

ಇಂದೋರ್: ಶ್ರೇಯಸ್ ಅಯ್ಯರ್ ಹಾಗೂ ಶುಭಮಾನ್ ಗಿಲ್ ಅವರ ಆಕರ್ಷಕ ಶತಕಗಳು ಮತ್ತು ಸ್ಲಾಗ್ ಓವರ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ ನಿನ್ನೆ (ಸೆ.24) ಇಂದೋರ್ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ ಕಲೆಹಾಕಿತು.
ಏಕದಿನ ಮಾದರಿ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಅತ್ಯಧಿಕ ರನ್ ಇದಾಗಿದೆ. ಅಲ್ಲದೆ, ನಿನ್ನೆಯ ಪಂದ್ಯದಲ್ಲಿ ಭಾರತ 18 ಸಿಕ್ಸರ್ ಸಿಡಿಸಿತು. ಈ ಮೂಲಕ ಏಕದಿನ ಪಂದ್ಯಗಳಲ್ಲಿ 3000 ಸಿಕ್ಸರ್ ಗಡಿ ದಾಟಿದ ಮೊದಲ ತಂಡ ಎಂಬ ಐತಿಹಾಸಿಕ ವಿಶ್ವದಾಖಲೆಯನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿದೆ.
ಏಕದಿನ ಪಂದ್ಯಗಳಲ್ಲಿ ಭಾರತ ಬಾರಿಸಿದ ಅತಿ ಹೆಚ್ಚು ಸಿಕ್ಸರ್‌ಗಳು
* 2013ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 19 ಸಿಕ್ಸರ್
* 2023ರಲ್ಲಿ ಇಂದೋರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 19 ಸಿಕ್ಸರ್
* 2007ರಲ್ಲಿ ಪೋರ್ಟ್ ಆಫ್ ಸ್ಪೇನ್ನಲ್ಲಿ ಬರ್ಮುಡಾ ವಿರುದ್ಧ ನಡೆದ ಪಂದ್ಯದಲ್ಲಿ 18 ಸಿಕ್ಸರ್
* 2009ರಲ್ಲಿ ಕ್ರೈಸ್ಟ್ಚರ್ಚ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 18 ಸಿಕ್ಸರ್
* 2023ರಲ್ಲಿ ಇಂದೋರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 18 ಸಿಕ್ಸರ್
ನಿನ್ನೆ ನಡೆದ ಪಂದ್ಯದಲ್ಲಿ ಒಟ್ಟು 18 ಸಿಕ್ಸರ್‌ಗಳಲ್ಲಿ ಸೂರ್ಯಕುಮಾರ್ ಯಾದವ್ 6, ಶುಭಮನ್ ಗಿಲ್ 4 ಮತ್ತು ಶ್ರೇಯಸ್ ಅಯ್ಯರ್ ಹಾಗೂ ನಾಯಕ ಕೆ.ಎಲ್. ರಾಹುಲ್ ತಲಾ 3 ಸಿಕ್ಸರ್‌ಗಗಳನ್ನು ಬಾರಿಸಿದರು. ಉಳಿದಂತೆ ಇಶಾನ್ ಕಿಶನ್ 2 ಸಿಕ್ಸರ್ ಸಿಡಿಸಿದರು. ಸೂರ್ಯಕುಮಾರ್ ಯಾದವ್ ಒಂದೇ ಓವರ್‌ನಲ್ಲಿ 4 ಸಿಕ್ಸರ್ ಬಾರಿಸಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ (ಸೆ.24) ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಶ್ರೇಯಸ್-ಗಿಲ್ ಭರ್ಜರಿ ಜತೆಯಾಟ ಹಾಗೂ ಸೂರ್ಯಕುಮಾರ್ ಯಾದವ್ (72* ರನ್, 37 ಎಸೆತ, 6 ಬೌಂಡರಿ, 6 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ 5 ವಿಕೆಟ್‌ಗೆ 399 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಆಸೀಸ್, 9 ಓವರ್‌ಗಳಲ್ಲಿ 2 ವಿಕೆಟ್‌ಗೆ 56 ರನ್‌ಗಳಿಸಿದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರಿಂದಾಗಿ ಒಂದು ಗಂಟೆ ಕಾಲ ಆಟ ಸ್ಥಗಿತಗೊಂಡಿತು. ಬಳಿಕ ಡಕ್ವತ್-ಲೂಯಿಸ್ ನಿಯಮದನ್ವಯ ಆಸೀಸ್‌ಗೆ 33 ಓವರ್‌ಗಳಲ್ಲಿ 317 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಪ್ರತಿಯಾಗಿ ಆಸ್ಟ್ರೇಲಿಯಾ 28.2 ಓವರ್‌ಗಳಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡು ಶರಣಾಯಿತು. (ಏಜೆನ್ಸೀಸ್)