ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ 2ನೇ ಸ್ಥಾನಕ್ಕೆ ಕುಸಿತ; ಫೈನಲ್​ ಹಾದಿ ಕಠಿಣ...

web wtc
Published on

ಮುಂಬೈ: ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) 3ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಶೇ.74.24 ಅಂಕಗಳೊಂದಿಗೆ ನ್ಯೂಜಿಲೆಂಡ್​ ವಿರುದ್ಧದ ಸರಣಿಯನ್ನು ಆರಂಭಿಸಿತ್ತು ಮತ್ತು ಸರಣಿಯ ಮೂರೂ ಪಂದ್ಯ ಗೆದ್ದು ಫೈನಲ್​ ಪ್ರವೇಶವನ್ನು ಬಹುತೇಕ ಖಾತ್ರಿಪಡಿಸಿಕೊಳ್ಳುವ ಭರವಸೆಯಲ್ಲಿತ್ತು. ಆದರೀಗ ಸರಣಿ ಮುಗಿದಾಗ, ಸತತ 3 ಸೋಲಿನೊಂದಿಗೆ ಭಾರತದ ಅಂಕ ಗಳಿಕೆ ಶೇ.58.33ಕ್ಕೆ ಇಳಿದಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ಹಾಲಿ ಚಾಂಪಿಯನ್​ ಆಸ್ಟ್ರೆಲಿಯಾ (ಶೇ.62.50) ಅಗ್ರಸ್ಥಾನಕ್ಕೇರಿದೆ. ಶ್ರೀಲಂಕಾ (ಶೇ.55.56) 3, ನ್ಯೂಜಿಲೆಂಡ್​ (54.55) 4 ಮತ್ತು ದಕ್ಷಿಣ ಆಫ್ರಿಕಾ (ಶೇ.54.17) 5ನೇ ಸ್ಥಾನದಲ್ಲಿದೆ. ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಎಲ್ಲ 5 ತಂಡಗಳೂ ಈಗ ಫೈನಲ್​ಗೇರುವ ಅವಕಾಶ ಜೀವಂತ ಉಳಿಸಿಕೊಂಡಿವೆ.

ಡಬ್ಲ್ಯುಟಿಸಿ ಫೈನಲ್​ ಹಾದಿ ಕಠಿಣ

ಕಿವೀಸ್​ ವಿರುದ್ಧದ ಸರಣಿಯಲ್ಲಿನ ತ್ರಿವಳಿ ಶಾಕ್​ನಿಂದ ಡಬ್ಲ್ಯುಟಿಸಿಯಲ್ಲಿ ಸತತ 3ನೇ ಬಾರಿ ಫೈನಲ್​ಗೇರುವ ಭಾರತದ ಹಾದಿ ಕಠಿಣಗೊಂಡಿದೆ. ಭಾರತ ಇನ್ನು ಇತರ ಯಾವ ಫಲಿತಾಂಶಗಳನ್ನೂ ಅವಲಂಬಿಸದೆ ನೇರವಾಗಿ ಫೈನಲ್​ ಪ್ರವೇಶಿಸಬೇಕಾದರೆ ಆಸ್ಟ್ರೆಲಿಯಾ ಪ್ರವಾಸದ 5 ಟೆಸ್ಟ್​ಗಳಲ್ಲಿ 4ರಲ್ಲಿ ಗೆದ್ದು, 1ರಲ್ಲಿ ಡ್ರಾ ಸಾಧಿಸಿ 4&0ಯಿಂದ ಸರಣಿ ವಶಪಡಿಸಿಕೊಳ್ಳಬೇಕಾಗುತ್ತದೆ. ಆಗ ಶೇ. 65.79 ಅಂಕಗಳೊಂದಿಗೆ ಭಾರತ ಫೈನಲ್​ಗೇರಬಹುದಾಗಿದೆ. ಯಾಕೆಂದರೆ ಆಗ ದ. ಆಫ್ರಿಕಾಕ್ಕೆ ಮಾತ್ರ ಭಾರತಕ್ಕಿಂತ ಹೆಚ್ಚಿನ (ಶೇ.69.44) ಅಂಕ ಗಳಿಸುವ ಅವಕಾಶವಿರುತ್ತದೆ. ಇದರ ಹೊರತಾಗಿ ಭಾರತ ತಂಡ ಆಸೀಸ್​ನಲ್ಲಿ 2-3ರಿಂದ ಸರಣಿ ಸೋತರೂ ಫೈನಲ್​ಗೇರುವ ಅವಕಾಶವಿರುತ್ತದೆ. ಆದರೆ ಆಗ ಇತರ ಸರಣಿಗಳ ಫಲಿತಾಂಶವೂ ಭಾರತಕ್ಕೆ ವರವಾಗಿ ಬರಬೇಕಾಗುತ್ತದೆ.

ಭಾರತ ತಂಡ ಆಸೀಸ್​ನಲ್ಲಿ 2 ಪಂದ್ಯವನ್ನಷ್ಟೇ ಗೆದ್ದು, 3ರಲ್ಲಿ ಸೋತರೂ ಫೈನಲ್​ಗೇರಬೇಕಾದರೆ, ನ್ಯೂಜಿಲೆಂಡ್​-ಇಂಗ್ಲೆಂಡ್​ ನಡುವಿನ ಸರಣಿ 1-1ರಿಂದ ಸಮಬಲಗೊಳ್ಳಬೇಕು, ದ. ಆಫ್ರಿಕಾ ತಂಡವೂ ತವರಿನ ಕೊನೇ 2 ಸರಣಿಗಳಲ್ಲಿ 1-1ರಿಂದ ಸಮಬಲಕ್ಕೆ ತೃಪ್ತಿಪಡಬೇಕು ಮತ್ತು ಆಸೀಸ್​-ಲಂಕಾ ನಡುವಿನ ಸರಣಿ 0-0ಯಿಂದ ಡ್ರಾಗೊಳ್ಳಬೇಕಾಗುತ್ತದೆ. ಇದರ ಹೊರತಾಗಿ ಆಸೀಸ್​ ತಂಡ ಭಾರತ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 3-2ರಿಂದ ಗೆದ್ದರೆ ಡಬ್ಲ್ಯುಟಿಸಿ ಫೈನಲ್​ಗೇರಬಹುದಾಗಿದೆ. ಕಿವೀಸ್​ ತಂಡ ತವರಿನಲ್ಲೂ ಇಂಗ್ಲೆಂಡ್​ ವಿರುದ್ಧ 3-0ಯಿಂದ ಸರಣಿ ಗೆದ್ದರಷ್ಟೇ ಫೈನಲ್​ಗೇರುವ ಆಸೆ ಜೀವಂತ ಉಳಿಸಿಕೊಳ್ಳಲಿದೆ. ದ. ಆಫ್ರಿಕಾ ತಂಡ ತವರಿನ ಕೊನೇ 4 ಟೆಸ್ಟ್​ಗಳಲ್ಲಿ 3ರಲ್ಲಿ ಗೆದ್ದರೂ ಫೈನಲ್​ಗೇರಲಿದೆ. ಶ್ರೀಲಂಕಾ ತನ್ನ ಕೊನೇ 4 ಟೆಸ್ಟ್​ಗಳಲ್ಲೂ ಗೆದ್ದರೆ ಫೈನಲ್​ಗೇರಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net