

ಸೆಂಚುರಿಯನ್: ಆತಿಥೇಯ ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಮೂರೇ ದಿನಗಳಲ್ಲಿ ಇನಿಂಗ್ಸ್ ಸೋಲು ಅನುಭವಿಸಿದ ಬೆನ್ನಲ್ಲೇ ಭಾರತ ತಂಡಕ್ಕೆ ಶುಕ್ರವಾರ ಮತ್ತೊಂದು ಆಘಾತ ಎದುರಾಗಿದೆ. ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿನ ನಿಧಾನಗತಿ ಓವರ್ಗಾಗಿ ಭಾರತ ತಂಡಕ್ಕೆ ಐಸಿಸಿ, ಪಂದ್ಯದ ಸಂಭಾವನೆಯ ಶೇ. 10 ದಂಡ ವಿಧಿಸಿದೆ. ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) 3ನೇ ಆವೃತ್ತಿಯಲ್ಲಿ 2 ಅಂಕ ಕಡಿತಗೊಳಿಸಲಾಗಿದೆ.
ಭಾರತ ತಂಡ ಪಂದ್ಯದಲ್ಲಿ ನಿಗದಿತ ಸಮಯದ ವೇಳೆ 2 ಓವರ್ ಹಿಂದುಳಿದಿತ್ತು. ಹೀಗಾಗಿ ಐಸಿಸಿ ನೀತಿಸಂಹಿತೆ ಪ್ರಕಾರ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್, ಪ್ರತಿ ಓವರ್ಗೆ ಶೇ. 5ರಂತೆ ಭಾರತ ತಂಡದ ಎಲ್ಲ ಆಟಗಾರರಿಗೆ ಪಂದ್ಯ ಸಂಭಾವನೆಯ ಶೇ. 10 ದಂಡ ವಿಧಿಸಿದ್ದಾರೆ. ಜತೆಗೆ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಪ್ರತಿ ಓವರ್ಗೆ ಒಂದು ಅಂಕದಂತೆ ಎರಡು ಅಂಕಗಳನ್ನು ಕಡಿತಗೊಳಿಸಲಾಗಿದೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಶಿಕ್ಷೆಗೂ ಸಮ್ಮತಿಸಿದ್ದಾರೆ. ಇದರಿಂದ ಈ ವಿಚಾರದಲ್ಲಿ ಮುಂದೆ ಯಾವುದೇ ವಿಚಾರಣೆ ನಡೆಯುವುದಿಲ್ಲ ಎಂದು ಐಸಿಸಿ ತಿಳಿಸಿದೆ.
ಭಾರತ 6ನೇ ಸ್ಥಾನಕ್ಕೆ ಕುಸಿತ
ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ 2023-25ರ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ತಂಡ, ಮೊದಲ ಟೆಸ್ಟ್ ಸೋಲಿನ ಬಳಿಕ 5ನೇ ಸ್ಥಾನಕ್ಕೆ ಕುಸಿದಿತ್ತು. ನಿಧಾನಗತಿ ಓವರ್ಗಾಗಿ 2 ಅಂಕ ಕಡಿತಗೊಂಡ ಬಳಿಕ ಭಾರತ 6ನೇ ಸ್ಥಾನಕ್ಕೆ ಕುಸಿದಿದೆ. ಇದು ಡಬ್ಲ್ಯುಟಿಸಿಯಲ್ಲಿ ಸತತ 3ನೇ ಬಾರಿ ಫೈನಲ್ಗೇರುವ ಭಾರತದ ಆಸೆಗೆ ಹಿನ್ನಡೆಯಾಗಿ ಪರಿಣಮಿಸುವ ಭೀತಿ ಇದೆ.
ಭಾರತ ಈಗ 3 ಟೆಸ್ಟ್ ಪಂದ್ಯಗಳಿಂದ 14 ಅಂಕ ಕಲೆಹಾಕಿದ್ದು, ಶೇ. 38.89 ಅಂಕ ಹೊಂದಿದೆ. ಹಾಲಿ ಡಬ್ಲ್ಯುಟಿಸಿಯಲ್ಲಿ ಮೊದಲ ಪಂದ್ಯ ಆಡಿದ ದ. ಆಫ್ರಿಕಾ 12 ಅಂಕ ಗಳಿಸಿ ಶೇ. 100 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. 2ನೇ ಸ್ಥಾನದಲ್ಲಿದ್ದ ಪಾಕಿಸ್ತಾನ, ಆಸ್ಟ್ರೆಲಿಯಾ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ ಶೇ. 45.83 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ. ಮಾಜಿ ಚಾಂಪಿಯನ್ ನ್ಯೂಜಿಲೆಂಡ್ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ ತಂಡಗಳು ಶೇ. 50 ಅಂಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.