

ಅಹಮದಾಬಾದ್: ಟಾಸ್ ಲೆಕ್ಕಾಚಾರವನ್ನು ಮತ್ತೊಮ್ಮೆ ತಲೆಕೆಳಗಾಗಿಸಿದ ಭಾರತ ತಂಡ ಟಿ20 ಸರಣಿಯ 5ನೇ ಹಾಗೂ ನಿರ್ಣಾಯಕ ಹಣಾಹಣಿಯಲ್ಲಿ 36 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈ ಮೂಲಕ ಚುಟುಕು ಸರಣಿಯನ್ನು 3-2 ರಿಂದ ವಶಪಡಿಸಿಕೊಳ್ಳುವ ಮೂಲಕ ಇದೇ ವರ್ಷ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಭರ್ಜರಿ ತಾಲೀಮು ಮಾಡಿಕೊಂಡಿತು. ಒಂದು ಹಂತದಲ್ಲಿ ಸರಣಿ ಕಳೆದುಕೊಳ್ಳುವ ಭೀತಿಯಿಂದ ಪುಟಿದೆದ್ದ ಭಾರತ ತಂಡ ಪ್ರವಾಸಿ ತಂಡಕ್ಕೆ ಸತತ ಎರಡನೇ ಸರಣಿಯಲ್ಲಿ ತಿರುಗೇಟು ನೀಡಿತು.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕ ವಿರಾಟ್ ಕೊಹ್ಲಿ (80*ರನ್, 52 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಉಪನಾಯಕ ರೋಹಿತ್ ಶರ್ಮ (64ರನ್, 34 ಎಸೆತ, 4 ಬೌಂಡರಿ, 5 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಫಲವಾಗಿ 2 ವಿಕೆಟ್‌ಗೆ 224 ರನ್ ಪೇರಿಸಿತು. ಬಳಿಕ ಡೇವಿಡ್ ಮಲಾನ್ (68ರನ್, 46 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಜೋಸ್ ಬಟ್ಲರ್ (52 ರನ್, 34 ಎಸೆತ, 2 ಬೌಂಡರಿ, 4 ಸಿಕ್ಸರ್) ಜೋಡಿಯ ಪ್ರತಿಹೋರಾಟದ ನಡುವೆಯೂ ಭುವೇಶ್ವರ್ ಕುಮಾರ್ (15ಕ್ಕೆ 2) ಹಾಗೂ ಶಾರ್ದೂಲ್ ಠಾಕೂರ್ (37ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್ 8 ವಿಕೆಟ್‌ಗೆ 188 ಮೊತ್ತ ಗಳಿಸಿತು.
ಭಾರತ ತಂಡ: 2 ವಿಕೆಟ್‌ಗೆ 224 (ರೋಹಿತ್ ಶರ್ಮ 64, ವಿರಾಟ್ ಕೊಹ್ಲಿ 80*, ಸೂರ್ಯಕುಮಾರ್ ಯಾದವ್ 32, ಹಾರ್ದಿಕ್ ಪಾಂಡ್ಯ 39*, ಆದಿಲ್ ರಶೀದ್ 31ಕ್ಕೆ 1, ಬೆನ್ ಸ್ಟೋಕ್ಸ್ 26ಕ್ಕೆ 1), ಇಂಗ್ಲೆಂಡ್: 8 ವಿಕೆಟ್‌ಗೆ 188 (ಜೋಸ್ ಬಟ್ಲರ್ 52, ಡೇವಿಡ್ ಮಲಾನ್ 68, ಬೆನ್ ಸ್ಟೋಕ್ಸ್ 14, ಸ್ಯಾಮ್ ಕರ‌್ರನ್ 14*, ಭುವನೇಶ್ವರ್ ಕುಮಾರ್ 15ಕ್ಕೆ 2, ಶಾರ್ದೂಲ್ ಠಾಕೂರ್ 45ಕ್ಕೆ 3, ಹಾರ್ದಿಕ್ ಪಾಂಡ್ಯ 34ಕ್ಕೆ 1).