ಟಿ20 ಬಳಿಕ ಭಾರತದ ಮಹಿಳೆಯರ ಏಕದಿನ ತಂಡಕ್ಕೂ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಸೇರ್ಪಡೆ

shre web
Published on

ಬೆಂಗಳೂರು: ಮುಂಬರುವ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತದ ಮಹಿಳೆಯರ ತಂಡವನ್ನು ಪ್ರಕಟಿಸಲಾಗಿದೆ. ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಗಮನಸೆಳೆದಿರುವ ಕರ್ನಾಟಕದ ಯುವ ಆಲ್ರೌಂಡರ್​ ಶ್ರೇಯಾಂಕಾ ಪಾಟೀಲ್​ ಆಸೀಸ್​ ವಿರುದ್ಧ ಟಿ20 ಜತೆಗೆ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಆಯ್ಕೆಗಾರರು ಹಲವು ಯುವ ಸ್ಪಿನ್ನರ್​ಗಳಿಗೆ ಅವಕಾಶ ಕಲ್ಪಿಸಿರುವುದರಿಂದ ರಾಜ್ಯದ ಅನುಭವಿ ಸ್ಪಿನ್ನರ್​ ರಾಜೇಶ್ವರಿ ಗಾಯಕ್ವಾಡ್​ ಹೊರಬಿದ್ದಿದ್ದಾರೆ. 20 ವರ್ಷದ ಎಡಗೈ ಸ್ಪಿನ್ನರ್​ ಮನ್ನತ್​ ಕಶ್ಯಪ್​, ಸೈಕಾ ಇಶಾಕ್​ ಮತ್ತು ಟಿಟಾಸ್​ ಸಾಧು ಕೂಡ ಏಕದಿನ ತಂಡಕ್ಕೆ ಹೊಸಮುಖಗಳಾಗಿದ್ದಾರೆ.

ಕಳೆದ ಬಾಂಗ್ಲಾದೇಶ ಪ್ರವಾಸಕ್ಕೆ ಸ್ಥಾನ ವಂಚಿತರಾಗಿದ್ದ ರೇಣುಕಾ ಸಿಂಗ್​ ಮತ್ತು ರಿಚಾ ಘೋಷ್​ ಈ ಬಾರಿ ಏಕದಿನ ತಂಡಕ್ಕೆ ಮರಳಿದ್ದಾರೆ. ರಿಚಾ ಬದಲಿಗೆ ಸ್ಥಾನ ಪಡೆದಿದ್ದ ಉಮಾ ಛೇಟ್ರಿ ಒಂದೂ ಪಂದ್ಯವಾಡುವ ಅವಕಾಶವಿಲ್ಲದೆ ಹೊರಬಿದ್ದಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ 1-2ರಿಂದ ಸೋತಿದ್ದ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಏಕದಿನ ತಂಡದಲ್ಲಿ ಪ್ರಮುಖವಾಗಿ ಬೌಲಿಂಗ್​ ವಿಭಾಗದಲ್ಲಿ ಬದಲಾವಣೆ ಮಾಡಲಾಗಿದ್ದು, ಅಂಜಲಿ ಸರ್ವಾನಿ, ಬಿ. ಅನುಷಾ, ಮೇಘಾ ಸಿಂಗ್​, ರಿಷಿ ಕನೋಜಿಯಾ, ಮೋನಿಕಾ ಪಟೇಲ್​ ಜತೆಗೆ ಆಲ್ರೌಂಡರ್​ಗಳಾದ ಪ್ರಿಯಾ ಪೂನಿಯಾ, ದೇವಿಕಾ ವೈದ್ಯ ಕೊಕ್​ ಪಡೆದಿದ್ದಾರೆ.

ಚೊಚ್ಚಲ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿ ಪರ ಮಿಂಚಿದ್ದ ಶ್ರೇಯಾಂಕಾ ಪಾಟೀಲ್​ ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಯ ಕೊನೇ ಪಂದ್ಯದಲ್ಲಿ 3 ವಿಕೆಟ್​ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

ಏಕದಿನ ತಂಡ: ಹರ್ಮಾನ್​ಪ್ರೀತ್​ ಕೌರ್​ (ನಾಯಕಿ), ಸ್ಮ$ತಿ ಮಂದನಾ (ಉಪನಾಯಕಿ), ಜೆಮೀಮಾ ರೋಡ್ರಿಗಸ್​, ಶೆಾಲಿ ವರ್ಮ, ದೀಪ್ತಿ ಶರ್ಮ, ಯಸ್ತಿಕಾ ಭಾಟಿಯಾ (ವಿ.ಕೀ), ರಿಚಾ ಘೊಷ್​ (ವಿ.ಕೀ), ಅಮನ್​ಜೋತ್​ ಕೌರ್​, ಶ್ರೇಯಾಂಕಾ ಪಾಟೀಲ್​, ಮನ್ನತ್​ ಕಶ್ಯಪ್​, ಸೈಕಾ ಇಶಾಕ್​, ರೇಣುಕಾ ಸಿಂಗ್​, ಟಿಟಾಸ್​ ಸಾಧು, ಪೂಜಾ ವಸ್ತ್ರಾಕರ್​, ಸ್ನೇಹಾ ರಾಣಾ, ಹರ್ಲೀನ್​ ಡಿಯೋಲ್​.

ಟಿ20 ತಂಡ: ಹರ್ಮಾನ್​ಪ್ರೀತ್​ ಕೌರ್​ (ನಾಯಕಿ), ಸ್ಮ$ತಿ ಮಂದನಾ (ಉಪನಾಯಕಿ), ಜೆಮೀಮಾ ರೋಡ್ರಿಗಸ್​, ಶೆಾಲಿ ವರ್ಮ, ದೀಪ್ತಿ ಶರ್ಮ, ಯಸ್ತಿಕಾ ಭಾಟಿಯಾ (ವಿ.ಕೀ), ರಿಚಾ ಘೊಷ್​ (ವಿ.ಕೀ), ಅಮನ್​ಜೋತ್​ ಕೌರ್​, ಶ್ರೇಯಾಂಕಾ ಪಾಟೀಲ್​, ಮನ್ನತ್​ ಕಶ್ಯಪ್​, ಸೈಕಾ ಇಶಾಕ್​, ರೇಣುಕಾ ಸಿಂಗ್​, ಟಿಟಾಸ್​ ಸಾಧು, ಪೂಜಾ ವಸ್ತ್ರಾಕರ್​, ಕನಿಕಾ ಅಹುಜಾ, ಮಿನ್ನು ಮಣಿ.

ವೇಳಾಪಟ್ಟಿ: ಏಕದಿನ ಪಂದ್ಯಗಳು: ಡಿಸೆಂಬರ್​ 28, 30, ಜನವರಿ 2; ಎಲ್ಲಿ: ವಾಂಖೆಡೆ ಕ್ರೀಡಾಂಗಣ, ಮುಂಬೈ; ಆರಂಭ: ಮಧ್ಯಾಹ್ನ 1.30; ಟಿ20 ಪಂದ್ಯಗಳು: ಜನವರಿ 5, 7, 9; ಎಲ್ಲಿ: ಡಿವೈ ಪಾಟೀಲ್​ ಸ್ಟೇಡಿಯಂ, ನವಿ ಮುಂಬೈ; ಆರಂಭ: ರಾತ್ರಿ 7.00; ನೇರಪ್ರಸಾರ: ಜಿಯೋಸಿನಿಮಾ

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net