

ನವದೆಹಲಿ: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದ ಆಯ್ಕೆ ಮೇ 23ಕ್ಕೆ ನಡೆಯಲಿದೆ. ಜತೆಗೆ ರೋಹಿತ್ ಶರ್ಮ ಉತ್ತರಾಧಿಕಾರಿ ಆಗುವ ಹೊಸ ಟೆಸ್ಟ್ ನಾಯಕನ ಹೆಸರನ್ನೂ ಪ್ರಕಟಿಸಲಾಗುವುದು ಎಂದು ವರದಿಯಾಗಿದೆ. ಶುಭಮಾನ್ ಗಿಲ್ ಹೊಸ ಟೆಸ್ಟ್ ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಹೊಸ ಉಪನಾಯಕನಾಗಿ ನೇಮಕಗೊಳ್ಳುವ ನಿರೀಕ್ಷೆ ಇದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಸಭೆ ನಡೆಯುವ ಸ್ಥಳ ಇನ್ನೂ ಅಂತಿಮವಾಗಿಲ್ಲ. ಆಯ್ಕೆ ಸಮಿತಿ ಸಭೆಯ ನಂತರ ಹೊಸ ಟೆಸ್ಟ್ ತಂಡದ ನಾಯಕನನ್ನು ಮಾಧ್ಯಮಗಳಿಗೆ ಪರಿಚಯಿಸಲು ಸುದ್ದಿಗೋಷ್ಠಿಯನ್ನೂ ಬಿಸಿಸಿಐ ನಡೆಸಲಿದೆ ಎನ್ನಲಾಗಿದೆ. ಟೆಸ್ಟ್ ಸರಣಿಗೆ ಮುನ್ನ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ಎ ತಂಡವನ್ನು ಬಿಸಿಸಿಐ ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.