

ನವದೆಹಲಿ: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಸಭೆ ಏಪ್ರಿಲ್ 27 ಅಥವಾ 28ರಂದು ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಮೆರಿಕ-ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಗೆ ತಂಡಗಳನ್ನು ಪ್ರಕಟಿಸಲು ಐಸಿಸಿ ಮೇ 1ರ ಗಡುವು ನಿಗದಿಪಡಿಸಿದೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಏಪ್ರಿಲ್ 27ರಂದು ನವದೆಹಲಿಯಲ್ಲಿ ಪಂದ್ಯ ಆಡಲಿದೆ. ಹೀಗಾಗಿ ರೋಹಿತ್ ಶರ್ಮ, ಆಯ್ಕೆ ಸಮಿತಿ ಸದಸ್ಯರೊಂದಿಗೆ ಕುಳಿತು ಚರ್ಚಿಸಿ ತಂಡವನ್ನು ಆರಿಸಲು ಇದುವೇ ಸೂಕ್ತ ಸ್ಥಳವೆನಿಸಿದೆ. ಆದರೆ ಮುಂಬೈ&ಡೆಲ್ಲಿ ಪಂದ್ಯಕ್ಕೆ ಮುನ್ನವೇ ಸಭೆ ನಡೆಯುವುದೇ ಅಥವಾ ಪಂದ್ಯದ ನಂತರ ಸಭೆ ನಡೆಯುವುದೇ ಎಂಬುದು ಸ್ಪಷ್ಟವಾಗಿಲ್ಲ.
ಆಯ್ಕೆ ಸಮಿತಿಯ ಸದಸ್ಯ ಅಜಿತ್ ಅಗರ್ಕರ್ ಸದ್ಯ ಕುಟುಂಬದ ಜತೆಗೆ ಬಿಡುವಿನ ಸಮಯವನ್ನು ಕಳೆಯಲು ಸ್ಪೇನ್ಗೆ ತೆರಳಿದ್ದು, ಅವರು ಮರಳಿದ ಬೆನ್ನಲ್ಲೇ ಏಪ್ರಿಲ್ 27 ಅಥವಾ 28 ಸಭೆ ನಡೆಸಲು ಸರಿಯಾದ ಸಮಯವೆನಿಸಿದೆ. ಏಪ್ರಿಲ್ 30ರಂದು ಮುಂಬೈ ತಂಡ ಲಖನೌದಲ್ಲಿ ಪಂದ್ಯ ಆಡಲಿದೆ. ಹೀಗಾಗಿ ತಂಡ ಆರಿಸಲು ಮೇ 1ರ ಅಂತಿಮ ಗಡುವಿನವರೆಗೆ ಕಾಯುವ ಬದಲಾಗಿ 2-3 ದಿನ ಮುನ್ನವೇ ತಂಡವನ್ನು ಅಂತಿಮಗೊಳಿಸಲು ಬಿಸಿಸಿಐ ಬಯಸಿದೆ.
ಒಟ್ಟು 20 ತಂಡಗಳ ಟಿ20 ವಿಶ್ವಕಪ್ ಜೂನ್ 1ರಿಂದ 29ರವರೆಗೆ ನಡೆಯಲಿದ್ದು, ಭಾರತ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
10 ಆಟಗಾರರು ಅಂತಿಮ?
ಟಿ20 ವಿಶ್ವಕಪ್ನಲ್ಲಿ ಆಡಲಿರುವ ಭಾರತ ತಂಡದ 10 ಆಟಗಾರರ ಹೆಸರು ಈಗಾಗಲೆ ಬಹುತೇಕ ಅಂತಿಮವಾಗಿದೆ ಎನ್ನಲಾಗಿದೆ. ಅವರಂದರೆ ರೋಹಿತ್ ಶರ್ಮ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಮೊಹಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ. ಈ ಪೈಕಿ ಹಾರ್ದಿಕ್ರ ಐಪಿಎಲ್ ನಿರ್ವಹಣೆ ಮತ್ತು ಫಿಟ್ನೆಸ್ ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ.