ಟೆಸ್ಟ್​ ವಿಶ್ವಕಪ್​ನಲ್ಲಿ ಸತತ 3ನೇ ಬಾರಿ ಫೈನಲ್​ಗೇರುವ ಹಂಬಲದಲ್ಲಿ ಭಾರತ; ಹೀಗಿದೆ ಹಾದಿ...

web wtc
Published on

ಚೆನ್ನೈ: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ (ಡಬ್ಲ್ಯುಟಿಸಿ) ಸತತ 3ನೇ ಬಾರಿಗೆ ಫೈನಲ್​ಗೇರುವ ಹಂಬಲದಲ್ಲಿರುವ ಭಾರತ ತಂಡಕ್ಕೆ ತನ್ನ ಮುಂದಿನ 10 ಪಂದ್ಯಗಳ ಲಿತಾಂಶಗಳು ಈ ನಿಟ್ಟಿನಲ್ಲಿ ಮಹತ್ವದ್ದಾಗಿವೆ. 2023-25ರ ಸಾಲಿನ ಹಾಲಿ ಆವೃತ್ತಿಯಲ್ಲಿ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2ರಲ್ಲಿ ಸೋತು, ಒಂದು ಡ್ರಾದೊಂದಿಗೆ ಶೇ. 68.52 ಅಂಕ ಕಲೆಹಾಕಿರುವ ಭಾರತ ತಂಡ ಸದ್ಯ ಅಗ್ರಸ್ಥಾನದಲ್ಲಿದೆ. ಅಂಕಪಟ್ಟಿಯ ಅಗ್ರ 2 ತಂಡಗಳಲ್ಲಿ ಒಂದಾಗಿ ಫೈನಲ್​ನಲ್ಲಿ ಆಡುವ ಅವಕಾಶಕ್ಕಾಗಿ ಭಾರತ ತಂಡ ತನ್ನ ಗೆಲುವಿನ ಲಯ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.

ಡಬ್ಲ್ಯುಟಿಸಿಯಲ್ಲಿ ಫೈನಲ್​ಗೇರಲು ಇಷ್ಟೇ ಅಂಕಗಳನ್ನು ಗಳಿಸಬೇಕೆಂದು ನಿಖರವಾಗಿ ಹೇಳುವುದು ಕಷ್ಟ. ಆದರೆ ಶೇ. 60 ಅಂಕ ಗಳಿಸಿದರೆ ಫೈನಲ್​ಗೇರುವುದು ಬಹುತೇಕ ನಿಶ್ಚಿತ ಎನ್ನಬಹುದು. ಈ ನಿಟ್ಟಿನಲ್ಲಿ ಭಾರತ ತನ್ನ ಮುಂದಿನ 10 ಟೆಸ್ಟ್​ಗಳಲ್ಲಿ ಕನಿಷ್ಠ 5ರಲ್ಲಿ ಗೆಲ್ಲಬೇಕು ಮತ್ತು ಒಂದರಲ್ಲಾದರೂ ಡ್ರಾ ಸಾಧಿಸಬೇಕಾಗಿದೆ. 6ರಲ್ಲಿ ಗೆದ್ದರೆ ಭಾರತ ಶೇ.64.03 ಅಂಕ ಗಳಿಸಲಿದ್ದು, ಫೈನಲ್​ ಹಾದಿ ಸುಗಮವಾಗಲಿದೆ.

ಬಾಂಗ್ಲಾ ಎದುರು 2-0ಯಿಂದ ಗೆದ್ದರೆ ಭಾರತದ ಅಂಕ ಶೇ. 74.2ಕ್ಕೆ ಏರಲಿದೆ. ಬಳಿಕ ನ್ಯೂಜಿಲೆಂಡ್​ ವಿರುದ್ಧವೂ 3-0ಯಿಂದ ಗೆದ್ದರೆ ಶೇ. 79.76 ಅಂಕ ಕಲೆಹಾಕಲಿದೆ. ತವರಿನ ಮುಂಬರುವ ಎಲ್ಲ 5 ಟೆಸ್ಟ್​ ಗೆದ್ದರೆ ಭಾರತದ ಫೈನಲ್​ ಹಾದಿ ಸುಗಮವಾಗಲಿದೆ. ಬಳಿಕ ಆಸ್ಟ್ರೆಲಿಯಾ ಪ್ರವಾಸದ 5 ಟೆಸ್ಟ್​ಗಳಲ್ಲಿ ಭಾರತ 1ರಲ್ಲಿ ಡ್ರಾ ಸಾಧಿಸಿದರೂ, ಫೈನಲ್​ ಸ್ಥಾನ ಸುರತವೆನಿಸಲಿದೆ. ಆದರೆ ತವರಿನಲ್ಲಿ ಕನಿಷ್ಠ 3 ಟೆಸ್ಟ್​ ಗೆಲ್ಲದಿದ್ದರೆ ಭಾರತ ತಂಡ ಆಸ್ಟ್ರೆಲಿಯಾ ಪ್ರವಾಸದ ವೇಳೆ ತೀವ್ರ ಒತ್ತಡ ಎದುರಿಸಬೇಕಾಗುತ್ತದೆ.

ಭಾರತದ ಮುಂದಿನ 10 ಟೆಸ್ಟ್​ ಪಂದ್ಯಗಳು

ಪಂದ್ಯ. ದಿನಾಂಕ: ಎದುರಾಳಿ, ಸ್ಥಳ

1. ಸೆ.19-23: ಬಾಂಗ್ಲಾದೇಶ, ಚೆನ್ನೈ

2. ಸೆ.27-ಅ.1 : ಬಾಂಗ್ಲಾದೇಶ, ಕಾನ್ಪುರ

3. ಅ.16-20: ನ್ಯೂಜಿಲೆಂಡ್​, ಬೆಂಗಳೂರು

4. ಅ.24-28: ನ್ಯೂಜಿಲೆಂಡ್,​ ಪುಣೆ

5. ನ.1-5: ನ್ಯೂಜಿಲೆಂಡ್​, ಮುಂಬೈ

6. ನ.22-26: ಆಸ್ಟ್ರೆಲಿಯಾ, ಪರ್ತ್​

7. ಡಿ.6-10: ಆಸ್ಟ್ರೆಲಿಯಾ, ಅಡಿಲೇಡ್​

8. ಡಿ.14-18: ಆಸ್ಟ್ರೆಲಿಯಾ, ಬ್ರಿಸ್ಬೇನ್​

9. ಡಿ.26-30: ಆಸ್ಟ್ರೆಲಿಯಾ, ಮೆಲ್ಬೋರ್ನ್​

10. ಜ.3-7: ಆಸ್ಟ್ರೆಲಿಯಾ, ಸಿಡ್ನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net