

ಸಿಡ್ನಿ: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-3 ಅಂತರದಿಂದ ಸೋಲುಂಡಿದ್ದು, ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಿಕೆಟ್ ಮಿಸ್ ಮಾಡಿಕೊಂಡಿದೆ. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ಗಳ ಭರ್ಜರಿ ಜಯಗಳಿಸಿದ್ದು ಬಿಟ್ಟರೆ ಟೀಮ್ ಇಂಡಿಯಾ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, 10 ವರ್ಷಗಳ ಬಳಿಕ ಟೆಸ್ಟ್ ಸರಣಿಯಲ್ಲಿ ಸೋಲುಂಡಿದೆ.
ಇನ್ನೂ ಭಾರತ ತಂಡದ ಪ್ರದರ್ಶನಕ್ಕೆ ಬರುವುದಾದರೆ ಹಿರಿಯ ಆಟಗಾರರಾದ ರೋಹಿತ್ ಹಾಗೂ ವಿರಾಟ್ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿತ್ತು. ಆದರೆ, ನಿರೀಕ್ಷೆ ಮೂಡಿಸಿದ್ದ ಈ ಇಬ್ಬರು ಆಟಗಾರರು ಭಾರೀ ನಿರಾಸೆ ಮೂಡಿಸಿದ್ದು, ಸರಣಿ ಮುಗಿದ ಬೆನ್ನಲ್ಲೇ ಇವರುಗಳ ನಿವೃತ್ತಿಗೆ ಆಗ್ರಹ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ಕೋಚ್ ಗೌತಮ್ ಗಂಭೀರ್ (Gautam Gambhir) ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾತನಾಡಿರುವ ಗಂಭೀರ್ (Gautam Gambhir), ಯಾವುದೇ ಆಟಗಾರರ ಭವಿಷ್ಯದ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ, ಅದು ಅವರಿಗೆ ಬಿಟ್ಟದ್ದು. ಅವರಿಗೆ ಹಸಿವು ಮತ್ತು ಬದ್ಧತೆ ಇದೆ - ಆಶಾದಾಯಕವಾಗಿ ಅವರು ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿರುವ ಎಲ್ಲವನ್ನೂ ಮಾಡಬಹುದು. ಡ್ರೆಸ್ಸಿಂಗ್ ರೂಮ್ನಲ್ಲಿ ವಾತಾವರಣ ಚೆನ್ನಾಗಿರಬೇಕೆಂದರೆ ನಾನು ಎಲ್ಲರಿಗೂ ಪ್ರಾಮಾಣಿಕ ಮತ್ತು ನ್ಯಾಯಯುತವಾಗಿರಬೇಕು ಎಂದು ಗಂಭೀರ್ (Gautam Gambhir) ವಿರಾಟ್ ಹಾಗೂ ರೋಹಿತ್ ನಿವೃತ್ತಿ ಕುರಿತು ಹೇಳಿದ್ದಾರೆ.
ಇನ್ನೂ ಸಿಡ್ನಿ ಟೆಸ್ಟ್ ಪಂದ್ಯದ ವಿಚಾರಕ್ಕೆ ಬರುವುದಾದರೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 185 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 157 ರನ್ಗಳನ್ನು ಗಳಿಸಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾದ ಮೇಲೆ ಹಿಡಿತ ಸಾಧಿಸಿದ್ದ ಭಾರತ ತಂಡವು ಎರಡನೇ ಇನ್ನಿಂಗ್ಸ್ನಲ್ಲಿ ನಿರೀಕ್ಷಿತ ಪ್ರದರ್ಶವನನ್ನು ನೀಡುವಲ್ಲಿ ವಿಫಲವಾಯಿತು. ಅಂತಿಮವಾಗಿ ಆಸ್ಟ್ರೇಲಿಯಾದ ವಿರುದ್ಧ 6 ವಿಕೆಟ್ಗಳ ಸೋಲನ್ನು ಕಂಡಿತ್ತು.