ವಿಶಾಖಪಟ್ಟಣದಲ್ಲಿ ಭಾರತಕ್ಕೆ ಗೆಲುವಿನ 'ಶುಭ' ಸೂಚನೆ; ಆಂಗ್ಲರ ಬಾಜ್​ಬಾಲ್​ಗೆ ಬ್ರೇಕ್​ ಹಾಕಿದರೆ ಸರಣಿ ಸಮಬಲ!

test vishak web
Published on

ವಿಶಾಖಪಟ್ಟಣ: ಕೊನೆಗೂ ಲಯಕ್ಕೆ ಮರಳಿದ ಯುವ ಬ್ಯಾಟರ್​ ಶುಭಮಾನ್​ ಗಿಲ್​ (104 ರನ್​, 147 ಎಸೆತ, 11 ಬೌಂಡರಿ, 2 ಸಿಕ್ಸರ್​) ಶತಕದಾಟದ ಬಲದಿಂದ ಭಾರತ ತಂಡ ಎರಡನೇ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್​ ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ. ಪಂದ್ಯದಲ್ಲಿ ಇನ್ನೂ 2 ದಿನದಾಟ ಬಾಕಿ ಉಳಿದಿದ್ದರೂ, ಸೋಮವಾರವೇ ಫಲಿತಾಂಶ ಹೊರಬೀಳುವ ನಿರೀೆ ಹೆಚ್ಚಿದೆ. ಆಂಗ್ಲರ ಬಾಜ್​ಬಾಲ್​ ಕಾರ್ಯತಂತ್ರದಿಂದಾಗಿ 4ನೇ ದಿನದಾಟ ಕುತೂಹಲ ಕೆರಳಿಸಿದ್ದು, ರೋಹಿತ್​ ಶರ್ಮ ಬಳಗಕ್ಕೆ ಸರಣಿ ಸಮಬಲ ಸಾಧಿಸಲು ಇನ್ನೂ 9 ವಿಕೆಟ್​ ಅಗತ್ಯವಾಗಿದೆ.

ವೈಎಸ್​ಆರ್​ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ ವಿಕೆಟ್​ ನಷ್ಟವಿಲ್ಲದೆ 28 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ಭಾರತ ತಂಡ, ಚಹಾ ವಿರಾಮದ ಬಳಿಕ 78.3 ಓವರ್​ಗಳಲ್ಲಿ 255 ರನ್​ಗಳಿಗೆ ಸರ್ವಪತನ ಕಂಡಿತು. ಗಿಲ್​ ಶತಕದ ನಡುವೆ ಭಾರತಕ್ಕೆ ಇತರ ಪ್ರಮುಖ ಬ್ಯಾಟರ್​ಗಳು ಮತ್ತೊಮ್ಮೆ ಕೈಕೊಟ್ಟರು. ಇದರ ನಡುವೆಯೂ ಭಾರತ 399 ರನ್​ಗಳ ಕಠಿಣ ಸವಾಲನ್ನೇ ನಿಗದಿಪಡಿಸಿದ್ದು, ಬಿರುಸಿನ ಆರಂಭ ಪಡೆದಿರುವ ಇಂಗ್ಲೆಂಡ್​ ದಿನದಂತ್ಯಕ್ಕೆ ತನ್ನ 2ನೇ ಇನಿಂಗ್ಸ್​ನಲ್ಲಿ 1 ವಿಕೆಟ್​ಗೆ 67 ರನ್​ ಗಳಿಸಿದ್ದು, ಗೆಲುವಿಗೆ ಇನ್ನೂ 332 ರನ್​ ಅಗತ್ಯವಿದೆ.

ಆಂಗ್ಲರ ಚೇಸಿಂಗ್​ಗೆ ಆಕ್ರಮಣಕಾರಿ ಆರಂಭ ಒದಗಿಸಿದ ಬೆನ್​ ಡಕೆಟ್​ (28) ಮೊದಲ ವಿಕೆಟ್​ಗೆ ಜಾಕ್​ ಕ್ರೌಲಿ (29*) ಜತೆ 66 ಎಸೆತಗಳಲ್ಲಿ 50 ಸೇರಿಸಿ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದರು. ಕ್ರೌಲಿ ಮತ್ತು ನೈಟ್​ ವಾಚ್​ಮನ್​ ರೆಹನ್​ ಅಹ್ಮದ್​ (9*) ಕ್ರೀಸ್​ನಲ್ಲಿದ್ದಾರೆ. ಪ್ರತಿ ಓವರ್​ಗೆ 4.78ರ ಸರಾಸರಿಯಲ್ಲಿ ಚೇಸಿಂಗ್​ ಆರಂಭಿಸಿರುವ ಆಂಗ್ಲರು, ನಾಲ್ಕನೇ ದಿನವೂ ಬಾಜ್​ಬಾಲ್​ ಸ್ಟೈಲ್​ನಲ್ಲೇ ರನ್​ ಬೆನ್ನಟ್ಟುವ ನಿರೀಕ್ಷೆ ಇದ್ದು, ಭಾರತ ಸಂಟಿತ ಬೌಲಿಂಗ್​ ನಿರ್ವಹಣೆಯ ಮೂಲಕ ಗೆಲುವು ಒಲಿಸಿಕೊಳ್ಳಬೇಕಾಗಿದೆ.

ಶುಭಮಾನ್​ ಗಿಲ್​ ಶತಕದಾಟ

ಭಾರತ ತಂಡ ಬೆಳಗ್ಗೆ ಆಘಾತಕಾರಿ ಆರಂಭ ಕಂಡಿತು. ದಿನದ 2ನೇ ಓವರ್​ನಲ್ಲೇ ನಾಯಕ ರೋಹಿತ್​ ಶರ್ಮ (13) ಅನುಭವಿ ವೇಗಿ ಜೇಮ್ಸ್​ ಆಂಡರ್​ಸನ್​ ಎಸೆತದಲ್ಲಿ ಬೌಲ್ಡಾದರು. ಆಂಡರ್​ಸನ್​ರ ಮರುಓವರ್​ನಲ್ಲಿ ಮೊದಲ ಇನಿಂಗ್ಸ್​ ದ್ವಿಶತಕವೀರ ಯಶಸ್ವಿ ಜೈಸ್ವಾಲ್​ (17) ಕೂಡ ಔಟಾದರು. ಆಗ ಶುಭಮಾನ್​ ಗಿಲ್​ ಭಾರತಕ್ಕೆ ಆಸರೆಯಾಗಿ ನಿಂತರು. ಶ್ರೇಯಸ್​ ಅಯ್ಯರ್​ (29) ಜತೆಗೂಡಿ 3ನೇ ವಿಕೆಟ್​ಗೆ 81 ರನ್​ ಸೇರಿಸಿ ಚೇತರಿಕೆ ಒದಗಿಸಿದ ಗಿಲ್, ಬಿರುಸಿನ ಆಟದೊಂದಿಗೆ 60 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಭೋಜನ ವಿರಾಮಕ್ಕೆ ಮುನ್ನ ಶ್ರೇಯಸ್​ ಬೆನ್ನಲ್ಲೇ ರಜತ್​ ಪಾಟೀದಾರ್​ (9) ಕೂಡ ಔಟಾದರು. ಈ ವೇಳೆ ಭಾರತ ಮತ್ತೆ ಸಂಕಷ್ಟ ಎದುರಿಸಿದಾಗ ಅಕ್ಷರ್​ ಪಟೇಲ್​ (45) ಜತೆಗೂಡಿ ಗಿಲ್​ ಮೊತ್ತ ಏರಿಸಿದರು. 5ನೇ ವಿಕೆಟ್​ಗೆ ಇವರಿಬ್ಬರು 89 ರನ್​ ಸೇರಿಸಿದರು. ಇದೇ ವೇಳೆ 132 ಎಸೆತಗಳಲ್ಲಿ ಶತಕ ಪುರೈಸುವ ಮೂಲಕ ಗಿಲ್​ ಟೆಸ್ಟ್​ ತಂಡದಲ್ಲಿ ಅಲುಗಾಡುತ್ತಿದ್ದ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು. ಈ ಜೋಡಿ ಬೇರ್ಪಟ್ಟ ಬಳಿಕ ಬಾಲಂಗೋಚಿಗಳಲ್ಲಿ ಆರ್​. ಅಶ್ವಿನ್​ (29) ಮಾತ್ರ ಭಾರತಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಭಾರತದ ಕೊನೇ 5 ವಿಕೆಟ್​ಗಳು 44 ರನ್​ ಅಂತರದಲ್ಲಿ ಉರುಳಿದವು.

ಗಿಲ್​ಗೆ ಡಿಆರ್​ಎಸ್​ ಲಾಭ

ಶುಭಮಾನ್​ ಗಿಲ್​ 4 ರನ್​ ಗಳಿಸಿದ್ದಾಗ ಸ್ಪಿನ್ನರ್​ ಹಾರ್ಟ್ಲಿ ಎಸೆತದಲ್ಲಿ ಅಂಪೈರ್​ ಎಲ್​ಬಿಡಬ್ಲ್ಯು ತೀರ್ಪು ನೀಡಿದರು. ಜತೆಗಾರ ಶ್ರೇಯಸ್​ ಅಯ್ಯರ್​ ಜತೆ ಚರ್ಚಿಸಿ ಗಿಲ್​ ಡಿಆರ್​ಎಸ್​ ಮೊರೆ ಹೋದರು. ಟಿವಿ ಮರುಪ್ರಸಾರದಲ್ಲಿ ಚೆಂಡು ಬ್ಯಾಟ್​ಗೆ ಸ್ಪರ್ಶಿಸಿದ್ದು ಕಾಣಿಸಿತು. ಇದರಿಂದ ತೃತೀಯ ಅಂಪೈರ್​ ನಾಟೌಟ್​ ತೀರ್ಪಿತ್ತರು. ಇದು ಗಿಲ್​ ಮತ್ತು ಭಾರತಕ್ಕೆ 100 ರನ್​ ಲಾಭ ತಂದುಕೊಟ್ಟಿತು. ಗಿಲ್​ 4 ರನ್​ ಗಳಿಸಿದ್ದಾಗ ಇಂಗ್ಲೆಂಡ್​ ಮತ್ತೊಮ್ಮೆ ಎಲ್​ಬಿಗಾಗಿ ಡಿಆರ್​ಎಸ್​ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಗಿಲ್​ ಶತಕ ಸಿಡಿಸಿದ ಬಳಿಕ ಇಂಗ್ಲೆಂಡ್​ ಡಿಆರ್​ಎಸ್​ ಮೂಲಕವೇ ಅವರ ವಿಕೆಟ್​ ಕಬಳಿಸಿತು.

*ಈ ಪಿಚ್​ನಲ್ಲಿ ಬ್ಯಾಟಿಂಗ್​ ಸುಲಭವಲ್ಲ. ಈಗಲೂ ಭಾರತದ ಗೆಲುವಿಗೆ ಶೇ. 70 ಮತ್ತು ಇಂಗ್ಲೆಂಡ್​ ಗೆಲುವಿಗೆ ಶೇ. 30 ಅವಕಾಶವಿದೆ. 4ನೇ ದಿನ ಬೆಳಗ್ಗಿನ ಅವಧಿಯ ಆಟವೇ ನಿರ್ಣಾಯಕ.

| ಶುಭಮಾನ್​ ಗಿಲ್​

*3: ಶುಭಮಾನ್​ ಗಿಲ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಸಿಡಿಸಿದ 3ನೇ ಶತಕ ಇದಾಗಿದೆ. 2023ರ ಮಾರ್ಚ್​ನಲ್ಲಿ ಆಸೀಸ್​ ಎದುರು ಕೊನೇ ಶತಕ ಸಿಡಿಸಿದ್ದ ಅವರು ನಂತರದ 12 ಇನಿಂಗ್ಸ್​ಗಳಲ್ಲಿ ಒಂದೂ ಅರ್ಧಶತಕ ಬಾರಿಸಿರಲಿಲ್ಲ.

ಇಂಗ್ಲೆಂಡ್​ ಗೆದ್ದರೆ ದಾಖಲೆ

ಇಂಗ್ಲೆಂಡ್​ ತಂಡ ವಿಶಾಖಪಟ್ಟಣದಲ್ಲಿ ಗೆಲ್ಲಬೇಕಾದರೆ ಭಾರತ ಮತ್ತು ಉಪಖಂಡದಲ್ಲಿ ಸರ್ವಾಧಿಕ ಮೊತ್ತದ ಚೇಸಿಂಗ್​ ದಾಖಲೆಯನ್ನೇ ಬರೆಯಬೇಕಾಗಿದೆ. 2021ರಲ್ಲಿ ಬಾಂಗ್ಲಾ ವಿರುದ್ಧ ಚಟ್ಟೋಗ್ರಾಮ್​ನಲ್ಲಿ ವಿಂಡೀಸ್​ 395 ರನ್​ ಬೆನ್ನಟ್ಟಿ ಗೆದ್ದಿರುವುದು ಏಷ್ಯಾದ ಚೇಸಿಂಗ್​ ದಾಖಲೆಯಾಗಿದೆ. ಇಂಗ್ಲೆಂಡ್​ ವಿರುದ್ಧವೇ ಭಾರತ ತಂಡ 2008ರಲ್ಲಿ ಚೆನ್ನೆ$ ಟೆಸ್ಟ್​ನಲ್ಲಿ 387 ರನ್​ ಬೆನ್ನಟ್ಟಿ ಗೆದ್ದಿರುವುದು ಭಾರತೀಯ ನೆಲದ ಗರಿಷ್ಠ ಚೇಸಿಂಗ್​ ದಾಖಲೆಯಾಗಿದೆ. ಭಾರತದಲ್ಲಿ ಇದುವರೆಗೆ 5 ಬಾರಿ ಮಾತ್ರ ತಂಡವೊಂದು 250ಕ್ಕಿಂತ ಅಧಿಕ ಮೊತ್ತವನ್ನು ಚೇಸಿಂಗ್​ ಮಾಡಿ ಗೆದ್ದ ದಾಖಲೆ ಇದೆ. ಈ ಪೈಕಿ 4 ಬಾರಿ ಆತಿಥೇಯ ತಂಡವೇ ಗೆದ್ದಿದ್ದರೆ, ವಿಂಡೀಸ್​ ಈ ಸಾಧನೆ ಮಾಡಿರುವ ಏಕೈಕ ವಿದೇಶಿ ತಂಡವಾಗಿದೆ.

ಆಂಗ್ಲರಿಗೆ ರೂಟ್​ ಗಾಯದ ಹಿನ್ನಡೆ

3ನೇ ದಿನದಾಟದಲ್ಲಿ ಬೆಳಗ್ಗೆ ಇಂಗ್ಲೆಂಡ್​ ಮಾಜಿ ನಾಯಕ ಹಾಗೂ ಅನುಭವಿ ಆಟಗಾರ ಜೋ ರೂಟ್​ ಸ್ಲಿಪ್​ನಲ್ಲಿ ಶುಭಮಾನ್​ ಗಿಲ್​ ಕ್ಯಾಚ್​ ಹಿಡಿಯುವ ಪ್ರಯತ್ನದಲ್ಲಿ ಬಲಗೈ ಕಿರುಬೆರಳಿನ ಗಾಯಕ್ಕೊಳಗಾಗಿ ಮೈದಾನದಿಂದ ಹೊರನಡೆದರು. ಸರಣಿಯಲ್ಲಿ ರೂಟ್​ ಬ್ಯಾಟಿಂಗ್​ನಲ್ಲಿ ಹೆಚ್ಚಿನ ಕೊಡುಗೆ ನೀಡಿರದಿದ್ದರೂ, ಅರೆಕಾಲಿಕ ಸ್ಪಿನ್ನರ್​ ಆಗಿ ಆಂಗ್ಲರಿಗೆ ಹೆಚ್ಚು ಉಪಯುಕ್ತರೆನಿಸಿದ್ದಾರೆ. ಆದರೆ 3ನೇ ದಿನದಾಟದಲ್ಲಿ ಅವರು ಗಾಯಗೊಂಡ ಬಳಿಕ ಬೌಲಿಂಗ್​ ಮಾಡಿಸಲು ಆಗಲಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ರೂಟ್​ ಮೈದಾನಕ್ಕೆ ಮರಳಲಿಲ್ಲ ಎಂದಿರುವ ಅನುಭವಿ ವೇಗಿ ಜೇಮ್ಸ್​ ಆಂಡರ್​ಸನ್​, 2ನೇ ಇನಿಂಗ್ಸ್​ನಲ್ಲಿ ರೂಟ್​ ಬ್ಯಾಟಿಂಗ್​ಗೆ ಇಳಿಯುವ ಸುಳಿವನ್ನೂ ನೀಡಿದ್ದಾರೆ.

ಇಂಗ್ಲೆಂಡ್​ 600 ರನ್​ ಚೇಸಿಂಗ್​ಗೂ ಸಿದ್ಧ!

ಭಾರತ 600 ರನ್​ ಸವಾಲು ನೀಡಿದರೂ, ಅದರ ಚೇಸಿಂಗ್​ಗೆ ಸಿದ್ಧವಾಗಿರಬೇಕೆಂದು ಕೋಚ್​ ಬ್ರೆಂಡನ್​ ಮೆಕ್ಕಲಂ ಶನಿವಾರ ರಾತ್ರಿಯೇ ತಂಡಕ್ಕೆ ಸೂಚನೆ ನೀಡಿದ್ದರು ಎಂದು ಇಂಗ್ಲೆಂಡ್​ ತಂಡದ ಅನುಭವಿ ವೇಗಿ ಜೇಮ್ಸ್​ ಆಂಡರ್​ಸನ್​ 3ನೇ ದಿನದಾಟದ ಬಳಿಕ ತಿಳಿಸಿದರು. ಹೀಗಾಗಿ ಇಂಗ್ಲೆಂಡ್​ ತಂಡ 4ನೇ ದಿನ ಬಾಜ್​ಬಾಲ್​ ಆಕ್ರಮಣದ ಮೂಲಕ 399 ರನ್​ ಚೇಸಿಂಗ್​ಗೆ ಪ್ರಯತ್ನಿಸುವ ಸುಳಿವು ಬಿಟ್ಟುಕೊಟ್ಟರು. ಭಾರತೀಯ ಬೌಲರ್​ಗಳು ಬಾಜ್​ಬಾಲ್​ಗೆ ಯಾವ ರೀತಿ ಬ್ರೇಕ್​ ಹಾಕಲಿದ್ದಾರೆ ಎಂಬುದು ನಿರ್ಣಾಯಕವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net