

ಬ್ಲೋಮ್ಫಾಂಟೇನ್: ನಾಯಕ ಉದಯ್ ಸಹಾರನ್ (100 ರನ್, 107 ಎಸೆತ, 9 ಬೌಂಡರಿ) ಮತ್ತು ಸಚಿನ್ ದಾಸ್ (116 ರನ್, 101 ಎಸೆತ, 11 ಬೌಂಡರಿ, 3 ಸಿಕ್ಸರ್) ಶತಕದಾಟದ ಬಲದಿಂದ ಭಾರತ ತಂಡ 19 ವಯೋಮಿತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ಸಿಕ್ಸ್ ಹಂತದ ತನ್ನ 2ನೇ ಹಾಗೂ ಅಂತಿಮ ಪಂದ್ಯದಲ್ಲಿ ನೇಪಾಳ ಎದುರು 132 ರನ್ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಅಜೇಯವಾಗಿ ಸೆಮಿಫೈನಲ್ಗೇರಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ, ಉದಯ್-ಸಚಿನ್ 4ನೇ ವಿಕೆಟ್ಗೆ ನಡೆಸಿದ 215 ರನ್ ಜತೆಯಾಟದ ಬಲದಿಂದ 5 ವಿಕೆಟ್ಗೆ 297 ರನ್ ಪೇರಿಸಿತು. ಪ್ರತಿಯಾಗಿ ನೇಪಾಳ, ಸೌಮಿ ಪಾಂಡೆ (29ಕ್ಕೆ 4) ದಾಳಿಗೆ ಕುಸಿದು 9 ವಿಕೆಟ್ಗೆ 165 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ: 5 ವಿಕೆಟ್ಗೆ 297 (ಆದರ್ಶ್ 21, ಅರ್ಶಿನ್ 18, ಉದಯ್ ಸಹಾರನ್ 100, ಸಚಿನ್ ದಾಸ್ 116, ಮುಶೀರ್ 9*, ಗುಲ್ಶನ್ ಜಾ 56ಕ್ಕೆ 3), ನೇಪಾಳ: 9 ವಿಕೆಟ್ಗೆ 165 (ದೀಪಕ್ ಬೊಹರ 22, ಅರ್ಜುನ್ 26, ದೇವ್ ಖನಲ್ 33, ದುರ್ಗೇಶ್ 29*, ಸೌಮಿ ಪಾಂಡೆ 29ಕ್ಕೆ 4, ಅರ್ಶಿನ್ 18ಕ್ಕೆ 2).
ದ. ಆಫ್ರಿಕಾ ಸೆಮೀಸ್ ಎದುರಾಳಿ?
ಭಾರತ ಜಯದೊಂದಿಗೆ ಸೂಪರ್ಸಿಕ್ಸ್ ಗ್ರೂಪ್-1ರ ಅಗ್ರಸ್ಥಾನ ಕಾಯ್ದುಕೊಂಡಿದೆ. ಪಾಕ್ ತನ್ನ ಕೊನೇ ಪಂದ್ಯದಲ್ಲಿ ಶನಿವಾರ ಬಾಂಗ್ಲಾವನ್ನು ಎದುರಿಸಲಿದೆ. ಆದರೆ ಪಾಕ್ (1.064) ಗೆದ್ದು ಅಂಕಗಳ ಸಮಬಲ ಸಾಧಿಸಿದರೂ ರನ್ರೇಟ್ನಲ್ಲಿ ಭಾರತವನ್ನು (3.980) ಹಿಂದಿಕ್ಕುವುದು ಕಠಿಣವೆನಿಸಿದೆ. ಹೀಗಾಗಿ ಭಾರತಕ್ಕೆ ಸೆಮೀಸ್ನಲ್ಲಿ ಸೂಪರ್ಸಿಕ್ಸ್ ಗ್ರೂಪ್-2ರ 2ನೇ ಸ್ಥಾನಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರಾಳಿಯಾಗುವ ನಿರೀಕ್ಷೆ ಇದೆ. ಆಸ್ಟ್ರೆಲಿಯಾ ಗ್ರೂಪ್-2ರಲ್ಲಿ ಅಗ್ರಸ್ಥಾನ ಪಡೆದಿದೆ.