ವಿಶ್ವಕಪ್​ ಫೈನಲ್​: ಕೊಹ್ಲಿ-ರಾಹುಲ್​ ಅರ್ಧಶತಕ, ಆಸಿಸ್​ಗೆ 241 ರನ್​ಗಳ ಗುರಿ ನೀಡಿದ ಭಾರತ

Team India
Published on

ಅಹಮಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಆರಂಭಿಕ ಆಘಾತದ ಜತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯದಿಂದಾಗಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತ 241 ರನ್​ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದೆ. ವಿರಾಟ್​ ಕೊಹ್ಲಿ (54) ಮತ್ತು ಕೆ.ಎಲ್​. ರಾಹುಲ್​ (66) ಹೊರತುಪಡಿಸಿದರೆ, ಉಳಿದ ಯಾವೊಬ್ಬ ಬ್ಯಾಟರ್​ಗಳು ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ನಿಗದಿತ 50 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಭಾರತ 240 ರನ್​ ಕಲೆಹಾಕಿತು. ಈ ಮೂಲಕ ಆಸಿಸ್​ ಗೆಲುವಿಗೆ 241 ರನ್​ಗಳ ಸಾಧಾರಣ ಗುರಿಯನ್ನು ನೀಡಿದೆ. ತಂಡದ ಪರ ಶುಭಮಾನ್​ ಗಿಲ್​ ಮತ್ತು ರೋಹಿತ್​ ಶರ್ಮ ಆರಂಭಿಕರಾಗಿ ಕಣಕ್ಕಿಳಿದರು. ತಂಡದ ಮೊತ್ತ 30 ಆಗಿದ್ದಾಗ 4 ರನ್​ ಗಳಿಸಿದ್ದ ಗಿಲ್​, ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇತ್ತ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್​ ನೆರವಿನೊಂದಿಗೆ 47 ರನ್​ ಗಳಿಸಿ ಸ್ಫೋಟಕ ಆಟವಾಡುತ್ತಿದ್ದ ರೋಹಿತ್​, ಅರ್ಧ ಶತಕಕ್ಕೆ ಇನ್ನೂ ಮೂರು ರನ್​ ಬಾಕಿ ಇರುವಾಗಲೇ ಮಿಚೆಲ್​ ಸ್ಟಾರ್ಕ್​ ಓವರ್​ನಲ್ಲಿ ಆ್ಯಡಂ ಜಂಪಾಗೆ ಕ್ಯಾಚಿತ್ತು ಪೆವಲಿಯನ್​ಗೆ ಮರಳಿದರು. ಇದರಿಂದ ತಂಡಕ್ಕೆ ಕೊಂಚ ಹಿನ್ನಡೆಯಾಯಿತು.

ವಿರಾಟ್​ ಕೊಹ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್​ ಕಟ್ಟಿದರೆ, ಸಮಿಫೈನಲ್​ನಲ್ಲಿ ಸ್ಫೋಟಕ ಶತಕದೊಂದಿಗೆ ಅಬ್ಬರಿಸಿ ಬೊಬ್ಬಿರಿದಿದ್ದ ಶ್ರೇಯಸ್​ ಅಯ್ಯರ್​ ಕೇವಲ 4 ರನ್​ಗಳಿಗೆ ಔಟಾಗಿದ್ದು, ಭಾರತಕ್ಕೆ ಭಾರೀ ಆಘಾತವಾಯಿತು. ಅಲ್ಲದೆ, ಕೇವಲ 81 ರನ್​ಗೆ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಕೊಹ್ಲಿ ಮತ್ತು ರಾಹುಲ್​ ಜತೆಗೂಡಿ ಉತ್ತಮ ಜತೆಯಾಟದ ಮುನ್ಸೂಚನೆ ನೀಡಿದರು. ಆದರೆ, 64 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 54 ರನ್​ ಗಳಿಸಿ ಭರವಸೆ ಮೂಡಿಸಿದ್ದ ಕೊಹ್ಲಿ, ಔಟಾಗುವ ಮೂಲಕ ಭಾರತಕ್ಕಿದ್ದ ಬಹುದೊಡ್ಡ ಭರವಸೆ ಮಂಕಾಯಿತು. ಈ ಜೋಡಿ 68 ರನ್​ಗಳ ಜತೆಯಾಟ ನೀಡಿತ್ತು.

ಬಳಿಕ ಬಂದ ರವೀಂದ್ರ ಜಡೇಜಾ ಕೇವಲ 9 ರನ್​ಗೆ ವಿಕೆಟ್​ ಒಪ್ಪಿಸಿ, ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಮರಳಿದರು. 107 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 66 ರನ್​ಗಳಿಸಿ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದ ರಾಹುಲ್​ಗೆ ಮಿಚೆಲ್​ ಸ್ಟಾರ್ಕ್​ ಪೆವಿಲಿಯನ್​ ಹಾದಿ ತೋರಿದರು. ನೆದರ್ಲೆಂಡ್​ ವಿರುದ್ಧದ ಲೀಗ್​ ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ 102 ರನ್​ ಗಳಿಸಿದ್ದ ರಾಹುಲ್​, ಈ ಪಂದ್ಯದಲ್ಲಿ 107 ಎಸೆತಗಳಲ್ಲಿ 66 ರನ್​ ಗಳಿಸಿದರು. ಆಸಿಸ್​ ಬೌಲರ್​ಗಳನ್ನು ಎದುರಿಸಲು ರಾಹುಲ್​ ತಡಕಾಡಿದರು.

ಉಳಿದಂತೆ ಮೊಹಮ್ಮದ್​ ಶಮಿ 6 ರನ್​ ಗಳಿಸಿದರೆ, ಜಸ್​ಪ್ರೀತ್​ ಬೂಮ್ರಾ 1, ಸೂರ್ಯಕುಮಾರ್​ ಯಾದವ್​ 18 ಹಾಗೂ ಕುಲದೀಪ್​ ಯಾದವ್ 10 ರನ್ ಗಳಿಸಿ ಔಟಾದರೆ, ಮೊಹಮ್ಮದ್​ ಸಿರಾಜ್​ 9 ರನ್​ ಗಳಿಸಿ ಅಜೇಯರಾಗಿ ಉಳಿದರು.

ನಿರ್ಣಾಯಕ ಪಂದ್ಯದಲ್ಲಿ ಆಸಿಸ್​ ಪರ ಮಾರಕ ಬೌಲಿಂಗ್​ ದಾಳಿ ಮಾಡಿದ ಮಿಚೆಲ್​ ಸ್ಟಾರ್ಕ್​ ಪ್ರಮುಖ 3 ವಿಕೆಟ್​ ಕಬಳಿಸಿ ಮಿಂಚಿದರು. ನಾಯಕ ಪ್ಯಾಟ್​ ಕ್ಯುಮಿನ್ಸ್​ ಹಾಗೂ ಜೋಶ್​ ಹಜಾಲ್​ವುಡ್​ ತಲಾ 2 ವಿಕೆಟ್​ ಪಡೆದರೆ, ಗ್ಲೇನ್​ ಮ್ಯಾಕ್ಸ್​ವೆಲ್​ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್​ ಪಡೆದರು. ಕುಲದೀಪ್​ ಯಾದವ್​ ರನೌಟ್​ಗೆ ತುತ್ತಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net