

ಮುಂಬೈ: ತವರಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ ಮೂರು ಸೋಲು ಅನುಭವಿಸಿ ಒತ್ತಡಕ್ಕೆ ಸಿಲುಕಿರುವ ಭಾರತದ ಮಹಿಳೆಯರ ತಂಡ, ನಾಕೌಟ್ ಹಂತಕ್ಕೇರುವ ಮೂಲಕ ಪ್ರಶಸ್ತಿ ಗೆಲುವಿನ ಆಸೆ ಜೀವಂತ ಉಳಿಸಿಕೊಳ್ಳಲು ಪುಟಿದೇಳುವ ಹಂಬಲದಲ್ಲಿದೆ. ಭಾರತ ತಂಡ ಗುರುವಾರ ನಡೆಯಲಿರುವ ತನ್ನ 6ನೇ ಲೀಗ್ ಪಂದ್ಯದಲ್ಲಿ ಟಿ20 ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ತಂಡದ ಸವಾಲು ಎದುರಿಸಲಿದೆ. ಸೆಮಿಫೈನಲ್ ಹಂತಕ್ಕೇರುವ ದೃಷ್ಟಿಯಿಂದ ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವೆನಿಸಿದೆ.
ಕಳೆದ 3 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ, ಆಸೀಸ್, ಇಂಗ್ಲೆಂಡ್ ಎದುರು ಗೆಲುವಿನ ಅವಕಾಶ ಹೊಂದಿದ್ದರೂ, ಕೊನೇಕ್ಷಣದಲ್ಲಿ ಎಡವಿದ್ದ ಹರ್ವನ್ಪ್ರೀತ್ ಪಡೆ, ಈ ಬಾರಿ ತಪು್ಪಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಬ್ಯಾಟಿಂಗ್-ಬೌಲಿಂಗ್ ವಿಭಾಗದ ಸಮತೋಲನದ ಸಾಧ್ಯವಾಗದಿರುವುದು ಭಾರತಕ್ಕೆ ದೊಡ್ಡ ಹಿನ್ನಡೆ ತಂದಿದೆ. ಈ ಬಾರಿ ಎರಡೂ ವಿಭಾಗದಿಂದ ನೈಜ ನಿರ್ವಹಣೆ ಹೊರಹೊಮ್ಮಬೇಕಿದೆ.
ಉಳಿದೆರಡೂ ಪಂದ್ಯ ಗೆದ್ದರೆ: ಬೇರೆ ಯಾವುದೇ ಲೆಕ್ಕಾಚಾರಗಳು ಇಲ್ಲದೆ ಭಾರತ ಸರಾಗವಾಗಿ ಸೆಮಿಫೈನಲ್ಗೇರಲಿದೆ. ನ್ಯೂಜಿಲೆಂಡ್ ಎದುರು ಸೋತರೆ: ಕೊನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆಲ್ಲಲೇಬೇಕಾಗುತ್ತದೆ. ಜತೆಗೆ ನ್ಯೂಜಿಲೆಂಡ್ ತನ್ನ ಕೊನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಲಿ ಎಂದು ಪ್ರಾರ್ಥಿಸಬೇಕಾಗುತ್ತದೆ.
ನ್ಯೂಜಿಲೆಂಡ್ ಎದುರು ಗೆದ್ದು, ಬಾಂಗ್ಲಾ ಎದುರು ಸೋತರೆ: ನ್ಯೂಜಿಲೆಂಡ್ ತನ್ನ ಕೊನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧವೂ ಸೋತರೆ, ಭಾರತಕ್ಕೆ ಸೆಮೀಸ್ ಹಾದಿ ಸುಗಮ. ಕೊನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ ಆಗ ಭಾರತ-ಕಿವೀಸ್ ನಡುವೆ ಉತ್ತಮ ರನ್ರೇಟ್ ಹೊಂದಿರುವ ತಂಡ ಸೆಮಿಫೈನಲ್ಗೇರುತ್ತದೆ.