ದಿಟ್ಟ ತಿರುಗೇಟು ನೀಡಿ ಗೆದ್ದಿತ್ತು. ಸ್ಮತಿ ಮಂದನಾ ಬ್ಯಾಟಿಂಗ್ ಲಯ ಕಂಡುಕೊಂಡಿರುವುದು ಭಾರತಕ್ಕೆ ಸಮಧಾನಕರ ವಿಚಾರವಾಗಿದೆ.
ಪಂದ್ಯ ಆರಂಭ: ಬೆಳಗ್ಗೆ 9.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್