ಆಂಗ್ಲರು 2 ಹೆಚ್ಚುವರಿ ಟಿಕೆಟ್​ ನೀಡದ್ದಕ್ಕೆ ವಿಶ್ವಕಪ್​ ಆತಿಥ್ಯವನ್ನೇ ಕಸಿದುಕೊಂಡಿದ್ದರು ಎನ್​ಕೆಪಿ ಸಾಳ್ವೆ!

wc 1987 web
Published on

ಬೆಂಗಳೂರು: ಭಾರತ ಈಗ ಕ್ರಿಕೆಟ್​ನಲ್ಲಿ ಶ್ರೀಮಂತವಾಗಿ ಬೆಳೆಯಲು 1983ರ ವಿಶ್ವಕಪ್​ ಗೆಲುವು ಯಾವ ರೀತಿ ಕಾರಣವೋ, ಅಷ್ಟೇ 1987ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ವಿಶ್ವಕಪ್​ ಟೂರ್ನಿಯೂ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಯಾಕೆಂದರೆ, 1983ರ ವಿಶ್ವಕಪ್​ ಗೆಲುವು ಭಾರತಕ್ಕೆ ಕ್ರಿಕೆಟ್​ ಮೈದಾನದಲ್ಲಿ ಅದರ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟರೆ, 1987ರ ವಿಶ್ವಕಪ್​ ಆತಿಥ್ಯ ವಿಶ್ವಕ್ಕೆ ಭಾರತದ ಕ್ರಿಕೆಟ್​ ಮಾರುಕಟ್ಟೆಯ ಶಕ್ತಿಯನ್ನು ತೋರಿಸಿಕೊಟ್ಟಿತು.

ಏಕದಿನ ವಿಶ್ವಕಪ್​ನ ಮೊದಲ ಮೂರೂ ಆವೃತ್ತಿಗೆ ಕ್ರಿಕೆಟ್​ ಜನಕರೇ ಆತಿಥ್ಯ ವಹಿಸಿದ್ದರೆ, 1987ರಲ್ಲಿ ಮೊಟ್ಟಮೊದಲ ಬಾರಿಗೆ ಇಂಗ್ಲೆಂಡ್​ನಿಂದ ಹೊರಗೆ ವಿಶ್ವಕಪ್​ ಆಯೋಜನೆಗೊಂಡಿತು. 1983ರಲ್ಲಿ ಭಾರತ ವಿಶ್ವಕಪ್​ ಗೆದ್ದಾಗ ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್​ಕೆಪಿ ಸಾಳ್ವೆ ಅವರು 1987ರಲ್ಲಿ ಭಾರತಕ್ಕೆ ವಿಶ್ವಕಪ್​ ಆತಿಥ್ಯ ಒಲಿದುಬರಲು ಪ್ರಮುಖ ಕಾರಣ. 1983ರ ವಿಶ್ವಕಪ್​ ಪಂದ್ಯದ 2 ಹೆಚ್ಚುವರಿ ಟಿಕೆಟ್​ಗಳನ್ನು ಕೇಳಿದಾಗ ಆಂಗ್ಲರು ನಿರಾಕರಿಸಿದರು. ಇದಕ್ಕೆ ಪ್ರತಿಯಾಗಿ ಸಾಳ್ವೆ ವಿಶ್ವಕಪ್​ ಆತಿಥ್ಯವನ್ನೇ ಆಂಗ್ಲರಿಂದ ಕಿತ್ತುಕೊಳ್ಳಲು ಮುಂದಾದರು. ಇದಕ್ಕೆ ಪಾಕಿಸ್ತಾನವೂ ಅವರಿಗೆ ಬೆಂಬಲವಾಗಿ ನಿಂತಿತು. ಬರೀ ಭಾರತವೊಂದೇ ಯಾಕೆ, ನಾವೂ ವಿಶ್ವಕಪ್​ಗೆ ಆತಿಥ್ಯ ವಹಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಅಧ್ಯ ನುರ್​ ಖಾನ್​ ಮುಂದೆ ಬಂದರು. ಆಗಿನ ಭಾರತ-ಪಾಕ್​ ಪ್ರಧಾನಿಗಳಾದ ರಾಜೀವ್​ ಗಾಂಧಿ ಮತ್ತು ಜಿಯಾ ಉಲ್​ ಹಕ್​ ಕೂಡ ಈ ವಿಶ್ವಕಪ್​ ಕನಸಿಗೆ ಬೆಂಬಲವಾಗಿ ನಿಂತರು. ಜತೆಗೆ ಆಗ ತಾಪತ್ರಯವೆನಿಸಿದ್ದ ವಿದೇಶಿ ವಿನಿಯಮವನ್ನೂ ಸರಳಗೊಳಿಸಿದರು.

ಎನ್​ಕೆಪಿ ಸಾಳ್ವೆ ಕೇವಲ ಬಿಸಿಸಿಐ ಅಧ್ಯಕ್ಷರಷ್ಟೇ ಆಗಿರದೆ, ಆಗಿನ ಪ್ರಭಾವಿ ಕಾಂಗ್ರೆಸ್​ ನಾಯಕರೂ ಆಗಿದ್ದುದು ವಿಶ್ವಕಪ್​ ಸರಾಗವಾಗಿ ನಡೆಯಲು ನೆರವಾಯಿತು. ಇನ್ನು ಚತುರ ಕ್ರಿಕೆಟ್​ ಆಡಳಿತಗಾರರಾದ ಐಎಸ್​ ಬಿಂದ್ರಾ ಮತ್ತು ಜಗಮೋಹನ್​ ದಾಲ್ಮಿಯಾ ಕೂಡ ಭಾರತ ಯಶಸ್ವಿ ವಿಶ್ವಕಪ್​ ಆಯೋಜನೆಯ ರೂವಾರಿಗಳಾಗಿದ್ದರು. ರಿಲಯನ್ಸ್​ ಪ್ರಮುಖ ಪ್ರಾಯೋಜಕನಾಗಿ ಸಾಥ್​ ನೀಡಿದ್ದರಿಂದ ಭಾರತ-ಪಾಕ್​ ಜಂಟಿಯಾಗಿ ಆಗ 32 ಕೋಟಿ ರೂ. ವೆಚ್ಚದಲ್ಲಿ ವಿಶ್ವಕಪ್​ ಸಂಘಟಿಸಿತ್ತು. ಇಂಗ್ಲೆಂಡ್​ನಲ್ಲಿ ಹಗಲು ಹೆಚ್ಚಿನ ಸಮಯ ಇರುವುದರಿಂದ ಮೊದಲ 3 ವಿಶ್ವಕಪ್​ನಲ್ಲಿ ತಲಾ 60 ಓವರ್​ಗಳ ಪಂದ್ಯ ನಡೆದಿದ್ದರೆ, 1987ರಲ್ಲಿ ಅದನ್ನು ಮೊದಲ ಬಾರಿ 50 ಓವರ್​ಗಳಿಗೆ ಇಳಿಸಲಾಯಿತು.

ಭಾರತದ 14 ಮತ್ತು ಪಾಕಿಸ್ತಾನದ 7 ಸೇರಿದಂತೆ ಒಟ್ಟು 21 ಕ್ರೀಡಾಂಗಣಗಳಲ್ಲಿ ಟೂರ್ನಿಯ 27 ಪಂದ್ಯಗಳು ನಡೆದವು. 8 ತಂಡಗಳ ಟೂರ್ನಿಯಲ್ಲಿ ಆತಿಥೇಯ ಭಾರತ, ಪಾಕಿಸ್ತಾನ ಸೆಮೀಸ್​ನಲ್ಲೇ ಹೊರಬಿದ್ದರೆ, ಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಮಣಿಸಿ ಆಸ್ಟ್ರೆಲಿಯಾ ಮೊಟ್ಟಮೊದಲ ಬಾರಿಗೆ ವಿಶ್ವಕಪ್​ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net