ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುಂದಿನ ವಾರ ಭಾರತ ತಂಡ ಪ್ರಕಟ ನಿರೀಕ್ಷೆ; ಕೊಹ್ಲಿ, ರೋಹಿತ್​ ಟಿ20 ಭವಿಷ್ಯದ ಕುತೂಹಲ!

kohli rohit web
Published on

ನವದೆಹಲಿ: ಡಿಸೆಂಬರ್​ 10ರಿಂದ ನಡೆಯಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುಂದಿನ ವಾರ ಭಾರತ ತಂಡ ಪ್ರಕಟಗೊಳ್ಳುವ ನಿರೀೆ ಇದ್ದು, ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಅವರ ಟಿ20 ಕ್ರಿಕೆಟ್​ ಭವಿಷ್ಯವನ್ನು ನಿರ್ಧರಿಸಬೇಕಾದ ಮಹತ್ವದ ಸವಾಲು ಆಯ್ಕೆಗಾರರ ಮುಂದಿದೆ.

ಪ್ರವಾಸದ ಆರಂಭದಲ್ಲಿ ಭಾರತ ತಂಡ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಇದಕ್ಕೆ ರೋಹಿತ್​, ಕೊಹ್ಲಿ ತಂಡದಲ್ಲಿ ಸ್ಥಾನ ಪಡೆದರೆ, ಮುಂದಿನ ವರ್ಷದ ಟಿ20 ವಿಶ್ವಕಪ್​ನಲ್ಲೂ ಆಡಲಿದ್ದಾರೆ ಎಂಬ ಸಂದೇಶ ರವಾನೆಯಾಗಲಿದೆ. ಒಂದು ವೇಳೆ ಸ್ಥಾನ ಪಡೆಯದಿದ್ದರೆ, ಟಿ20 ವಿಶ್ವಕಪ್​ನಲ್ಲೂ ಆಡುವ ಸಾಧ್ಯತೆ ಕಡಿಮೆಯಾಗಲಿದೆ. ಹೀಗಾಗಿ ಅಜಿತ್​ ಅಗರ್ಕರ್​ ಸಾರಥ್ಯದ ಆಯ್ಕೆ ಸಮಿತಿಯ ನಿರ್ಧಾರದ ಬಗ್ಗೆ ಕುತೂಹಲ ಹೆಚ್ಚಿದೆ.

2022ರ ಟಿ20 ವಿಶ್ವಕಪ್​ ಬಳಿಕ ರೋಹಿತ್​, ಕೊಹ್ಲಿ ಭಾರತ ಪರ ಒಂದೂ ಟಿ20 ಪಂದ್ಯ ಆಡಿಲ್ಲ. ಮುಂದಿನ ವರ್ಷ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಮುನ್ನ ಭಾರತ ತಂಡ 6 ಟಿ20 ಪಂದ್ಯ (ಆಸೀಸ್​ ಸರಣಿ ಹೊರತಾಗಿ) ಮಾತ್ರ ಆಡಲಿದೆ. ದಕ್ಷಿಣ ಆಫ್ರಿಕಾದಲ್ಲಿನ 3 ಪಂದ್ಯಗಳ ಬಳಿಕ ಜನವರಿಯಲ್ಲಿ ಅಫ್ಘಾನಿಸ್ತಾನ ಎದುರು ತವರಿನಲ್ಲಿ 3 ಪಂದ್ಯ ಆಡಲಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇವರು ಟಿ20 ಸರಣಿಯಲ್ಲಿ ಆಡದಿದ್ದರೆ ಅವರಿಬ್ಬರ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್​ ವೃತ್ತೀಜಿವನ ಮುಕ್ತಾಯಗೊಂಡಿತು ಎಂದೇ ಭಾವಿಸಬೇಕಾಗುತ್ತದೆ.

ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಹಾರ್ದಿಕ್​ ಪಾಂಡ್ಯ ದಣ ಆಫ್ರಿಕಾ ಪ್ರವಾಸಕ್ಕೆ ಫಿಟ್​ ಆಗುವುದು ಅನುಮಾನ. ಹೀಗಾಗಿ ರೋಹಿತ್​ ಸ್ಥಾನ ಪಡೆಯದಿದ್ದರೆ, ಸೂರ್ಯಕುಮಾರ್​ ಯಾದವ್​ ಟಿ20 ತಂಡದ ಹಂಗಾಮಿ ನಾಯಕರಾಗಿ ಮುಂದುವರಿಯಬಹುದು.

ಆಯ್ಕೆ ಸಮಿತಿ ಮುಂದಿನ ವಾರ ಟಿ20 ಜತೆಗೆ ಏಕದಿನ ಸರಣಿಗೂ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆ ಇದ್ದು, ಡಿಸೆಂಬರ್​ 26ರಿಂದ ನಡೆಯಲಿರುವ 2 ಪಂದ್ಯಗಳ ಟೆಸ್ಟ್​ ಸರಣಿಗೆ ತಂಡದ ಆಯ್ಕೆ ಸ್ವಲ್ಪ ವಿಳಂಬವಾಗಲಿದೆ. ಭಾರತ ಎ ತಂಡದ ದಣ ಆಫ್ರಿಕಾ ಪ್ರವಾಸದ ಬಳಿಕವೇ ಟೆಸ್ಟ್​ ತಂಡದ ಆಯ್ಕೆ ನಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net