ಕಿರಿಯರ ಕ್ರಿಕೆಟ್​ ವಿಶ್ವಕಪ್​: ಭಾರತಕ್ಕೆ ಇಂದು ಬಾಂಗ್ಲಾ ಎದುರಾಳಿ, ಶುಭಾರಂಭದ ತವಕ

ind vs ban u19 web
Published on

ಬ್ಲೋಮ್​ಫಾಂಟೇನ್​: ದಾಖಲೆಯ ಆರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕುವ ಹಂಬಲದಲ್ಲಿರುವ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್​ ವಿಶ್ವಕಪ್​ನಲ್ಲಿ ಶನಿವಾರ ಅಭಿಯಾನ ಆರಂಭಿಸಲಿದೆ. ಟೂರ್ನಿ ಇತಿಹಾಸದ ಅತ್ಯಂತ ಯಶಸ್ವಿ ತಂಡವೆನಿಸಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಎ ಗುಂಪಿನ ಈ ಕಾದಾಟದಲ್ಲಿ ಶುಭಾರಂಭ ಕಾಣುವುದು ಉದಯ್​ ಸಹಾರನ್​ ಬಳಗದ ತವಕವಾಗಿದೆ.

2000ದಲ್ಲಿ ಮೊಹಮದ್​ ಕೈಫ್​ ಸಾರಥ್ಯದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಭಾರತ ನಂತರದಲ್ಲಿ 2008, 2012, 2018 ಮತ್ತು 2022ರಲ್ಲೂ ಪ್ರಶಸ್ತಿ ಒಲಿಸಿಕೊಂಡಿದೆ. ಜತೆಗೆ ಈ ತಂಡದಿಂದ ಹಲವು ಪ್ರತಿಭಾನ್ವಿತ ಯುವ ಆಟಗಾರರು ಟೀಮ್​ ಇಂಡಿಯಾಕ್ಕೂ ದೊರೆತಿದ್ದಾರೆ. ಈ ಸಲವೂ ಭಾರತದ ಕಿರಿಯರ ತಂಡ ಆಲ್ರೌಂಡರ್​ ಅರ್ಷಿನ್​ ಕುಲಕರ್ಣಿ, ವಿಕೆಟ್​ ಕೀಪರ್​-ಬ್ಯಾಟರ್​ ಅರವೆಲ್ಲಿ ಅವಿನಾಶ್​, ಮುಶೀರ್​ ಖಾನ್​, ಆರಾಧ್ಯ ಶುಕ್ಲಾ, ಎಡಗೈ ಸ್ಪಿನ್ನರ್​ ಮತ್ತು ಉಪನಾಯಕ ಸೌಮ್ಯಕುಮಾರ್​ ಪಾಂಡೆ ಅವರಂಥ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿದೆ.

ರಾಜಸ್ಥಾನ ಮೂಲದ ನಾಯಕ ಉದಯ್​ ಸಹಾರನ್​, ವಯೋಮಿತಿ ಕ್ರಿಕೆಟ್​ನಲ್ಲಿ ಪಂಜಾಬ್​ ತಂಡವನ್ನು ಮುನ್ನಡೆಸುತ್ತ ಬಂದಿದ್ದು, ವಿಶ್ವಕಪ್​ಗೆ ಮುನ್ನ ಆಡಿದ ಪಂದ್ಯಗಳಲ್ಲಿ ರನ್​ಮಳೆ ಹರಿಸಿದ್ದಾರೆ. ಟೂರ್ನಿಗೆ ಪೂರ್ವಭಾವಿಯಾಗಿ ದಣ ಆಫ್ರಿಕಾದಲ್ಲಿ ಆಡಿದ ತ್ರಿಕೋನ ಸರಣಿಯಲ್ಲಿ ಭಾರತ ಅಜೇಯವಾಗಿ ೈನಲ್​ಗೇರಿತ್ತು. ಆದರೆ ಮಳೆಯಿಂದಾಗಿ ಫೈನಲ್​ನಲ್ಲಿ ಪ್ರಶಸ್ತಿ ಹಂಚಿಕೊಳ್ಳಬೇಕಾಗಿ ಬಂದಿತ್ತು. ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೆಲಿಯಾವನ್ನು ಮಣಿಸಿ ಭಾರತ ಉತ್ತಮ ಸಿದ್ಧತೆಯನ್ನೇ ನಡೆಸಿದೆ.

2020ರ ವಿಶ್ವಕಪ್​ ಫೈನಲ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಭಾರತ, 2022ರ ಆವೃತ್ತಿಯಲ್ಲಿ ಪ್ರಶಸ್ತಿ ಗೆಲುವಿನ ಹಾದಿಯಲ್ಲಿ ಕ್ವಾರ್ಟರ್​ಫೈನಲ್​ನಲ್ಲಿ ಬಾಂಗ್ಲಾವನ್ನು ಮಣಿಸಿ ಸೇಡು ತೀರಿಸಿಕೊಂಡಿತ್ತು. ಕಳೆದ ಡಿಸೆಂಬರ್​ನಲ್ಲಿ ನಡೆದ ಕಿರಿಯರ ಏಷ್ಯಾಕಪ್​ನ ಸೆಮಿಫೈನಲ್​ನಲ್ಲಿ ಬಾಂಗ್ಲಾ ವಿರುದ್ಧ ಸೋತಿದ್ದ ಭಾರತ, ಈ ಬಾರಿ ಮತ್ತೆ ಸೇಡು ತೀರಿಸಿಕೊಳ್ಳಬೇಕಿದೆ.

ಭಾರತ ತಂಡ: ಉದಯ್​ ಸಹಾರನ್​ (ನಾಯಕ), ಅರ್ಶಿನ್​ ಕುಲಕರ್ಣಿ, ಆದರ್ಶ್​ ಸಿಂಗ್​, ರುದ್ರ ಮಯೂರ್​ ಪಟೇಲ್​, ಸಚಿನ್​ ದಾಸ್​, ಪ್ರಿಯಾಂಶು ಎಂ., ಮುಶೀರ್​ ಖಾನ್​, ಎ.ಅವಿನಾಶ್​ ರಾವ್​, ಸೌಮಿ ಕುಮಾರ್​ ಪಾಂಡೆ, ಎಂ. ಅಭಿಷೇಕ್​, ಇನ್ನೆಶ್​ ಮಹಾಜನ್​, ಧನುಷ್​ ಗೌಡ, ಆರಾಧ್ಯ ಶುಕ್ಲಾ, ರಾಜ್​ ಲಿಂಬಾನಿ, ನಮನ್​ ತಿವಾರಿ.

*ಪಂದ್ಯ ಆರಂಭ: ಮಧ್ಯಾಹ್ನ 1.30

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net