ನ್ಯೂಜಿಲೆಂಡ್​ ವಿರುದ್ಧ ಸೆಮಿಫೈನಲ್​ಗೆ ಮುನ್ನ ಭಾರತಕ್ಕೆ ನೆನಪಿರಲಿ 2015, 2019ರ ವಿಶ್ವಕಪ್​ ಎಡವಟ್ಟು!

ind vs nz web1
Published on

ಮುಂಬೈ: ಭಾರತ ತಂಡ ವಿಶ್ವಕಪ್​ನಲ್ಲಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ಸೆಮಿಫೈನಲ್​ಗೇರಿರುವುದು ಇದೇ ಮೊದಲಲ್ಲ. ಭಾರತ ಸತತ 3ನೇ ಏಕದಿನ ವಿಶ್ವಕಪ್​ನಲ್ಲಿ ಈ ಸಾಧನೆ ಮಾಡುತ್ತಿದೆ. ಆದರೆ ಕಳೆದರಡು ಬಾರಿ ಸೆಮೀಸ್​ನಲ್ಲೇ ಭಾರತ ಮುಗ್ಗರಿಸಿತ್ತು. ಹೀಗಾಗಿ ಈ ಬಾರಿ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡ ಬುಧವಾರ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ಎದುರು ಕಣಕ್ಕಿಳಿಯುವ ಮುನ್ನ ಈ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ.

2015ರಲ್ಲಿ ಭಾರತ ಲೀಗ್​ನಲ್ಲಿ ಎಲ್ಲ 6 ಪಂದ್ಯ ಗೆದ್ದು ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದರೂ, ಎ ಗುಂಪಿನ 2ನೇ ಸ್ಥಾನಿ ಆಸೀಸ್​ ಎದುರು ಸೆಮೀಸ್​ನಲ್ಲಿ ಸೋತಿತ್ತು. 2019ರಲ್ಲೂ ಭಾರತವೇ ಲೀಗ್​ನಲ್ಲಿ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 1 ಸೋಲು, 1 ರದ್ದು ಸಹಿತ 15 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಆದರೆ ಸೆಮೀಸ್​ನಲ್ಲಿ 4ನೇ ಸ್ಥಾನಿ ಕಿವೀಸ್​ಗೆ ಸೋತಿತ್ತು. 2011ರಲ್ಲೂ ಲೀಗ್​ ಹಂತದ ಅಗ್ರಸ್ಥಾನಿಗಳಾದ ದಕ್ಷಿಣ ಆಫ್ರಿಕಾ ಮತ್ತು ಪಾಕ್​ ಸೆಮೀಸ್​ ದಾಟಿರಲಿಲ್ಲ ಎಂಬುದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

2019ರ ಸೋಲಿಗೆ ಸೇಡಿನ ಅವಕಾಶ

ಏಕದಿನ ವಿಶ್ವಕಪ್​ನಲ್ಲಿ ಭಾರತ-ಕಿವೀಸ್​ ಸತತ 2ನೇ ಬಾರಿಗೆ ಸೆಮಿೈನಲ್​ನಲ್ಲಿ ಮುಖಾಮುಖಿ ಆಗುತ್ತಿವೆ. 2019ರಲ್ಲಿ ಮ್ಯಾಂಚೆಸ್ಟರ್​ನಲ್ಲಿ ಮಳೆಯಿಂದಾಗಿ ಸೆಮೀಸ್​ ಪಂದ್ಯ 2 ದಿನಗಳ ಕಾಲ ನಡೆದಿತ್ತು ಮತ್ತು ಭಾರತ 18 ರನ್​ಗಳಿಂದ ಸೋತಿತ್ತು. ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಕಿವೀಸ್​ 46.1 ಓವರ್​ಗಳಲ್ಲಿ 5 ವಿಕೆಟ್​ಗೆ 211 ರನ್​ ಗಳಿಸಿದ್ದಾಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು ಮತ್ತು ಮರುದಿನಕ್ಕೆ ಆಟ ವಿಸ್ತರಿಸಲ್ಪಟ್ಟಿತು. 2ನೇ ದಿನ ಆಟ ಮುಂದುವರಿದಾಗ ಕಿವೀಸ್​ 50 ಓವರ್​ಗಳಲ್ಲಿ 8 ವಿಕೆಟ್​ಗೆ 239 ರನ್​ ಕಲೆಹಾಕಿತು. ಪ್ರತಿಯಾಗಿ ಭಾರತ 5 ರನ್​ ಪೇರಿಸುವಷ್ಟರಲ್ಲಿ ಅಗ್ರ 3 ಬ್ಯಾಟರ್​ಗಳಾದ ಕೆಎಲ್​ ರಾಹುಲ್​, ರೋಹಿತ್​ ಶರ್ಮ ಮತ್ತು ಆಗಿನ ನಾಯಕ ವಿರಾಟ್​ ಕೊಹ್ಲಿ ತಲಾ 1 ರನ್​ ಗಳಿಸಿ ನಿರ್ಗಮಿಸಿದರು. ನಂತರದಲ್ಲಿ ಧೋನಿ (50) ಮತ್ತು ರವೀಂದ್ರ ಜಡೇಜಾ (77) ಜೋಡಿ 7ನೇ ವಿಕೆಟ್​ಗೆ 104 ಎಸೆತಗಳಲ್ಲಿ 116 ರನ್​ ಸೇರಿಸಿ ಗೆಲುವಿಗಾಗಿ ಹೋರಾಡಿತು. ಆದರೆ ಜಯದಿಂದ 32 ರನ್​ ದೂರವಿದ್ದಾಗ ಜಡೇಜಾ ಔಟಾದರೆ, 24 ರನ್​ ಬೇಕಿದ್ದಾಗ ಧೋನಿ ರನೌಟಾದರು. 13 ರನ್​ ಅಂತರದಲ್ಲಿ ಕೊನೇ 4 ವಿಕೆಟ್​ ಕಳೆದುಕೊಂಡು ಭಾರತ ಹೊರಬಿದ್ದಿತ್ತು. ಆ ಸೋಲಿಗೆ ಈಗ ವಾಂಖೆಡೆಯಲ್ಲಿ ಸೇಡು ತೀರಿಸುವ ಅವಕಾಶ ಭಾರತದ ಮುಂದಿದೆ.

ಐಸಿಸಿ ಟೂರ್ನಿ ನಾಕೌಟ್​ನಲ್ಲಿ 0-3!

ಭಾರತ ತಂಡ ಐಸಿಸಿ ಟೂರ್ನಿಗಳ ನಾಕೌಟ್​ ಹಂತದಲ್ಲಿ ನ್ಯೂಜಿಲೆಂಡ್​ ಎದುರು ಇದುವರೆಗೆ ಒಂದೂ ಪಂದ್ಯ ಗೆಲ್ಲದ ಹಿನ್ನಡೆ ಹೊಂದಿದೆ. ಐಸಿಸಿ ಟೂರ್ನಿಗಳ ಮೂರೂ ನಾಕೌಟ್​ ಪಂದ್ಯಗಳಲ್ಲಿ ಭಾರತ ತಂಡ ಕಿವೀಸ್​ಗೆ ಶರಣಾಗಿದೆ. 2000ದ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ (ಆಗ ಐಸಿಸಿ ನಾಕೌಟ್​ ಟ್ರೋಫಿ) ಫೈನಲ್​ನಲ್ಲಿ ಮೊದಲ ಬಾರಿ ಮುಖಾಮುಖಿಯಾದಾಗ ಸೋತಿದ್ದ ಭಾರತ ನಂತರ, 2019ರ ಏಕದಿನ ವಿಶ್ವಕಪ್​ ಸೆಮೀಸ್​ನಲ್ಲೂ ಎಡವಿತ್ತು. ನಂತರ 2021ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ನಲ್ಲೂ ಭಾರತ ನಿರಾಸೆ ಅನುಭವಿಸಿತ್ತು. ಇದೀಗ 4ನೇ ಅವಕಾಶದಲ್ಲಿ ಇತಿಹಾಸ ಬದಲಾಯಿಸುವ ಅವಕಾಶ ಭಾರತದ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net