ಇಂದಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ | ಹಾರ್ದಿಕ್ ಪಾಂಡ್ಯ ವಾಪಸ್ ಧರ್ಮಶಾಲಾದಲ್ಲಿ ಮೊದಲ ಕದನ

INDIA TEAM
Published on

ಧರ್ಮಶಾಲಾ: ವಿಶ್ವದೆಲ್ಲೆಡೆ ಕ್ರೀಡಾ ಚಟುವಟಿಕೆಗಳಿಗೆ ಕರೊನಾ ವೈರಸ್ ಕಳವಳ ಕಾಡುತ್ತಿರುವ ನಡುವೆ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ಮತ್ತೆ ಆರಂಭಗೊಳ್ಳುತ್ತಿದೆ. ನ್ಯೂಜಿಲೆಂಡ್ ಪ್ರವಾಸದ ವೇಳೆ ಚುಟುಕು ಕ್ರಿಕೆಟ್​ನಲ್ಲಿ ಯಶ ಕಂಡರೂ ಏಕದಿನ, ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲಿನೊಂದಿಗೆ ತವರಿಗೆ ವಾಪಸಾಗಿರುವ ಭಾರತ ತಂಡ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಏಕದಿನ ಪಂದ್ಯಗಳ ಸವಾಲಿಗೆ ಸಜ್ಜಾಗಿದೆ. ಗುರುವಾರ ಧರ್ಮಶಾಲಾದಲ್ಲಿ ಮೊದಲ ಏಕದಿನ ಹಣಾಹಣಿ ನಡೆಯಲಿದ್ದು, ಐಪಿಎಲ್​ಗೆ ಮುನ್ನ ಭಾರತ ತಂಡಕ್ಕೆ ಇದು ಕೊನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯಾಗಿದೆ.

ಕಳೆದ ವರ್ಷದ ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಸರಣಿಯಲ್ಲಿ 0-3ರಿಂದ ಸೋತಿದ್ದರೆ, ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿತ್ತು. ಇತ್ತೀಚೆಗೆ ತವರಿನಲ್ಲಿ ಸತತ 4 ಸರಣಿಗಳಲ್ಲಿ ಗೆಲುವು ಕಾಣದಿದ್ದ ದಕ್ಷಿಣ ಆಫ್ರಿಕಾ ತಂಡ, ಭಾರತ ಪ್ರವಾಸಕ್ಕೆ ಮುನ್ನ ಕೊನೆಯದಾಗಿ ಆಡಿದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 3-0ಯಿಂದ ಮಣಿಸಿ ಮರಳಿ ವಿಶ್ವಾಸ ಸಂಪಾದಿಸಿದೆ. ಇದರಿಂದ 11 ದಿನಗಳ ಕಿರು ಭಾರತ ಪ್ರವಾಸದಲ್ಲಿ ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ. ಕಿವೀಸ್ ಏಕದಿನ ಸರಣಿಯಲ್ಲಿ ವೈಟ್​ವಾಷ್ ಎದುರಿಸಿದ್ದ ಭಾರತ ತವರಿನಲ್ಲಿ ಲಯಕ್ಕೆ ಮರಳುವ ತವಕದಲ್ಲಿದೆ.

ದಕ್ಷಿಣ ಆಫ್ರಿಕಾ ಬಹುತೇಕ ಹೊಸ ಆಟಗಾರರಿಂದ ಕೂಡಿದ್ದರೂ, ಹೊಸ ನಾಯಕ ಕ್ವಿಂಟನ್ ಡಿಕಾಕ್, ಮಾಜಿ ನಾಯಕ ಫಾಫ್ ಡು ಪ್ಲೆಸಿಸ್, ಡೇವಿಡ್ ಮಿಲ್ಲರ್​ರಂಥ ಅನುಭವಿ ಆಟಗಾರರನ್ನೂ ಹೊಂದಿದೆ. ಆಸೀಸ್ ವಿರುದ್ಧ ಶತಕ ಸಿಡಿಸಿ ಮಿಂಚಿದ್ದ ಕಾರಣ ಜೆನ್ನೆಮನ್ ಮಲನ್ 16ನೇ ಸದಸ್ಯರಾಗಿ ಕೊನೇಕ್ಷಣದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದರೆ, ಹೆನ್ರಿಚ್ ಕ್ಲಾಸೆನ್ ಮತ್ತು ಕೈಲ್ ವೆರೆಯ್್ನ ಕೂಡ ಭರ್ಜರಿ ಫಾಮರ್್​ನಲ್ಲಿದ್ದಾರೆ.

ಕೊಹ್ಲಿ ಫಾಮ್ರ್ ಕಳವಳ: ನ್ಯೂಜಿಲೆಂಡ್ ಪ್ರವಾಸದಲ್ಲಿ ರನ್​ಬರ ಎದುರಿಸಿದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳುವುದು ಭಾರತ ತಂಡಕ್ಕೆ ಪ್ರಮುಖವಾಗಿದೆ. ಉಪನಾಯಕ ರೋಹಿತ್ ಶರ್ಮ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದು, ಕೊಹ್ಲಿ ಮೇಲೆ ಹೆಚ್ಚಿನ ಜವಾಬ್ದಾರಿಯೂ ಇದೆ. ಹಾಲಿ ವರ್ಷ ಕೊಹ್ಲಿ ಇದುವರೆಗೆ ಒಂದೂ ಶತಕ ಸಿಡಿಸಿಲ್ಲ.

ಭಾರತ: ಗಾಯದಿಂದ ಚೇತರಿಸಿ ಕೊಂಡಿರುವ ಶಿಖರ್ ಧವನ್, ಭುವನೇಶ್ವರ್ ಕುಮಾರ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪುನರಾಗಮನದಿಂದ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲ ಉಳಿದುಕೊಳ್ಳಲಿದ್ದಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ಇತ್ತೀಚೆಗೆ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದ ಕನ್ನಡಿಗ ಮನೀಷ್ ಪಾಂಡೆ, ಪಾಂಡ್ಯಗೆ ಸ್ಥಾನ ಬಿಟ್ಟುಕೊಡಬೇಕಾದೀತು. ಇದರಿಂದ ಪಾಂಡ್ಯ ವಾಪಸಾತಿಯ ನಡುವೆಯೂ ರವೀಂದ್ರ ಜಡೇಜಾ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮ ಗೈರಿನಲ್ಲಿ ಧವನ್​ಗೆ ಪೃಥ್ವಿ ಷಾ ಆರಂಭಿಕ ಜೋಡಿಯಾಗಲಿದ್ದಾರೆ. ಶಾರ್ದೂಲ್ ಠಾಕೂರ್ ಸ್ಥಾನವನ್ನು ಭುವನೇಶ್ವರ್ ತುಂಬಲಿದ್ದಾರೆ. ಈ ಮೂಲಕ ನಾಲ್ವರು ವೇಗಿಗಳು, ಇಬ್ಬರು ಸ್ಪಿನ್ನರ್​ಗಳಿಂದ ತಂಡದ ಬೌಲಿಂಗ್ ಸದೃಢವೆನಿಸಿದೆ.

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ ಫಿಟ್ನೆಸ್ ಬಗ್ಗೆ ಗೊಂದಲಗಳಿರುವುದರಿಂದ, ತಂಡಕ್ಕೆ ಕೊನೇಕ್ಷಣದಲ್ಲಿ ಸೇರ್ಪಡೆಗೊಂಡ ಜನ್ನೆಮನ್ ಮಲನ್ ನಾಯಕ ಡಿಕಾಕ್ ಜತೆ ಆರಂಭಿಕರಾಗಿ ಕಣಕ್ಕಿಳಿಯಬಹುದು. ಇತ್ತೀಚೆಗೆ ಆಸೀಸ್ ವಿರುದ್ಧದ ಸರಣಿಯಲ್ಲಿ ಮಿಂಚಿದ್ದರೂ, ವೆಯ್್ನ ಮತ್ತು ಸ್ಮಟ್ಸ್ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳಬಹುದು. ಅನುಭವಿ ಪ್ಲೆಸಿಸ್ ಮತ್ತು ಡುಸೆನ್ ವಾಪಸಾಗಿ ಇದಕ್ಕೆ ಕಾರಣ. ಆದರೆ ಸ್ಮಟ್ಸ್ ಆರಂಭಿಕರಾಗಿ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಇನ್ನು ಬೌಲಿಂಗ್ ವಿಭಾಗದ ಆಯ್ಕೆಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಇನ್ನಷ್ಟು ತಲೆನೋವು ಇದೆ. ಎಡಗೈ ವೇಗಿ ಬ್ಯೂರನ್ ಹೆಂಡ್ರಿಕ್ಸ್ ಮತ್ತು ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಅವರಿಬ್ಬರಲ್ಲಿ ಯಾರನ್ನು ಆಡಿಸುವುದು ಎನ್ನುವ ಗೊಂದಲವಿದೆ.

ಪಿಚ್ ರಿಪೋರ್ಟ್

ವಿಹಂಗಮವಾಗಿರುವ ಎಚ್​ಪಿಸಿಎ ಕ್ರೀಡಾಂಗಣದ ಇತಿಹಾಸದ ಗಮನಿಸಿದಾಗ ಚೇಸಿಂಗ್ ಮಾಡಿದ ತಂಡವೇ ಹೆಚ್ಚು ಜಯಿಸಿದೆ. ಇಲ್ಲಿ ನಡೆದ 4 ಏಕದಿನ ಪಂದ್ಯಗಳಲ್ಲಿ 3ರಲ್ಲಿ ಚೇಸಿಂಗ್ ಮಾಡಿದ ತಂಡವೇ ಗೆದ್ದಿದೆ. 2015ರಲ್ಲಿ ಕೊನೆಯದಾಗಿ ಇಲ್ಲಿ ಉಭಯ ತಂಡಗಳ ನಡುವೆ ಟಿ20 ಪಂದ್ಯ ನಡೆದಾಗ ದಕ್ಷಿಣ ಆಫ್ರಿಕಾ ತಂಡ 200 ರನ್​ಗಳನ್ನು ಚೇಸಿಂಗ್ ಮಾಡಿ ಗೆದ್ದಿತ್ತು. ಪಿಚ್ ಸ್ಪಿನ್​ಗಿಂತ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆ ಇದೆ.

ಮುಖಾಮುಖಿ: 84 ಭಾರತ: 35

ದಕ್ಷಿಣ ಆಫ್ರಿಕಾ: 46 ರದ್ದು: 3

ಭಾರತದಲ್ಲಿ: 28 ಭಾರತ: 15 ದಕ್ಷಿಣ ಆಫ್ರಿಕಾ: 13

ಕಾಡುತ್ತಿದೆ ಮಳೆ ಭೀತಿ

ಮಂಗಳವಾರ ರಾತ್ರಿಯಿಂದ ಮಳೆ ಕಾಡು ತ್ತಿದೆ. ಬುಧವಾರ ತಂಡಗಳ ಅಭ್ಯಾಸಕ್ಕೂ ಮಳೆ ಅಡ್ಡಿಪಡಿಸಿದೆ. ಇದರಿಂದಾಗಿ ಸಂಪೂರ್ಣ ಮೈದಾನವನ್ನು ಹೊದಿಕೆಯಿಂದ ಸಂರಕ್ಷಿಸಲಾಗಿದೆ. ಕಳೆದ ವರ್ಷ 2 ತಂಡಗಳ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಧರ್ಮಶಾಲಾದಲ್ಲಿ 4 ಏಕದಿನ ಪಂದ್ಯ ಆಡಿರುವ ಭಾರತ 2ರಲ್ಲಿ ಗೆದ್ದು, 2ರಲ್ಲಿ ಸೋತಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯವಾಡುತ್ತಿದೆ.

ಪ್ಲೆಸಿಸ್, ಮಿಲ್ಲರ್​ರಂಥ ಹಿರಿಯ ಆಟಗಾರರು ತಂಡದ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಬೇಕು. ಅವರ ಅನುಭವ ನಮಗೆ ಸರಣಿಯಲ್ಲಿ ಅತ್ಯಂತ ಉಪಯುಕ್ತವೆನಿಸಲಿದೆ. ಭಾರತ ತಂಡ ಉತ್ತಮ ಸಮತೋಲನದಿಂದ ಕೂಡಿದೆ. ನಾವೂ ಉತ್ತಮ ಆತ್ಮವಿಶ್ವಾಸದಿಂದ ಇಲ್ಲಿಗೆ ಆಗಮಿಸಿದ್ದೇವೆ.

| ಕ್ವಿಂಟನ್ ಡಿಕಾಕ್ ದಕ್ಷಿಣ ಆಫ್ರಿಕಾ ನಾಯಕ

ಧವನ್, ಪಾಂಡ್ಯ, ಭುವನ್ ವಾಪಸ್

ಬೆನ್ನು ನೋವಿನ ಸಮಸ್ಯೆಯಿಂದ ಕಳೆದ ಆರು ತಿಂಗಳಿನಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಭುಜದ ನೋವಿನಿಂದಾಗಿ ನ್ಯೂಜಿಲೆಂಡ್ ಪ್ರವಾಸದಿಂದ ಹೊರಗುಳಿದಿದ್ದ ಎಡಗೈ ಆರಂಭಿಕ ಶಿಖರ್ ಧವನ್ ಮತ್ತು ಹಾರ್ನಿಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ವೇಗಿ ಭುವನೇಶ್ವರ್ ಮರಳಿರುವ ಕಾರಣ ಭಾರತ ತಂಡ ಬಹುತೇಕ ಪೂರ್ಣ ಬಲ ಪಡೆದುಕೊಂಡಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20, ಪಾಂಡ್ಯರವರ ಕಡೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ವಿಶ್ವಕಪ್ ಸೆಮಿಫೈನಲ್ ಪಂದ್ಯವೇ ಅವರು ಆಡಿರುವ ಕೊನೆಯ ಏಕದಿನ. ಶಸ್ತ್ರಚಿಕಿತ್ಸೆ ಬಳಿಕ ಫಿಟ್ನೆಸ್​ಗಾಗಿ ಪರದಾಡಿದ ಪಾಂಡ್ಯ, ಮುಂಬೈನಲ್ಲಿ ನಡೆದ ಡಿವೈ ಪಾಟೀಲ್ ಕಾಪೋರೇಟ್ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ನಿರ್ವಹಣೆ ತೋರಿದ್ದರು.

ಉಗುಳಿನಿಂದ ಚೆಂಡು ಉಜ್ಜಲ್ಲ!

ಕರೊನಾ ಭೀತಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡ ಈಗಾಗಲೆ ಭಾರತ ಪ್ರವಾಸದಲ್ಲಿ ಹಸ್ತಲಾಘವ ಮಾಡಲ್ಲ, ಅಭಿಮಾನಿಗಳಿಗೆ ಸೆಲ್ಪಿ ಪೋಸ್ ನೀಡಲ್ಲ ಎಂಬ ಮುನ್ನೆಚ್ಚರಿಕೆ ಕೈಗೊಂಡಿದೆ. ‘ಪಂದ್ಯದ ವೇಳೆ ಚೆಂಡಿಗೆ ಹೊಳಪು ನೀಡಲು ಉಗುಳಿನ ಬಳಕೆ ಮಾಡದಿರಬಹುದು. ಇದರಿಂದ ನಮ್ಮ ಬೌಲಿಂಗ್ ದಂಡನೆಗೊಳಗಾದರೆ, ನಾವು ಸರಿಯಾಗಿ ಬೌಲಿಂಗ್ ಮಾಡಲಿಲ್ಲ ಎಂದು ಜನರು ದೂರಬಹುದು. ಅಂತಿಮವಾಗಿ ತಂಡದ ಸಭೆಯಲ್ಲಿ ವೈದ್ಯರು ನೀಡುವ ಸೂಚನೆಯಂತೆ ನಾವು ನಡೆದುಕೊಳ್ಳಲಿದ್ದೇವೆ’ ಎಂದು ವೇಗಿ ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net