ಪಾಕ್ ಕ್ರಿಕೆಟಿಗರ ಪ್ರಯಾಣಕ್ಕೆ ವೀಸಾ ಸಮಸ್ಯೆ: ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮನ ವಿಳಂಬ

New-Project-33-1
Published on

ನವದೆಹಲಿ: ಏಕದಿನ ವಿಶ್ವಕಪ್‌ಗೆ ಮುನ್ನ ಯುಎಇಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಿದ ಪೂರ್ವ ಸಿದ್ದತಾ ಶಿಬಿರವನ್ನು ರದ್ದುಗೊಳಿಸಲಾಗಿದೆ. ಪಾಕ್ ತಂಡಕ್ಕೆ ವೀಸಾ ದೊರೆಯದ ಕಾರಣ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮನ ವಿಳಂಬವಾಗಲಿದೆ ಎನ್ನಲಾಗಿದೆ. ಸೆಪ್ಟೆಂಬರ್ 27ರಂದು ಭಾರತಕ್ಕೆ ಆಗಮಿಸಬೇಕಿದ್ದ ಪಾಕ್ ತಂಡ, 29 ರಂದು ನ್ಯೂಜಿಲೆಂಡ್ ಎದುರು ತನ್ನ ಮೊದಲ ಅಭ್ಯಾಸ ಪಂದ್ಯ ಆಡಬೇಕಿದೆ.

ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಿಂದ ಪಾಕ್ ಆಟಗಾರರಿಗೆ ಇನ್ನೂ ವೀಸಾ ದೊರೆಯದ ಕಾರಣ ಶಿಬಿರವನ್ನು ರದ್ದುಗೊಳಿಸಲಾಗಿದೆ. ಯುಎಇಯಲ್ಲಿ 2 ದಿನದ ಅಭ್ಯಾಸದ ಬಳಿಕ ನೇರವಾಗಿ ಹೈದರಾಬಾದ್‌ಗೆ ಬಂದಿಳಿಯಲು ಪಾಕ್ ಸಿದ್ಧತೆ ನಡೆಸಿತ್ತು. ವೀಸಾ ಸಮಸ್ಯೆಯನ್ನು ಪಿಸಿಬಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎದುರು ಪ್ರಸ್ತಾಪಿಸಿದೆ ಎನ್ನಲಾಗಿದೆ. ಆತಿಥ್ಯ ವಹಿಸಿಕೊಂಡಿರುವ ಬಿಸಿಸಿಐ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟು 33 ಸದಸ್ಯರ ಪಾಕ್ ತಂಡ ಭಾರತಕ್ಕೆ ಆಗಮಿಸಲಿದ್ದು, ವೀಸಾ ಪಡೆಯಲು ಭಾರತೀಯ ವಿದೇಶಾಂಗ ಇಲಾಖೆ, ಗೃಹ ಹಾಗೂ ಕ್ರೀಡಾ ಸಚಿವಾಲಯದ ಅನುಮತಿ ಪಡೆದುಕೊಳ್ಳಬೇಕಾಗಿದೆ. ಟೂರ್ನಿಯಲ್ಲಿ ಭಾಗವಹಿಸುವ 9 ತಂಡಗಳಲ್ಲಿ ಪಾಕ್ ಹೊರತುಪಡಿಸಿ ಉಳಿದೆಲ್ಲ ತಂಡಗಳಿಗೆ ಈಗಾಗಲೆ ವೀಸಾ ದೊರೆತಿದೆ ಎನ್ನಲಾಗಿದೆ. 2016ರ ಟಿ20 ವಿಶ್ವಕಪ್‌ಗೆ ಪಾಕ್ ತಂಡ ಕೊನೆಯದಾಗಿ ಭಾರತ ಪ್ರವಾಸ ಕೈಗೊಂಡಿತ್ತು. ಭಾರತ-ಪಾಕ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಉಭಯ ತಂಡಗಳು ಐಸಿಸಿ ಟೂರ್ನಿ ಹೊರತುಪಡಿಸಿ ಏಷ್ಯಾಕಪ್‌ನಲ್ಲಿ ಮಾತ್ರ ಎದುರಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net