More

    ಮಾಸ್ಟರ್ ಬ್ಲಾಸ್ಟರ್ vs ಚೇಸ್ ಮಾಸ್ಟರ್: ಬ್ಯಾಟಿಂಗ್ ದಿಗ್ಗಜರ ಶತಕಗಳ ದರ್ಬಾರ್

    | ಪ್ರಸಾದ್ ಶೆಟ್ಟಿಗಾರ್

    ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎಂಬುದು ಕ್ರೀಡಾಲೋಕದ ಜನಪ್ರಿಯ ನಾಣ್ಣುಡಿ. ಆದರೆ ಕೆಲವೊಂದು ದಾಖಲೆಗಳು ಅಷ್ಟು ಸುಲಭವಾಗಿ ಕೈಗೆಟಕುವಂಥದ್ದಲ್ಲ. ಯಾಕೆಂದರೆ ಆ ದಾಖಲೆ ನಿರ್ವಣದಲ್ಲಿ ಅದೆಷ್ಟೋ ವರ್ಷಗಳ ಪರಿಶ್ರಮ ಇರುತ್ತದೆ. ಹೀಗಾಗಿ ಅದನ್ನು ಮುರಿಯುವವರೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ ಮತ್ತು ಪ್ರತಿಭೆಯನ್ನೂ ಒಳಗೊಂಡಿರಬೇಕಾಗುತ್ತದೆ. ಅಂಥದ್ದೇ ಪರಿಶ್ರಮ ಮತ್ತು ಪ್ರತಿಭೆಗಳು ಈಗ ಏಕದಿನ ಕ್ರಿಕೆಟ್ ಇತಿಹಾಸದ ಸರ್ವಾಧಿಕ ಶತಕದ ದಾಖಲೆಯಲ್ಲೂ ಕಾಣಿಸುತ್ತಿವೆ. ದಿಗ್ಗಜ ಬ್ಯಾಟರ್ ಸಚಿನ್ ತೆಂಡುಲ್ಕರ್ 24 ವರ್ಷಗಳ ವರ್ಣರಂಜಿತ ವೃತ್ತಿಜೀವನದಲ್ಲಿ 49 ಶತಕಗಳ ಅಮೋಘ ದಾಖಲೆಯನ್ನು ಬರೆದರು. ಅವರದೇ ಹಾದಿಯಲ್ಲಿ ಸಾಗಿ ಬಂದ ವಿರಾಟ್ ಕೊಹ್ಲಿ 16 ವರ್ಷಗಳ ವೃತ್ತಿಜೀವನದಲ್ಲೇ 35ನೇ ಜನ್ಮದಿನದ ಶುಭಸಮಯದಲ್ಲಿ ಐತಿಹಾಸಿಕ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಏಕದಿನ ವಿಶ್ವಕಪ್ ವೇದಿಕೆಯಲ್ಲಿ 49ನೇ ಶತಕ ಸಿಡಿಸುವ ಮೂಲಕ ಸಚಿನ್ ದಾಖಲೆ ಸರಿಗಟ್ಟಿದರು. ಮುಂದಿನ ದಿನಗಳಲ್ಲಿ 50ನೇ ಶತಕದೊಂದಿಗೆ ಈ ದಾಖಲೆಯನ್ನು ಮುರಿಯುವುದು ಕೂಡ ನಿಶ್ಚಿತ. ಹಾಗೆಂದ ಮಾತ್ರಕ್ಕೆ ಸಚಿನ್​ಗಿಂತ ಕೊಹ್ಲಿ ಶ್ರೇಷ್ಠರಾಗಿಬಿಡುವರೇ? ಅಥವಾ ಕೊಹ್ಲಿಗಿಂತ ಕಡಿಮೆ ಶತಕ ಸಿಡಿಸಿದ್ದರೂ ಸಚಿನ್ ಶ್ರೇಷ್ಠತೆ ಕಾಯ್ದುಕೊಳ್ಳುವರೇ? ಇದಕ್ಕೆ ಉತ್ತರ ಅಷ್ಟು ಸುಲಭವಲ್ಲ. ಯಾಕೆಂದರೆ ಇವರಿಬ್ಬರ ಬ್ಯಾಟಿಂಗ್ ಶೈಲಿ, ಕ್ರಮಾಂಕ, ಕಾಲಘಟ್ಟ, ಎದುರಾಳಿ, ಸಹ-ಆಟಗಾರರು ಭಿನ್ನ. ಕ್ರಿಕೆಟ್ ಬರೀ ಬ್ಯಾಟ್-ಬಾಲುಗಳ ಆಟವಲ್ಲ. ಇದು ಅಂಕಿ-ಅಂಶಗಳ ಆಟವೂ ಹೌದು.

    ಸಚಿನ್ ತೆಂಡುಲ್ಕರ್ 462 ಪಂದ್ಯ ಮತ್ತು 452 ಇನಿಂಗ್ಸ್ ತೆಗೆದುಕೊಂಡು ನಿರ್ವಿುಸಿದ ದಾಖಲೆಯನ್ನು ಕೊಹ್ಲಿ 289 ಪಂದ್ಯ ಮತ್ತು 277 ಇನಿಂಗ್ಸ್​ಗಳಲ್ಲೇ ಸರಿಗಟ್ಟಿದರು. ತನ್ನ ದಾಖಲೆ ಮುರಿಯಬಲ್ಲ ಆಟಗಾರರ ಪಟ್ಟಿಯಲ್ಲಿ ಸಚಿನ್ ಮೊದಲನೆಯದಾಗಿ ಕೊಹ್ಲಿ ಹೆಸರನ್ನೇ, ಬಹಳ ವರ್ಷಗಳ ಹಿಂದೆಯೇ ಹೇಳಿದ್ದರು. ಕೊಹ್ಲಿ ಕೂಡ ಸಚಿನ್ ದಾಖಲೆ ಸರಿಗಟ್ಟಿದ ಬಳಿಕ, ‘ನನ್ನ ಪಾಲಿಗೆ ಇದು ಭಾರಿ ದೊಡ್ಡ ಗೌರವ. ನನ್ನ ಹೀರೋನ ದಾಖಲೆ ಸರಿಗಟ್ಟಿರುವುದು ವಿಶೇಷವಾದುದು. ಬ್ಯಾಟಿಂಗ್ ವಿಷಯದಲ್ಲಿ ಅವರು ಪರಿಪೂರ್ಣರು. ಆದರೆ ನಾನೆಂದೂ ಅವರಷ್ಟು ಉತ್ತಮ ಬ್ಯಾಟರ್ ಆಗಲಾರೆ. ಅವರಿಂದ ಮೆಚ್ಚುಗೆ ಪಡೆಯುವುದು ನಿಜಕ್ಕೂ ವಿಶೇಷವಾದ ಕ್ಷಣ’ ಎಂದಿದ್ದರು. ಇವರಿಬ್ಬರ ವ್ಯಕ್ತಿತ್ವಗಳನ್ನು ನೋಡಿದರೆ ಹೋಲಿಕೆಗಳು ಕಾಣಿಸದು. ಇನ್ನು ಸಚಿನ್ ಆರಂಭಿಕರಾಗಿ ಶತಕಗಳ ಸುರಿಮಳೆ ಹರಿಸಿದ್ದರೆ, ಕೊಹ್ಲಿ ಅವರದು 3ನೇ ಕ್ರಮಾಂಕದಲ್ಲಿ ಬರೆದ ಸಾಧನೆ. ಸಚಿನ್ 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರೆ, ಕೊಹ್ಲಿ 19 ವಯೋಮಿತಿ ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡದೊಳಗೆ ಬಂದವರು. ಸಚಿನ್ ವೃತ್ತಿಜೀವನದ ಅಂತ್ಯದಲ್ಲಿ ಏಕದಿನ ವಿಶ್ವಕಪ್ ಗೆದ್ದರೆ, ಕೊಹ್ಲಿ ವೃತ್ತಿಜೀವನದ ಆರಂಭದಲ್ಲೇ ಏಕದಿನ ವಿಶ್ವಕಪ್ (2011) ಎತ್ತಿಹಿಡಿಯುವ ಅದೃಷ್ಟ ಒಲಿದಿತ್ತು. ಈ ವ್ಯತ್ಯಾಸಗಳ ನಡುವೆ ಇಬ್ಬರ ನಡುವೆ ಒಂದು ಪ್ರಮುಖ ಸಾಮ್ಯತೆ ಇದೆ. ಅದುವೇ ರನ್ ಮತ್ತು ಶತಕಗಳ ದಾಹ. ಅದರಿಂದಲೇ ಈಗ ಇಬ್ಬರೂ ಶತಕಗಳ ಸಾಧನೆಯಲ್ಲಿ ಸರಿಸಮಾನರಾಗಿ ನಿಂತಿರುವುದು.

    ಬದಲಾಗಿದೆ ಆಟದ ವೈಖರಿ
    ಸಚಿನ್ ವೃತ್ತಿಜೀವನ ಆರಂಭಿಸಿದ ಹೊತ್ತಿನಲ್ಲಿ ಏಕದಿನ ಕ್ರಿಕೆಟ್ ಇನ್ನೂ ವೇಗ ಪಡೆದುಕೊಂಡಿರಲಿಲ್ಲ. 1996ರ ಏಕದಿನ ವಿಶ್ವಕಪ್​ನಲ್ಲಿ ಸನತ್ ಜಯಸೂರ್ಯ-ಕಲುವಿತರಣ ಜೋಡಿ ಬಿರುಸಿನ ಆರಂಭ ಒದಗಿಸಲಾರಂಭಿಸಿದ ಬಳಿಕವೇ ಓವರ್​ಗೆ 6ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಪೇರಿಸುವ ಅಭ್ಯಾಸ ಹೆಚ್ಚಿದ್ದು. ನಂತರದಲ್ಲಿ ಶಾಹಿದ್ ಅಫ್ರಿದಿ, ವೀರೇಂದ್ರ ಸೆಹ್ವಾಗ್, ಆಡಂ ಗಿಲ್ಕ್ರಿಸ್ಟ್ ಏಕದಿನವನ್ನು ಇನ್ನಷ್ಟು ಆಕ್ರಮಣಕಾರಿಯಾಗಿಸಿದ್ದರು. ಇನ್ನು ಸಚಿನ್ ಮೊದಲಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದರು. ಹಲವಾರು ಪಂದ್ಯ ಆಡಿದ ಬಳಿಕ ಅವರು ಆರಂಭಿಕರಾಗಿದ್ದು. ಹೀಗಾಗಿ ಅವರ ಮೊದಲ ಏಕದಿನ ಶತಕ ಸಿಡಿದಿದ್ದು ಅವರಾಡಿದ 78ನೇ ಏಕದಿನ ಪಂದ್ಯದಲ್ಲಿ! ಇನ್ನು ಆಗಿನ ಪವರ್​ಪ್ಲೇ ಭಿನ್ನ ನಿಯಮಗಳನ್ನು ಒಳಗೊಂಡಿತ್ತು ಮತ್ತು ಮೊದಲ 15 ಓವರ್ ಮಾತ್ರ ಪವರ್​ಪ್ಲೇಗೆ ಸೀಮಿತವಾಗಿತ್ತು. ಆದರೆ ವಿರಾಟ್ ಕೊಹ್ಲಿ ಆಡಲಾರಂಭಿಸಿದಾಗ ಟಿ20 ಕ್ರಿಕೆಟ್ ಪ್ರಭಾವದಿಂದ ಏಕದಿನ ಕ್ರಿಕೆಟ್ ಕೂಡ ಹೆಚ್ಚಿನ ವೇಗ ಪಡೆದುಕೊಂಡಿತ್ತು. ಕೊಹ್ಲಿ 13ನೇ ಇನಿಂಗ್ಸ್​ನಲ್ಲೇ ಮೊದಲ ಶತಕ ಸಿಡಿಸಿದರು. ಸಚಿನ್ ವೃತ್ತಿಜೀವನದ ಉತ್ತುಂಗದ ಸಮಯದಲ್ಲಿ ಡಿಆರ್​ಎಸ್ ಇದ್ದಿದ್ದರೆ, ಹಲವು ಬಾರಿ ವಿವಾದಾತ್ಮಕ ತೀರ್ಪಗಳಿಗೆ ಔಟಾಗುವುದನ್ನೂ ತಪ್ಪಿಸಬಹುದಾಗಿತ್ತು.

    ಬ್ಯಾಟ್ಸ್​ಮನ್​ಗಳ ಆಟವಾಗಿದೆ ಕ್ರಿಕೆಟ್
    ಇನಿಂಗ್ಸ್ ಒಂದರ 10 ವಿಕೆಟ್​ಗಳಿಗೆ ಬದಲಾಗಿ ಬೌಂಡರಿ-ಸಿಕ್ಸರ್​ಗಳ ಅಬ್ಬರವೇ ಕ್ರಿಕೆಟ್​ಪ್ರೇಮಿಗಳನ್ನು ಹೆಚ್ಚಾಗಿ ಸೆಳೆಯುತ್ತದೆ. ಇದೇ ಕಾರಣಕ್ಕಾಗಿ ಐಸಿಸಿ, ಸೀಮಿತ ಓವರ್ ಆಟವನ್ನು ಈಗಾಗಲೇ ಬಹುತೇಕ ಬ್ಯಾಟರ್​ಗಳ ಆಟವಾಗಿ ಬದಲಾಯಿಸಿದೆ. ಸಚಿನ್ ಮತ್ತು ಕೊಹ್ಲಿ ಆಡಿದ ಸಮಯದಲ್ಲಿ ಇತರ ಬ್ಯಾಟರ್​ಗಳಿಂದಲೂ ಸಿಡಿದ ಶತಕಗಳ ಲೆಕ್ಕಾಚಾರವೂ ಕ್ರಿಕೆಟ್ ಹೇಗೆ ಬ್ಯಾಟ್ಸ್​ಮನ್​ಗಳ ಆಟವಾಗಿ ಬದಲಾಗುತ್ತ ಬಂದಿದೆ ಎಂಬುದನ್ನು ತೋರಿಸುತ್ತದೆ. ಸಚಿನ್ 463 ಏಕದಿನ ಪಂದ್ಯವಾಡಿದ ಸಮಯದಲ್ಲಿ ಒಟ್ಟು 237 ಶತಕ ಸಿಡಿದಿದ್ದರೆ, ಕೊಹ್ಲಿ ಆಡಿದ 289 ಪಂದ್ಯಗಳ ಸಮಯದಲ್ಲಿ ಒಟ್ಟು 229 ಶತಕಗಳು ಸಿಡಿದಿವೆ. ಅಂದರೆ ಸಚಿನ್ ಸಮಯದಲ್ಲಿ ಪ್ರತಿ 1.96 ಪಂದ್ಯಕ್ಕೊಂದು ಶತಕ ದಾಖಲಾಗುತ್ತಿದ್ದರೆ, ಕೊಹ್ಲಿ ಸಮಯದಲ್ಲಿ ಪ್ರತಿ 1.26 ಪಂದ್ಯಕ್ಕೊಂದು ಶತಕ ಸಿಡಿಯುತ್ತಿವೆ. ಸಚಿನ್ ಆಡಿದ ಪಂದ್ಯಗಳಲ್ಲಿ ಭಾರತ ತಂಡದ ಇತರ ಬ್ಯಾಟರ್​ಗಳಿಂದ 131 ಶತಕಗಳು ಸಿಡಿದಿದ್ದರೆ, ಕೊಹ್ಲಿ ಆಡಿದ ಪಂದ್ಯಗಳಲ್ಲಿ ಇತರ ಭಾರತೀಯರಿಂದ 137 ಶತಕಗಳು ಸಿಡಿದಿವೆ. ಸಚಿನ್ ಪ್ರತಿ 9.22 ಇನಿಂಗ್ಸ್ ಗೊಂದು ಶತಕ ಸಿಡಿಸಿದ್ದರೆ, ಕೊಹ್ಲಿ ಪ್ರತಿ 5.65 ಇನಿಂಗ್ಸ್​ಗೊಂದು ಶತಕ ಸಿಡಿಸಿದ್ದಾರೆ.

    ಚೇಸಿಂಗ್​ನಲ್ಲಿ ಕೊಹ್ಲಿ ಕಿಂಗ್
    ಇದುವರೆಗಿನ 49 ಶತಕಗಳ ಪೈಕಿ ಕೊಹ್ಲಿ ಚೇಸಿಂಗ್ ವೇಳೆ ಸರ್ವಾಧಿಕ 27 ಶತಕ ಸಿಡಿಸಿದ್ದಾರೆ. ಈ ಪೈಕಿ ಅವರ 23 ಶತಕಗಳು ಗೆಲುವು ತಂದುಕೊಟ್ಟಿವೆ. ಇನ್ನು ಸಚಿನ್ ಚೇಸಿಂಗ್ ವೇಳೆ 17 ಶತಕ ಸಿಡಿಸಿದ್ದರೆ, ಈ ಪೈಕಿ 14ರಲ್ಲಿ ಗೆದ್ದು, 3ರಲ್ಲಷ್ಟೇ ಸೋಲು ಕಂಡಿದ್ದಾರೆ.

    ತವರು-ವಿದೇಶದಲ್ಲಿ
    ಒಟ್ಟು 49 ಶತಕಗಳ ಪೈಕಿ ತವರುನೆಲ ಭಾರತದಲ್ಲಿ ಸಚಿನ್ 20 ಮತ್ತು ಕೊಹ್ಲಿ 23 ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಸಚಿನ್ ಉಳಿದ 29 ಶತಕಗಳನ್ನು 16 ಭಿನ್ನ ದೇಶಗಳಲ್ಲಿ ದಾಖಲಿಸಿದ್ದರೆ, ಕೊಹ್ಲಿ ಉಳಿದ 26 ಶತಕಗಳನ್ನು 12 ದೇಶಗಳಲ್ಲಿ ದಾಖಲಿಸಿದ್ದಾರೆ.

    ಎದುರಾಳಿ ಬೌಲಿಂಗ್
    ಸಚಿನ್ ಕಾಲದಲ್ಲಿ ಎದುರಾಳಿ ಬೌಲರ್​ಗಳ ಸವಾಲು ಕಠಿಣವಾಗಿತ್ತು. ವಾಸಿಂ ಅಕ್ರಮ್ ವಕಾರ್ ಯೂನಿಸ್, ಶೋಯಿಬ್ ಅಖ್ತರ್, ಬ್ರೆಟ್ ಲೀ, ಗ್ಲೆನ್ ಮೆಕ್​ಗ್ರಾಥ್, ಶೇನ್ ವಾರ್ನ್ ಮುಂತಾದ ಬೌಲರ್​ಗಳು ಅಪಾಯಕಾರಿಯಾಗಿದ್ದರು. ಹಾಗೆಂದು ಕೊಹ್ಲಿಗೂ ಎದುರಾಳಿ ಬೌಲಿಂಗ್ ಸವಾಲು ಸುಲಭವಾದುದಲ್ಲ. ಮಿಚೆಲ್ ಜಾನ್ಸನ್, ಮಿಚೆಲ್ ಸ್ಟಾರ್ಕ್, ಲಸಿತ್ ಮಾಲಿಂಗ ಸಹಿತ ಕೆಲ ಬೌಲರ್​ಗಳು ಕೊಹ್ಲಿ ಪಾಲಿಗೂ ಕಂಟಕವಾಗಿದ್ದಾರೆ. ಇಬ್ಬರೂ ತಮ್ಮ ಕಾಲದ ಪ್ರಮುಖ ತಂಡಗಳ ವಿರುದ್ಧವೇ ಹೆಚ್ಚಿನ ಶತಕ ಸಿಡಿಸುವುದನ್ನು ಆನಂದಿಸಿದ್ದಾರೆ. ಆಸೀಸ್ ಎದುರು ಸಚಿನ್ 9 ಮತ್ತು ಕೊಹ್ಲಿ 8 ಶತಕ ಸಿಡಿಸಿರುವುದು ಇದಕ್ಕೆ ಸಾಕ್ಷಿ. ಶ್ರೀಲಂಕಾ ಎದುರು ಕೊಹ್ಲಿ 10 ಮತ್ತು ಸಚಿನ್ 8 ಶತಕ ಸಿಡಿಸಿದ್ದಾರೆ.

    ನರ್ವಸ್ ನೈಂಟಿ
    ಸಚಿನ್ ವೃತ್ತಿಜೀವನದಲ್ಲಿ ನರ್ವಸ್ ನೈಂಟಿ ಸಾಕಷ್ಟು ಕಾಡಿದೆ. ಏಕದಿನ ಕ್ರಿಕೆಟ್​ನಲ್ಲೇ 18 ಬಾರಿ 90ರ ಗಡಿ ದಾಟಿದ ಬಳಿಕ 100 ರನ್ ಪೂರೈಸುವುದರೊಳಗೆ ಔಟಾಗಿದ್ದಾರೆ ಅಥವಾ ಅಜೇಯರಾಗಿ ಉಳಿದಿದ್ದಾರೆ. ಕೊಹ್ಲಿಗೆ ನರ್ವಸ್ ನೈಂಟಿ ಕಾಡಿದ್ದು ಕಡಿಮೆಯಾದರೂ, ಅವರೂ 7 ಬಾರಿ 100ರ ಗಡಿಯಲ್ಲಿ ಔಟಾಗಿದ್ದಾರೆ ಅಥವಾ ಅಜೇಯರಾಗಿದ್ದಾರೆ. ಒಂದು ವೇಳೆ ಸಚಿನ್ ಆ 18 ಸಲವೂ ಶತಕ ಪೂರೈಸುವಲ್ಲಿ ಯಶಸ್ವಿಯಾಗಿದ್ದರೆ, ಅವರ ದಾಖಲೆ ಸರಿಗಟ್ಟಲು ಕೊಹ್ಲಿಗೆ ಇನ್ನೂ 3-4 ವರ್ಷಗಳೇ ಬೇಕಾಗುತ್ತಿದ್ದವೋ ಏನೋ?

    ವಿರಾಟ್ ಕೊಹ್ಲಿಗೆ ಮರುಜನ್ಮ ನೀಡಿದ ಸೂಪರ್ ಮ್ಯಾನ್ ಇವರೆ ನೋಡಿ..!

    ಮ್ಯಾಕ್ಸಿಗೆ ದ್ವಿಶತಕ ಬಾರಿಸಿದ್ದು ತುಂಬಾ ಬೇಜಾರಾಗಿದೆಯಂತೆ! ಕೊಟ್ಟ ಕಾರಣ ಹೀಗಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts