ಸರಣಿ ಸೋಲಿನ ನಡುವೆ ಟೀಮ್​ ಇಂಡಿಯಾಗೆ ಮತ್ತೊಂದು ಆಘಾತ; ಚಾಂಪಿಯನ್ಸ್​ ಟ್ರೋಫಿಗೆ Jasprit Bumrah ಆಡೋದು ಡೌಟ್​

Jasprit Bumrah
Published on

ಮುಂಬೈ: ಈಚೆಗೆ ಮುಕ್ತಾಯಗೊಂಡ ಬಾರ್ಡರ್​-ಗವಾಸ್ಕರ್​ ಟ್ರೋಫಿ (Border Gavaskar Trophy) ಟೆಸ್ಟ್​ ಸರಣಿಯಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದ ವೇಗಿ ಜಸ್ಪ್ರೀತ್​ ಬುಮ್ರಾ ಪಂದ್ಯದ ನಡುವೆಯೇ ಮೈದಾನ ತೊರೆದಿದ್ದರು. ವಿರಾಟ್​ ಕೊಹ್ಲಿ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಬಾರ್ಡರ್​-ಗವಾಸ್ಕರ್​ ಟ್ರೋಫಿ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ (Jasprit Bumrah) ಆರೋಗ್ಯದ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಮುಂಬರುವ ಚಾಂಪಿಯನ್ಸ್​ ಟ್ರೋಫಿಯಲ್ಲೂ ಆಡುವುದು ಡೌಟ್​ ಎಂದು ಹೇಳಲಾಗಿದೆ.

ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೆ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ ಈಗಾಗಲೇ ತಂಡಗಳು ತಯಾರಿ ಆರಂಭಿಸಿದ್ದು, 15 ಸದಸ್ಯರ ತಂಡವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಆದರೆ, ಭಾರತದ ತಂಡದ ವಿಚಾರಕ್ಕೆ ಬರುವುದಾದರೆ ಜಸ್ಪ್ರೀತ್​ ಬುಮ್ರಾ (Jasprit Bumrah) ಇಂಗ್ಲೆಂಡ್​ ವಿರುದ್ಧದ ಸರಣಿ ಹಾಗೂ ಚಾಂಪಿಯನ್ಸ್​ ಟ್ರೋಪಿಯನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರ ಭಾರತದ ಚಿಂತೆಯನ್ನು ಹೆಚ್ಚಿಸಿದೆ.

jasprit bumrah

ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​​ ಸರಣಿಯ ಕೊನೆ ಪಂದ್ಯದ ವೇಳೆ ಜಸ್​ಪ್ರೀತ್ ಬುಮ್ರಾ (Jasprit Bumrah) ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಕೊನೆಯ ಇನಿಂಗ್ಸ್​ನಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ. ಅಲ್ಲದೇ ಇದೇ ನೋವಿನ ಕಾರಣ ಅವರು ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿದ್ದು, ಆ ಬಳಿಕ ಚಾಂಪಿಯನ್ಸ್​ ಟ್ರೋಫಿ ಭವಿಷ್ಯ ನಿರ್ಧಾರವಾಗಲಿದೆ. 

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬೆನ್ನಿನ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ (Jasprit Bumrah) ಸದ್ಯ ಚಿಕಿತ್ಸೆಗೆ ಒಳಗಾಗಿದ್ದು, ಸುಧಾರಿಸಿಕೊಂಡು ಫಿಟ್ನೆಸ್​ ಸಾಬೀತುಪಡಿಸಲು ಮೂರು ವಾರಗಳ ಸಮಯವಕಾಶ ಬೇಕೆಂದು ಹೇಳಲಾಗಿದೆ. ಇಂಗ್ಲೆಂಡ್​ ವಿರುದ್ಧದ ಸರಣಿಗೆ ಬುಮ್ರಾಗೆ ರೆಸ್ಟ್​ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಆ ಬಳಿಕ ವೈದ್ಯರು ತಪಾಸಣೆಗೆ ಒಳಪಡಿಸಲಿದ್ದಾರೆ. ಈ ಅವಧಿಯಲ್ಲಿ ಬುಮ್ರಾ ತಮ್ಮ ಫಿಟ್ನೆಸ್​ಅನ್ನು ಸಾಬೀತುಪಡಿಸಿದರೆ ಅವರು ತಂಡಕ್ಕೆ ವಾಪಸ್​ ಆಗಲಿದ್ದಾರೆ. ಇಲ್ಲವಾದಲ್ಲಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net