ಸೆಂಚುರಿಯನ್​ನಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕನ್ನಡಿಗ ಪ್ರಸಿದ್ಧ ಕೃಷ್ಣ; ಬೆನ್ನುನೋವಿನಿಂದ ಜಡೇಜಾ ಗೈರು

prasidh web
Published on

ಸೆಂಚುರಿಯನ್​: ಕನ್ನಡಿಗ ಹಾಗೂ ವೇಗದ ಬೌಲರ್​ ಪ್ರಸಿದ್ಧ ಕೃಷ್ಣ ಸೆಂಚುರಿಯನ್​ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ​ ಟೆಸ್ಟ್​ ಪದಾರ್ಪಣೆ ಅವಕಾಶ ಪಡೆದರು. ಪಂದ್ಯಕ್ಕೆ ಮುನ್ನ ಸ್ಟಾರ್​ ವೇಗಿ ಹಾಗೂ ಉಪನಾಯಕ ಜಸ್​ಪ್ರೀತ್​ ಬುಮ್ರಾ, 27 ವರ್ಷದ ಪ್ರಸಿದ್ಧ ಕೃಷ್ಣಗೆ ಟೆಸ್ಟ್​ ತಂಡದ ಕ್ಯಾಪ್​ ವಿತರಿಸಿದರು. ಪ್ರಸಿದ್ಧ ಈ ಮುನ್ನ 2021ರಲ್ಲಿ ಏಕದಿನ ಮತ್ತು 2023ರ ಆಗಸ್ಟ್​ನಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಪ್ರಸಿದ್ಧಕೃಷ್ಣ ಭಾರತ ಪರ ಟೆಸ್ಟ್​ ಆಡಿದ 309ನೇ ಮತ್ತು ಕರ್ನಾಟಕದ 27ನೇ ಆಟಗಾರ ಎನಿಸಿದರು.

ಜಡೇಜಾಗೆ ಬೆನ್ನುನೋವು

ಆಲ್ರೌಂಡರ್​ ರವೀಂದ್ರ ಜಡೇಜಾ ಬೆನ್ನುನೋವಿನ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾದರು. ಅವರ ಗೈರಿನಲ್ಲಿ ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ ಆಡುವ 11ರ ಬಳಗದಲ್ಲಿ ಸ್ಥಾನ ಸಂಪಾದಿಸಿದರು.

ಬವುಮಾಗೆ ಗಾಯ

ದಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಪಂದ್ಯದ ಮೊದಲ ದಿನದಾಟದ ವೇಳೆ ಗಾಯದಿಂದಾಗಿ ಮೈದಾನ ತೊರೆದರು. ಮಾಕೋರ್ ಜಾನ್ಸೆನ್​ ಎಸೆದ 20ನೇ ಓವರ್​ನಲ್ಲಿ ವಿರಾಟ್​ ಕೊಹ್ಲಿ ಹೊಡೆದ ಚೆಂಡನ್ನು ಡೈವ್​ ಮಾಡಿ ತಡೆಯುವ ಯತ್ನದ ವೇಳೆ ಬವುಮಾನ ಎಡಗಾಲಿನ ಸ್ನಾಯುಸೆಳೆತಕ್ಕೆ ಒಳಗಾದರು. ಇದರಿಂದಾಗಿ ಬವುಮಾ ಪಂದ್ಯದಲ್ಲಿ ಮರಳಿ ಕಣಕ್ಕಿಳಿಯುವುದು ಅನುಮಾನವೆನಿಸಿದೆ. ಬವುಮಾ ಗೈರಿನಲ್ಲಿ ಅನುಭವಿ ಬ್ಯಾಟರ್​ ಡೀಲ್​ ಎಲ್ಗರ್​ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಬವುಮಾ ಬದಲಿಗೆ ವಿಯಾನ್​ ಮುಲ್ಡರ್​ ಫೀಲ್ಡಿಂಗ್​ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net