ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್, ಪಿವಿ ಸಿಂಧುಗೆ ನಿರಾಸೆ, ಭಾರತದ ಹೋರಾಟ ಅಂತ್ಯ

PV SINDHU FOR WEB
Published on

ಬರ್ಮಿಂಗ್‌ಹ್ಯಾಂ: ವಿಶ್ವ ಚಾಂಪಿಯನ್ ಪಿವಿ ಸಿಂಧು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕದನದಲ್ಲಿ ಪಿವಿ ಸಿಂಧು 17-21, 9-21 ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ಪೊರ್ನ್‌ಪಾವೀ ಚೊಚುವಾಂಗ್ ಎದುರು ಕೇವಲ 43 ನಿಮಿಷಗಳಲ್ಲೇ ಶರಣಾದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಹೋರಾಟ ಕೂಡ ಅಂತ್ಯಗೊಂಡಂತಾಗಿದೆ.

ವಿಶ್ವ ನಂ.11 ಥಾಯ್ಲೆಂಡ್ ಆಟಗಾರ್ತಿ ತೋರಿದ ಚುರುಕಿನ ನಿರ್ವಹಣೆ ಎದುರು ಭಾರತದ ಆಟಗಾರ್ತಿ ಪ್ರತಿರೋಧ ತೋರಲು ವಿಫಲರಾದರು. ಪಿವಿ ಸಿಂಧು 2018ರಲ್ಲೂ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದರು. ಈ ಮೂಲಕ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು ಫೈನಲ್ ಪ್ರವೇಶಿಸುವ ಕನಸು ಕನಸಾಗಿಯೇ ಉಳಿಯಿತು. ಸ್ಪೇನ್ ತಾರೆ ಕ್ಯಾರೊಲಿನ್ ಮರಿನ್ ಸೇರಿದಂತೆ ಪ್ರಮುಖ ಆಟಗಾರ್ತಿಯರ ಗೈರಿನಲ್ಲಿ ಪಿವಿ ಸಿಂಧು ಈ ಬಾರಿ ಪ್ರಶಸ್ತಿಗೆ ಮುತ್ತಿಕ್ಕುವ ಉತ್ತಮ ಅವಕಾಶ ಹೊಂದಿದ್ದರು. 2001ರಲ್ಲಿ ಪುಲ್ಲೇಲಾ ಗೋಪಿಚಂದ್ ಗೆದ್ದ ಬಳಿಕ ಈ ಟೂರ್ನಿಯಲ್ಲಿ ಭಾರತೀಯರಿಗೆ ಪ್ರಶಸ್ತಿ ಮರೀಚಿಕೆಯಾಗಿಯೇಉಳಿದಿದೆ.

ವಿಶ್ವ ನಂ.7 ಪಿವಿ ಸಿಂಧು ಎದುರಾಳಿ ಆಟಗಾರ್ತಿ ಎದುರು ಪಂದ್ಯ ಆರಂಭಕ್ಕೂ ಮುನ್ನ 4-1 ರಿಂದ ಗೆಲುವಿನ ದಾಖಲೆ ಹೊಂದಿದ್ದರು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಹೈದರಾಬಾದ್ ಆಟಗಾರ್ತಿಗೆ 23 ವರ್ಷದ ಥಾಯ್ಲೆಂಡ್ ಆಟಗಾರ್ತಿ ಶಾಕ್ ನೀಡಿದರು. ಶುಕ್ರವಾರ ರಾತ್ರಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸಿಂಧು 16-21, 21-16, 21-19ರಿಂದ ಮೂರನೇ ಶ್ರೇಯಾಂಕಿತ ಆಟಗಾರ್ತಿ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಮಣಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net