

ನವದೆಹಲಿ: ಟಿ20 ವಿಶ್ವಕಪ್ ಬೆನ್ನಲ್ಲೇ ನಡೆಯಲಿರುವ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಭಾನುವಾರ ನಡೆಯುವ ನಿರೀಕ್ಷೆ ಇದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಐಪಿಎಲ್ನಲ್ಲಿ ಮಿಂಚಿದ ಯುವ ಆಟಗಾರರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟಿ20 ಸರಣಿಯ 5 ಪಂದ್ಯಗಳು ಜುಲೈ 6, 7, 10, 13, 14ರಂದು ನಡೆಯಲಿವೆ. ಎಲ್ಲ ಪಂದ್ಯಗಳು ಹರಾರೆಯಲ್ಲೇ ನಿಗದಿಯಾಗಿವೆ. ಹಾಲಿ ಟಿ20 ವಿಶ್ವಕಪ್ನಲ್ಲಿ ಆಡುತ್ತಿರುವ ಭಾರತ ತಂಡದ 6-7 ಆಟಗಾರರಷ್ಟೇ ಜಿಂಬಾಬ್ವೆಗೆ ತೆರಳುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ಅಥವಾ ಸೂರ್ಯಕುಮಾರ್ ಯಾದವ್ ಜಿಂಬಾಬ್ವೆ ಪ್ರವಾಸಕ್ಕೆ ನಾಯಕರಾಗಿ ನೇಮಕಗೊಳ್ಳಲಿದ್ದಾರೆ ಎನ್ನಲಾಗಿದೆ.
ಐಪಿಎಲ್ನಲ್ಲಿ ಮಿಂಚಿದ ಅಭಿಷೇಕ್ ಶರ್ಮ, ನಿತೀಶ್ ರೆಡ್ಡಿ, ರಿಯಾನ್ ಪರಾಗ್, ಪ್ರಭ್ಸಿಮ್ರಾನ್ ಸಿಂಗ್ಗೂ ಅವಕಾಶ ಲಭಿಸುವ ನಿರೀಕ್ಷೆ ಇದೆ. ವಿಶ್ವಕಪ್ನ ಅಮೆರಿಕ ಚರಣದ ಬಳಿಕ ಭಾರತ ತಂಡ ತೊರೆದು ತವರಿಗೆ ಮರಳಿರುವ ಆರಂಭಿಕ ಶುಭಮಾನ್ ಗಿಲ್ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.
ಭಾರತ ತಂಡ ಮುಂದಿನ ಒಂದು ವರ್ಷದ ಅವಧಿಯಲ್ಲಿ 20 ಟಿ20 ಪಂದ್ಯಗಳನ್ನು ಆಡಲಿದೆ.
ಕನ್ನಡಿಗ ವೈಶಾಕ್ ಆಯ್ಕೆ ಸಾಧ್ಯತೆ
ಕಳೆದ ದೇಶೀಯ ಕ್ರಿಕೆಟ್ನಲ್ಲಿ ಮಿಂಚಿದ ಕರ್ನಾಟಕದ ವೇಗಿ ವೈಶಾಕ್ ವಿಜಯ್ ಕುಮಾರ್ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸಲಿದ್ದಾರೆ ಎನ್ನಲಾಗಿದೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ವಿಭಾಗದ ಸಾರಥ್ಯ ವಹಿಸುವ ಸಾಧ್ಯತೆ ಇದೆ. ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರರಾಗಿರುವ ವೇಗಿ ಖಲೀಲ್ ಅಹ್ಮದ್ ಮತ್ತು ಐಪಿಎಲ್ನಲ್ಲಿ ಆರ್ಸಿಬಿ ಪರ ಮಿಂಚಿದ ಉತ್ತರ ಪ್ರದೇಶದ ವೇಗಿ ಯಶ್ ದಯಾಳ್ಗೂ ಅವಕಾಶದ ನಿರೀಕ್ಷೆ ಇದೆ. ಆವೇಶ್ ಖಾನ್ ಮತ್ತು ಮುಕೇಶ್ ಕುಮಾರ್ ವೇಗದ ಬೌಲರ್ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾರೆ.