

ಬೆಂಗಳೂರು: ಕಳೆದೊಂದು ವಾರದಿಂದ ಹರಡಿದ್ದ ಎಲ್ಲ ಗೊಂದಲಗಳಿಗೆ ಸೋಮವಾರ ತೆರೆಬಿದ್ದಿದ್ದು, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಧಿಕೃತವಾಗಿ ಮರಳಿದ್ದಾರೆ. ಹಾರ್ದಿಕ್ರನ್ನು ಮುಂಬೈಗೆ ವರ್ಗಾವಣೆ ಮಾಡಿದ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡಕ್ಕೆ ಯುವ ಆರಂಭಿಕ ಶುಭಮಾನ್ ಗಿಲ್ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ. ಇದೇ ವೇಳೆ ಆಸ್ಟ್ರೆಲಿಯಾದ ಯುವ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಮುಂಬೈನಿಂದ ಆರ್ಸಿಬಿ ತಂಡಕ್ಕೆ ವರ್ಗಾವಣೆಯೂ ಖಚಿತಗೊಂಡಿದೆ.
ಹಾರ್ದಿಕ್ ವರ್ಗಾವಣೆಗಾಗಿ ಗುಜರಾತ್ ತಂಡ ಮುಂಬೈನಿಂದ 15 ಕೋಟಿ ರೂ. ಮೊತ್ತವನ್ನು ಪಡೆದುಕೊಂಡಿದ್ದು, ಈ ವರ್ಗಾವಣೆ ಸಂಪೂರ್ಣವಾಗಿ ನಗದು ಒಪ್ಪಂದದ ಮೂಲಕವೇ ನಡೆದಿದೆ. ಇದೇ ವೇಳೆ ಗುಜರಾತ್ ತಂಡಕ್ಕೆ ವರ್ಗಾವಣೆ ಶುಲ್ಕವೂ ಪಾವತಿಯಾಗಲಿದ್ದು, ಈ ಮೊತ್ತ ಎಷ್ಟೆಂದು ಬಹಿರಂಗಪಡಿಸಲಾಗಿಲ್ಲ. ಈ ಮೊತ್ತದಲ್ಲಿ ಶೇ.50 ಪಾಲು ಹಾರ್ದಿಕ್ ಪಾಂಡ್ಯಗೂ ಸಿಗಲಿದೆ.
"ಗುಜರಾತ್ ಟೈಟಾನ್ಸ್ ತಂಡದ ಮೊದಲ ನಾಯಕನಾಗಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಎರಡೂ ಆವೃತ್ತಿಯಲ್ಲಿ ಉತ್ತಮ ನಿರ್ವಹಣೆ ತೋರಲು ನೆರವಾಗಿದ್ದಾರೆ. ಒಂದರಲ್ಲಿ ತಂಡ ಚಾಂಪಿಯನ್ ಆಗಿದ್ದರೆ, ಮತ್ತೊಂದರಲ್ಲಿ ಫೈನಲ್ಗೇರಿತ್ತು' ಎಂದು ಗುಜರಾತ್ ತಂಡದ ನಿರ್ದೇಶಕ ವಿಕ್ರಮ್ ಸೋಲಂಕಿ ತಿಳಿಸಿದ್ದಾರೆ.
ಈ ಮುನ್ನ 2015ರಿಂದ 2021ರವರೆಗೆ 7 ವರ್ಷಗಳ ಕಾಲ ಮುಂಬೈ ತಂಡದ ಭಾಗವಾಗಿದ್ದ ಹಾರ್ದಿಕ್, 4 ಬಾರಿ ಪ್ರಶಸ್ತಿ ಗೆಲುವು ಕಂಡಿದ್ದರು. ಮುಂಬೈ ತಂಡದ ಪ್ರತಿಭಾನ್ವೇಷಣೆಯಲ್ಲಿ ಬೆಳಕಿಗೆ ಬಂದಿದ್ದ ಹಾರ್ದಿಕ್, 2015ರ ಹರಾಜಿನಲ್ಲಿ ಮೊದಲ ಬಾರಿಗೆ ಕೇವಲ 10 ಲಕ್ಷ ರೂ. ಮೂಲಬೆಲೆಗೆ ಮುಂಬೈ ತಂಡವನ್ನು ಕೂಡಿಕೊಂಡಿದ್ದರು. 2022ರ ಆವೃತ್ತಿಗೆ ಮುನ್ನ ಎಲ್ಲ ತಂಡಗಳಿಗೆ ಗರಿಷ್ಠ 4 ಆಟಗಾರರನ್ನಷ್ಟೇ ರಿಟೇನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆಗ ರೋಹಿತ್ ಶರ್ಮ, ಬುಮ್ರಾ, ಸೂರ್ಯಕುಮಾರ್, ಪೊಲ್ಲಾರ್ಡ್ರನ್ನು ಉಳಿಸಿಕೊಂಡಿದ್ದ ಮುಂಬೈ, ಹಾರ್ದಿಕ್ರನ್ನು ಮೆಗಾ ಹರಾಜಿಗೆ ಬಿಟ್ಟುಕೊಟ್ಟಿತ್ತು. ಆದರೆ ಆಗ ಹೊಸದಾಗಿ ಸೇರ್ಪಡೆಗೊಂಡಿದ್ದ ಗುಜರಾತ್ ತಂಡ ಹರಾಜಿಗೆ ಮೊದಲೇ (ಬಿಸಿಸಿಐ ನಿಯಮದನ್ವಯ) ಹಾರ್ದಿಕ್ರನ್ನು ತನ್ನತ್ತ ಸೆಳೆದುಕೊಂಡಿತ್ತು.
ಭಾನುವಾರ ಆಟಗಾರರ ರಿಟೇನ್ ಪಟ್ಟಿ ಪ್ರಕಟಿಸಿದ ಬಳಿಕ ಮುಂಬೈ ತಂಡ, ಒಟ್ಟು 100 ಕೋಟಿ ರೂ. ಬಜೆಟ್ನಲ್ಲಿ ಕೇವಲ 15.25 ಕೋಟಿ ರೂ. ಉಳಿಸಿಕೊಂಡಿತ್ತು. ಆದರೆ ಈಗ 15 ಕೋಟಿ ರೂ.ಗೆ ಹಾರ್ದಿಕ್ರನ್ನು ಸೆಳೆದರೂ, ಗ್ರೀನ್ ವರ್ಗಾವಣೆಯಿಂದ ಮುಂಬೈ ಬಳಿಕ 17.75 ಕೋಟಿ ರೂ. ಉಳಿದಿದೆ. ಇತ್ತ ಆರ್ಸಿಬಿ ತಂಡದ ಉಳಿಕೆ ಬಜೆಟ್ 40.75ರಿಂದ 23.25 ಕೋಟಿ ರೂ.ಗೆ ಇಳಿದಿದೆ. ತಂಡಗಳು ಈ ಉಳಿಕೆ ಮೊತ್ತವನ್ನು ಮುಂಬರುವ ಹರಾಜಿನಲ್ಲಿ ಹೊಸ ಆಟಗಾರರ ಖರೀದಿಗೆ ವಿನಿಯೋಗಿಸಲು ಅವಕಾಶವಿದೆ.
ಎಲ್ಲ 10 ತಂಡಗಳಿಗೆ ಡಿಸೆಂಬರ್ 12ರವರೆಗೆ ಆಟಗಾರರ ವರ್ಗಾವಣೆ ಇನ್ನೂ ಅವಕಾಶವಿದ್ದು, ಡಿಸೆಂಬರ್ 19ರಂದು ದುಬೈನಲ್ಲಿ ಈ ಸಲದ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಹರಾಜು ಪ್ರಕ್ರಿಯೆ ನಿಗದಿಯಾಗಿದೆ.