ಆಸ್ಟ್ರೇಲಿಯಾ ಎದುರು ಏಕೈಕ ಟೆಸ್ಟ್​ನಲ್ಲಿ ಭಾರತದ ಮಹಿಳೆಯರಿಗೆ ಚಾರಿತ್ರಿಕ ವಿಜಯ

ind womens web
Published on

ಮುಂಬೈ: ಹರ್ಮಾನ್​ಪ್ರೀತ್​ ಕೌರ್​ ನೇತೃತ್ವದ ಭಾರತ ತಂಡ ಮಹಿಳೆಯರ ಟೆಸ್ಟ್​ ಕ್ರಿಕೆಟ್​ನಲ್ಲಿ ಆಸ್ಟ್ರೆಲಿಯಾ ಎದುರು ಮೊಟ್ಟಮೊದಲ ಗೆಲುವಿನ ಐತಿಹಾಸಿಕ ಸಾಧನೆ ಮಾಡಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಏಕೈಕ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಆಸೀಸ್​ ಎದುರು 8 ವಿಕೆಟ್​ಗಳಿಂದ ಗೆಲುವು ದಾಖಲಿಸಿ ಬೀಗಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್​ ವಿರುದ್ಧಗೂ ಗೆದ್ದಿದ್ದ ಭಾರತಕ್ಕೆ ಇದು ತವರಿನಲ್ಲಿ ಹ್ಯಾಟ್ರಿಕ್​ ಟೆಸ್ಟ್​ ಗೆಲುವಾಗಿದೆ. 2014ರಲ್ಲಿ ಕೊನೆಯದಾಗಿ ಮೈಸೂರಿನಲ್ಲಿ ಆಡಿದಾಗ ದ. ಆಫ್ರಿಕಾ ವಿರುದ್ಧವೂ ಗೆದ್ದಿತ್ತು.

4ನೇ ಹಾಗೂ ಅಂತಿಮ ದಿನದಾಟದಲ್ಲಿ 5 ವಿಕೆಟ್​ಗೆ 233 ರನ್​ಗಳಿಂದ 2ನೇ ಇನಿಂಗ್ಸ್​ ಮುಂದುವರಿಸಿದ ಆಸೀಸ್​, ಭೋಜನ ವಿರಾಮಕ್ಕೆ ಮೊದಲೇ 261 ರನ್​ಗಳಿಗೆ ಆಲೌಟ್​ ಆಯಿತು. ಸ್ನೇಹಾ ರಾಣಾ (63ಕ್ಕೆ 4), ಕನ್ನಡತಿ ರಾಜೇಶ್ವರಿ ಗಾಯಕ್ವಾಡ್​ (42ಕ್ಕೆ 2) ಮತ್ತು ಪೂಜಾ ವಸ್ತ್ರಾಕರ್​ (40ಕ್ಕೆ 1) ಆಸ್ಟ್ರೆಲಿಯಾದ ಕೊನೇ 5 ವಿಕೆಟ್​ಗಳನ್ನು ಹಂಚಿಕೊಂಡರು. ಇದರಿಂದ ಗೆಲುವಿಗೆ 75 ರನ್​ ಸವಾಲು ಪಡೆದ ಭಾರತ, 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟದಲ್ಲಿ ಇನ್ನೂ ಅರ್ಧ ದಿನದಾಟ ಬಾಕಿ ಉಳಿದಿರುವಾಗಲೇ ಗುರಿ ತಲುಪಿತು. ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ (38*) ಭಾರತದ ಸುಲಭ ಚೇಸಿಂಗ್​ಗೆ ನೆರವಾದರು.

ಇನ್ನು ಪ್ರವಾಸಿ ವಿರುದ್ಧ ಭಾರತ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ.

ಆಸ್ಟ್ರೆಲಿಯಾ: 219 ಮತ್ತು 105.4 ಓವರ್​ಗಳಲ್ಲಿ 261 (ಸುದರ್​ಲ್ಯಾಂಡ್​ 27, ಗಾರ್ಡ್​ನರ್​ 7, ಸ್ನೇಹಾ 63ಕ್ಕೆ 4, ರಾಜೇಶ್ವರಿ 42ಕ್ಕೆ 2, ಹರ್ಮಾನ್​ಪ್ರೀತ್​ 23ಕ್ಕೆ 2). ಭಾರತ: 406 ಮತ್ತು 18.4 ಓವರ್​ಗಳಲ್ಲಿ 2 ವಿಕೆಟ್​ಗೆ 75 (ಶೆಫಾಲಿ 4, ಸ್ಮೃತಿ 38*, ರಿಚಾ 13, ಜೆಮೀಮಾ 12*, ಗಾರ್ತ್​ 19ಕ್ಕೆ 1, ಗಾರ್ಡ್​ನರ್​ 18ಕ್ಕೆ 1); ಪಂದ್ಯಶ್ರೇಷ್ಠ: ಸ್ನೇಹಾ ರಾಣಾ.

1: ಆಸೀಸ್​ ವಿರುದ್ಧದ 11ನೇ ಟೆಸ್ಟ್​ನಲ್ಲಿ ಭಾರತದ ಮಹಿಳೆಯರು ಮೊದಲ ಗೆಲುವಿನ ಸಿಹಿ ಕಂಡಿದ್ದಾರೆ. ಈ ಹಿಂದೆ 1977ರಿಂದ ಆಡಿದ್ದ 10 ಟೆಸ್ಟ್​ಗಳಲ್ಲಿ ಭಾರತ 4ರಲ್ಲಿ ಸೋತು, 6ರಲ್ಲಿ ಡ್ರಾ ಸಾಧಿಸಿತ್ತು.

ಮೊದಲ ಏಕದಿನ

ಯಾವಾಗ: ಡಿ. 28

ಎಲ್ಲಿ: ವಾಂಖೆಡೆ

ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಜಿಯೋಸಿನಿಮಾ

*7: ಭಾರತ ಮಹಿಳಾ ತಂಡ ಇದುವರೆಗೆ ಆಡಿರುವ 40 ಟೆಸ್ಟ್​ಗಳಲ್ಲಿ ಇದು 7ನೇ ಗೆಲುವಾಗಿದೆ. ಉಳಿದಂತೆ 6ರಲ್ಲಿ ಸೋತಿದ್ದು, 27ರಲ್ಲಿ ಡ್ರಾ ಸಾಧಿಸಿದೆ.

*9: ಆಸ್ಟ್ರೆಲಿಯಾ ಮಹಿಳಾ ತಂಡ 9 ವರ್ಷಗಳ ಬಳಿಕ ಟೆಸ್ಟ್​ ಪಂದ್ಯ ಸೋತಿತು. 2014ರಲ್ಲಿ ಕೊನೆಯದಾಗಿ ಇಂಗ್ಲೆಮಡ್​ ವಿರುದ್ಧ ಸೋತಿದ್ದ ಆಸೀಸ್​, ನಂತರ 2ರಲ್ಲಿ ಗೆದ್ದು, 4ರಲ್ಲಿ ಡ್ರಾ ಸಾಧಿಸಿತ್ತು.

*17: ಭಾರತ ತಂಡ ಮಹಿಳಾ ಟೆಸ್ಟ್​ನಲ್ಲಿ ಕಳೆದ 17 ವರ್ಷಗಳಿಂದ ಅಜೇಯವಾಗಿದೆ. 2006ರಲ್ಲಿ ಕೊನೆಯದಾಗಿ ಆಸೀಸ್​ ವಿರುದ್ಧ ಅಡಿಲೇಡ್​ನಲ್ಲಿ ಸೋತಿತ್ತು. ನಂತರದ 8 ಟೆಸ್ಟ್​ಗಳಲ್ಲಿ 5ರಲ್ಲಿ ಗೆದ್ದು, 3ರಲ್ಲಿ ಡ್ರಾ ಸಾಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net