ಭಾರತಕ್ಕೆ ಇಂದು ನೆದರ್ಲೆಂಡ್​ ಎದುರು ಕೊನೇ ಲೀಗ್​ ಪಂದ್ಯ; ಬೆಂಗಳೂರಿನಲ್ಲೂ ಗೆಲುವಿನ ಪಟಾಕಿ ಸಿಡಿಸುವ ತವಕ

ind vs neth web
Published on

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಭಾರತೀಯರಿಗೆ ಸತತ 9ನೇ ಗೆಲುವಿನ ಉಡುಗೊರೆ ನೀಡಲು ರೋಹಿತ್​ ಶರ್ಮ ಬಳಗ ಸಿದ್ಧಗೊಂಡಿದೆ. ಸರ್ವಾಂಗೀಣ ನಿರ್ವಹಣೆಯೊಂದಿಗೆ 3ನೇ ಬಾರಿ ಏಕದಿನ ವಿಶ್ವಕಪ್​ ಪ್ರಶಸ್ತಿ ಗೆಲುವಿನತ್ತ ಅಜೇಯವಾಗಿ ಮುನ್ನುಗ್ಗುತ್ತಿರುವ ಟೀಮ್​ ಇಂಡಿಯಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ತನ್ನ 9ನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ನೆದರ್ಲೆಂಡ್​ ತಂಡವನ್ನು ಎದುರಿಸಲಿದೆ. ಅಂಕಪಟ್ಟಿಯ ಅಗ್ರ ಮತ್ತು ಕೊನೇ ಸ್ಥಾನಿ ತಂಡಗಳ ನಡುವಿನ ಈ ಮುಖಾಮುಖಿಯಲ್ಲಿ ಆತಿಥೇಯ ಭಾರತವೇ ಹಾಟ್​ ಫೇವರಿಟ್​ ತಂಡವಾಗಿದ್ದು, ಅಜೇಯವಾಗಿ ಲೀಗ್​ ಅಭಿಯಾನ ಮುಗಿಸುವ ಮೂಲಕ ಸೆಮಿಫೈನಲ್​ ಪಂದ್ಯದಲ್ಲಿ ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​ ತಂಡವನ್ನು ಎದುರಿಸಲು ವಿಶ್ವಾಸದಿಂದಲೇ ಸಜ್ಜಾಗಲಿದೆ.

ಭಾರತ ತಂಡ ಕಳೆದ 8 ಲೀಗ್​ ಪಂದ್ಯಗಳನ್ನು ಗೆದ್ದ ರೀತಿಯನ್ನು ನೋಡಿದರೆ, ಇನ್ನು ಟ್ರೋಫಿ ಗೆಲುವೊಂದನ್ನು ಬಿಟ್ಟು ವಿಶ್ವಕಪ್​ನಲ್ಲಿ ಬೇರಾವುದೇ ಸಾಧನೆ ಅಭಿಮಾನಿಗಳಿಗೆ ಸಮಾಧಾನ ನೀಡದು. ಬ್ಯಾಟಿಂಗ್​ ವಿಭಾಗ ಯಾವುದೇ ರೀತಿಯ ಸಂಕಟದಿಂದ ಮೇಲೆದ್ದು ಬರುವ ಛಾತಿ ತೋರಿಸಿದ್ದರೆ, ಬೌಲಿಂಗ್​ ವಿಭಾಗ ಎದುರಾಳಿಯ ಪಾಲಿಗೆ ದುಃಸ್ವಪ್ನವೆನಿಸಿದೆ. ಸೆಮಿಫೈನಲ್​ ಸವಾಲಿಗೆ ಮುನ್ನ ಔಪಚಾರಿಕವೆನಿಸಿರುವ ನೆದರ್ಲೆಂಡ್​ ವಿರುದ್ಧದ ಕಾದಾಟದಲ್ಲಿ ಭಾರತ ತಂಡ ಮತ್ತೊಮ್ಮೆ ಅಬ್ಬರಿಸುವ ಹಂಬಲದಲ್ಲಿದೆ. ಈ ಮೂಲಕ ಅಜೇಯವಾಗಿ ವಿಶ್ವಕಪ್​ ಗೆದ್ದ ಮೂರನೇ ತಂಡವೆನಿಸುವ ದಾಖಲೆಯ ಮೇಲೂ ಕಣ್ಣಿಡಲಿದೆ.

ಆಫ್ರಿಕಾ ವಿರುದ್ಧ ಕೋಲ್ಕತದಲ್ಲಿ ಆಡಿದ ಬಳಿಕ ಒಂದು ವಾರದ ವಿಶ್ರಾಂತಿ ಪಡೆದಿರುವ ಭಾರತ ತಂಡ ಈ ಪಂದ್ಯದ ಬಳಿಕ 3 ದಿನಗಳ ಅಂತರದಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೆಮಿಫೈನಲ್​ ಪಂದ್ಯ ಆಡಬೇಕಾಗಿದೆ.

ಅತ್ತ, ಟೂರ್ನಿಗೆ ಮುನ್ನ ಬೆಂಗಳೂರಿನಲ್ಲೇ ಒಂದು ತಿಂಗಳ ಕಾಲ ಅಭ್ಯಾಸ ನಡೆಸಿದ್ದ ನೆದರ್ಲೆಂಡ್​ ತಂಡವೀಗ ಇಲ್ಲೇ ತನ್ನ ವಿಶ್ವಕಪ್​ ಅಭಿಯಾನವನ್ನು ಮುಗಿಸುತ್ತಿದೆ. ದಣ ಆಫ್ರಿಕಾ ವಿರುದ್ಧದ ಏಕೈಕ ಗೆಲುವಿನಿಂದ ಗಮನಸೆಳೆದಿದ್ದ ಡಚ್ಚರು, ಆತಿಥೇಯರ ಎದುರಲ್ಲೂ ದಿಟ್ಟ ನಿರ್ವಹಣೆ ತೋರುವ ಹಂಬಲದಲ್ಲಿದ್ದಾರೆ.

ವಿಶ್ವಕಪ್​ ಮುಖಾಮುಖಿ: 2

ಭಾರತ: 2, ನೆದರ್ಲೆಂಡ್​: 0

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ಕೊಹ್ಲಿ ಶತಕಗಳ ಅರ್ಧಶತಕ ನಿರೀಕ್ಷೆ

ದಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ದಿಗ್ಗಜ ಸಚಿನ್​ ತೆಂಡುಲ್ಕರ್​ರ 49 ಶತಕಗಳ ದಾಖಲೆ ಸರಿಗಟ್ಟಿರುವ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ, ಡಚ್ಚರ ಎದುರು "ಶತಕಗಳ ಅರ್ಧಶತಕ' ಪೂರೈಸುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ. ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವಾಗ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಅಬ್ಬರಿಸಿದ್ದರೂ, ಇಲ್ಲಿ ಇದುವರೆಗೆ ಆಡಿರುವ 6 ಏಕದಿನ ಪಂದ್ಯಗಳಲ್ಲಿ 1 ಅರ್ಧಶತಕ ಸಹಿತ ಕೇವಲ 152 ರನ್​ ಗಳಿಸಿದ್ದಾರೆ. ಹೀಗಾಗಿ, ಚಿನ್ನಸ್ವಾಮಿ ಮೈದಾನದ ಏಕದಿನ ಶತಕದ ಕೊರತೆಯನ್ನು ಈ ಬಾರಿ ನೀಗಿಸುವ ನಿರೀಕ್ಷೆ ಇಡಬಹುದು. ವಿಶ್ವಕಪ್​ನಲ್ಲಿ ಮೊದಲ ಬಾರಿಗೆ 500ಕ್ಕಿಂತ ಹೆಚ್ಚು ರನ್​ ಸೇರಿಸಿದ ಉತ್ತಮ ಲಯದಲ್ಲೂ ಇದ್ದಾರೆ.

ಟೀಮ್​ ನ್ಯೂಸ್​:

ಭಾರತ: ಸಂಪೂರ್ಣವಾಗಿ ಔಪಚಾರಿಕವೆನಿಸಿರುವ ಪಂದ್ಯದಲ್ಲಿ ಪ್ರಮುಖರಿಗೆ ವಿಶ್ರಾಂತಿ ನೀಡುವ ಅವಕಾಶವಿದ್ದರೂ, ಭಾರತ ತಂಡ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಹೆಚ್ಚೆಂದರೆ ವೇಗಿಗಳಿಗೆ ವಿಶ್ರಾಂತಿ ನೀಡಬಹುದು. ಈ ನಿಟ್ಟಿನಲ್ಲಿ ಜಸ್​ಪ್ರೀತ್​ ಬುಮ್ರಾ ಅಥವಾ ಮೊಹಮದ್​ ಸಿರಾಜ್​ ಹೊರಗುಳಿದರೆ, ಕನ್ನಡಿಗ ಪ್ರಸಿದ್ಧಕೃಷ್ಣ ಅಥವಾ ಶಾರ್ದೂಲ್​ ಠಾಕೂರ್​ ಅವಕಾಶ ಪಡೆಯಬಹುದು.

ನೆದರ್ಲೆಂಡ್​: ಬೆನ್ನುನೋವಿನಿಂದಾಗಿ ವೇಗಿ ರ್ಯಾನ್​ ಕ್ಲೇನ್​ 15ರ ಬಳಗದಿಂದ ಹೊರಬಿದ್ದಿದ್ದು, ಯುವ ಬ್ಯಾಟರ್​ ನೋಹ್​ ಕ್ರೋಸ್​ ಸ್ಥಾನ ಪಡೆದಿದ್ದಾರೆ. ಕೇವಲ 1 ಏಕದಿನ ಪಂದ್ಯವಾಡಿದ ಅನುಭವ ಹೊಂದಿರುವ ಕ್ರೋಸ್​, ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ರನ್​ಮಳೆ ನಿರೀಕ್ಷೆ

ಚಿನ್ನಸ್ವಾಮಿಯಲ್ಲಿ ನಡೆದ ಕಿವೀಸ್​ ತಂಡದ ಕಳೆದೆರಡು ಪಂದ್ಯಗಳಿಗೆ ಮಳೆ ಭೀತಿ ಕಾಡಿತ್ತು. ಆದರೆ ಈ ಬಾರಿ ಮಳೆ ಭೀತಿ ಇಲ್ಲ. ಅದಕ್ಕೆ ಬದಲಾಗಿ ರನ್​ಮಳೆಯ ನಿರೀಕ್ಷೆ ಹೆಚ್ಚಿದೆ. ವಿಶ್ವಕಪ್​ನಲ್ಲಿ ಈ ಮುನ್ನ ಇಲ್ಲಿ ನಡೆದ 4 ಪಂದ್ಯಗಳಲ್ಲಿ 3ರಲ್ಲಿ ಚೇಸಿಂಗ್​ ಮಾಡಿದ ತಂಡವೇ ಜಯಿಸಿದೆ.

ಸರ್ವಾಂಗೀಣ ನಿರ್ವಹಣೆಯ ಬಲ

ಭಾರತ ತಂಡದ ಆಟಗಾರರು ವಿಶ್ವಕಪ್​ನಲ್ಲಿ ಇದುವರೆಗೆ ಸಂಟಿತ ನಿರ್ವಹಣೆ ತೋರಿದ್ದು, ಪ್ರತಿಯೊಬ್ಬರೂ ಗೆಲುವಿಗೆ ಉತ್ತಮ ಕಾಣಿಕೆಯನ್ನೇ ನೀಡಿದ್ದಾರೆ. ಬ್ಯಾಟಿಂಗ್​ನಲ್ಲಿ ವಿರಾಟ್​ ಕೊಹ್ಲಿ (543 ರನ್​), ರೋಹಿತ್​ ಶರ್ಮ (442), ಕೆಎಲ್​ ರಾಹುಲ್​ (245), ಶ್ರೇಯಸ್​ ಅಯ್ಯರ್​ (293), ಶುಭಮಾನ್​ ಗಿಲ್​ (219), ರವೀಂದ್ರ ಜಡೇಜಾ (111) ಉತ್ತಮ ನಿರ್ವಹಣೆ ತೋರಿದ್ದರೆ, ಸೂರ್ಯಕುಮಾರ್​ ಮಧ್ಯಮ ಕ್ರಮಾಂಕದಲ್ಲಿ ಆಡಿದ 4 ಪಂದ್ಯಗಳಲ್ಲಿ 85 ರನ್​ ಬಾರಿಸಿದ್ದಾರೆ. ಬೌಲಿಂಗ್​ನಲ್ಲಿ ಮೊಹಮದ್​ ಶಮಿ (16 ವಿಕೆಟ್​), ಜಸ್​ಪ್ರೀತ್​ ಬುಮ್ರಾ (15), ರವೀಂದ್ರ ಜಡೇಜಾ (14), ಕುಲದೀಪ್​ ಯಾದವ್​ (12), ಮೊಹಮದ್​ ಸಿರಾಜ್​ (10) ಅಪಾಯಕಾರಿ ಎನಿಸಿದ್ದಾರೆ. ವಿಕೆಟ್​ ಹಿಂದೆ ರಾಹುಲ್​ 9 ಕ್ಯಾಚ್​, 1 ಸ್ಟಂಪಿಂಗ್​ ಮೂಲಕ ಬೌಲರ್​ಗಳಿಗೆ ಬಲ ಒದಗಿಸಿದ್ದಾರೆ.

*9: ಭಾರತ ಈ ಪಂದ್ಯ ಗೆದ್ದರೆ ವಿಶ್ವಕಪ್​ ಇತಿಹಾಸದಲ್ಲಿ ಗರಿಷ್ಠ ಪಂದ್ಯ ಗೆದ್ದ ದಾಖಲೆ ಬರೆಯಲಿದೆ. 2003ರಲ್ಲಿ ಸತತ 8 ಪಂದ್ಯ ಗೆದ್ದಿರುವ ದಾಖಲೆಯನ್ನು ಸದ್ಯ ಸರಿಗಟ್ಟಿದೆ. 2003 ಮತ್ತು 2007ರಲ್ಲಿ ಆಸೀಸ್​ ಸತತ 11 ಪಂದ್ಯ ಗೆದ್ದಿರುವುದು ವಿಶ್ವಕಪ್​ ದಾಖಲೆಯಾಗಿದೆ.

*2: ಉಭಯ ತಂಡಗಳು ವಿಶ್ವಕಪ್​ ಹೊರತಾಗಿ ಬೇರೆಲ್ಲೂ ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿಲ್ಲ. 2003 ಮತ್ತು 2011ರ ವಿಶ್ವಕಪ್​ ಪಂದ್ಯಗಳಲ್ಲಿ ಭಾರತವೇ ಗೆಲುವಿನ ನಗೆ ಬೀರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net