ಹರಿಣಗಳ ನಾಡಿನಲ್ಲಿ ಮತ್ತೊಂದು ಸತ್ವಪರೀಕ್ಷೆಗೆ ಸಜ್ಜಾದ ಯುವ ಭಾರತ; ವಿಶ್ವಕಪ್​ ನಿರಾಸೆ ಬಳಿಕ ಇಂದು ಮೊದಲ ಏಕದಿನ ಕದನ

ind vs sa web
Published on

ಜೊಹಾನ್ಸ್​ಬರ್ಗ್​​: ಏಕದಿನ ವಿಶ್ವಕಪ್​ನಲ್ಲಿ ಟ್ರೋಫಿ ಗೆಲ್ಲುವ ಸನಿಹದಲ್ಲಿ ಎಡವಿರುವ ಟೀಮ್​ ಇಂಡಿಯಾ, ಇನ್ನು ನಾಲ್ಕು ವರ್ಷಗಳ ಬಳಿಕ ಹರಿಣಗಳ ನಾಡಿನಲ್ಲೇ ನಡೆಯಲಿರುವ ಮುಂದಿನ ಆವೃತ್ತಿಯ ಸಿದ್ಧತೆಯ ಮೊದಲ ಭಾಗವಾಗಿ ಯುವ ಆಟಗಾರರ ಸತ್ವಪರೀಕ್ಷೆಗೆ ಸಜ್ಜಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರದಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಭಾರತ ಕೊನೇ ಟಿ20 ಪಂದ್ಯ ಗೆದ್ದ ವಾಂಡರರ್ಸ್​ ಮೈದಾನದಲ್ಲೇ ಮೊದಲ ಏಕದಿನ ಪಂದ್ಯ ನಡೆಯಲಿದೆ. ಕನ್ನಡಿಗ ಕೆಎಲ್​ ರಾಹುಲ್​ ಸಾರಥ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡ ಶುಭಾರಂಭ ಕಾಣುವ ತವಕದಲ್ಲಿದೆ.

ಮುಂದಿನ ವರ್ಷದ ಟಿ20 ವಿಶ್ವಕಪ್​ನತ್ತ ಸದ್ಯ ಎಲ್ಲರ ಗಮನ ಇದ್ದರೂ, 2025ರಲ್ಲಿ "ಮಿನಿ ವಿಶ್ವಕಪ್​' ಖ್ಯಾತಿಯ ಏಕದಿನ ಮಾದರಿಯ ಚಾಂಪಿಯನ್ಸ್​ ಟ್ರೋಫಿ ನಡೆಯಲಿರುವುದರಿಂದ ಅದಕ್ಕೂ ಬಲಿಷ್ಠ ತಂಡ ಕಟ್ಟುವ ಪ್ರಕ್ರಿಯೆ ನಡೆಯಬೇಕಿದೆ. ವಿಶ್ವಕಪ್​ ನಂತರದಲ್ಲಿ ಭಾರತ ಮಾತ್ರವಲ್ಲದೆ ಆತಿಥೇಯ ದಕ್ಷಿಣ ಆಫ್ರಿಕಾ ಕೂಡ ಹಲವು ಪ್ರಮುಖ ಆಟಗಾರರನ್ನು ಏಕದಿನ ಸರಣಿಯಿಂದ ಹೊರಗಿಟ್ಟಿದ್ದು, ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಇದು ಭವಿಷ್ಯದ ತಾರೆಯರ ಸರಣಿ ಎನಿಸಿದೆ.

ರೋಹಿತ್​ ಶರ್ಮ ಗೈರಿನಲ್ಲಿ ಕೆಎಲ್​ ರಾಹುಲ್​ ನಾಯಕತ್ವ ನಿಭಾಯಿಸಬೇಕಿದೆ. ಜತೆಗೆ ವಿಶ್ವಕಪ್​ನಂತೆ ಇಲ್ಲೂ ವಿಕೆಟ್​ ಕೀಪರ್​ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್​ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ವಿಶ್ವಕಪ್​ ನಂತರದಲ್ಲಿ ಅವರಿಗೆ ಇದು ಮೊದಲ ಸರಣಿಯೂ ಆಗಿರಲಿದೆ.

ಟಿ20 ತಂಡದ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಯಶಸ್ಸು ಕಂಡಿರುವ ರಿಂಕು ಸಿಂಗ್​, ಏಕದಿನದಲ್ಲೂ ಅದೇ ನಿರ್ವಹಣೆ ಪುನರಾವರ್ತಿಸುವ ಹಂಬಲದಲ್ಲಿದ್ದಾರೆ. ಸಂಜು ಸ್ಯಾಮ್ಸನ್​ ಮರುಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಇನ್ನು ಐಪಿಎಲ್​ ಮತ್ತು ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿರುವ ತಮಿಳುನಾಡು ಬ್ಯಾಟರ್​ ಸಾಯಿ ಸುದರ್ಶನ್​ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ನಿರೀೆಯಲ್ಲಿದ್ದಾರೆ.

ಬೌಲಿಂಗ್​ನಲ್ಲಿ ಅನನುಭವಿಗಳಿಗೆ ಹೊಣೆ

ವಿಶ್ವಕಪ್​ನಲ್ಲಿ ಆಡಿದ್ದ ಮೂವರು ವೇಗಿಗಳಾದ ಬುಮ್ರಾ, ಸಿರಾಜ್​, ಶಮಿ ಈ ಸರಣಿಗೆ ಗೈರಾಗಿದ್ದು, ಮುಕೇಶ್​ ಕುಮಾರ್​, ಆವೇಶ್​ ಖಾನ್​ ಮತ್ತು ಅರ್ಷದೀಪ್​ ಸಿಂಗ್​ ಕಣಕ್ಕಿಳಿಯಲಿದ್ದಾರೆ. ಆತಿಥೇಯ ದಣ ಆಫ್ರಿಕಾದ ವೇಗದ ಬೌಲಿಂಗ್​ ವಿಭಾಗವೂ ರಬಾಡ, ನೋಕಿಯಾ, ಕೋಟ್​ಜೀ, ಎನ್​ಗಿಡಿ ಗೈರಿನ ಹಿನ್ನಡೆ ಹೊಂದಿದೆ. ಸ್ಪಿನ್​ ವಿಭಾಗದಲ್ಲಿ ಮಾತ್ರ ಉಭಯ ತಂಡಗಳೂ ಅನುಭವಿಗಳನ್ನು ಹೊಂದಿವೆ.

ಸ್ಪಿನ್​ ಸ್ನೇಹಿ ಪಿಚ್​

ಜೊಹಾನ್ಸ್​ಬರ್ಗ್​ನಲ್ಲಿ ನಡೆದ ಕೊನೇ ಟಿ20 ಪಂದ್ಯದ ವೇಳೆ ಪಿಚ್​ ಸ್ಪಿನ್​ ಸ್ನೇಹಿಯಾಗಿ ವರ್ತಿಸಿತ್ತು. ಏಕದಿನದಲ್ಲೂ ಪಿಚ್​ ಇದೇ ರೀತಿ ವರ್ತಿಸಿದರೆ ಭಾರತಕ್ಕೆ ವರದಾನವಾಗಲಿದೆ. ಕುಲದೀಪ್​ ಜತೆಗೆ ಈಗ ಅಕ್ಷರ್​ ಪಟೇಲ್​, ಯಜುವೇಂದ್ರ ಚಾಹಲ್​ ಕೂಡ ತಂಡವನ್ನು ಸೇರಿಕೊಂಡಿದ್ದು, ಮೂವರೂ ಆಡಿದರೆ ಹರಿಣಗಳಿಗೆ ಕಠಿಣ ಸವಾಲು ಎದುರಾಗಲಿದೆ. ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯದೆ ನಿರಾಸೆ ಅನುಭವಿಸಿದ್ದ ಚಾಹಲ್​, ವಿಜಯ್​ ಹಜಾರೆ ಟ್ರೋಫಿಯಲ್ಲಿ ಮಿಂಚುವ ಮೂಲಕ ಮತ್ತೆ ತಂಡಕ್ಕೆ ಮರಳಿದ್ದಾರೆ. 33 ವರ್ಷದ ಚಾಹಲ್​ ಈ ಬಾರಿ ಅವಕಾಶವನ್ನು ಬಾಕಿಕೊಳ್ಳುವ ತವಕದಲ್ಲಿದ್ದಾರೆ.

ಟೀಮ್​ ನ್ಯೂಸ್​:

ಭಾರತ: ಶುಭಮಾನ್​ ಗಿಲ್​ ಗೈರಿನಲ್ಲಿ ತಮಿಳುನಾಡಿನ ಯುವ ಬ್ಯಾಟರ್​ ಸಾಯಿ ಸುದರ್ಶನ್​ ಭಾರತ ತಂಡದ ಪರ ಪದಾರ್ಪಣೆಯ ಅವಕಾಶ ಪಡೆಯುವ ನಿರೀೆ ಇದೆ. ಅನಾರೋಗ್ಯದಿಂದಾಗಿ ಟಿ20 ಸರಣಿಯಲ್ಲಿ ಆಡಿರದ ಋತುರಾಜ್​ ಗಾಯಕ್ವಾಡ್​ ಏಕದಿನಕ್ಕೆ ಫಿಟ್​ ಆಗಿದ್ದಾರೆ. 6ನೇ ಕ್ರಮಾಂಕಕ್ಕೆ ಸಂಜು ಸ್ಯಾಮ್ಸನ್​-ರಿಂಕು ಸಿಂಗ್​ ನಡುವೆ ಪೈಪೋಟಿ ಇದೆ.

ಸಂಭಾವ್ಯ ತಂಡ: ಋತುರಾಜ್​ ಗಾಯಕ್ವಾಡ್​, ಸಾಯಿ ಸುದರ್ಶನ್​, ತಿಲಕ್​ ವರ್ಮ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​ (ವಿ.ಕೀ, ನಾಯಕ), ಸಂಜು ಸ್ಯಾಮ್ಸನ್​/ರಿಂಕು ಸಿಂಗ್​, ಅಕ್ಷರ್​ ಪಟೇಲ್​, ಅರ್ಷದೀಪ್​ ಸಿಂಗ್​, ಆವೇಶ್​ ಖಾನ್​, ಕುಲದೀಪ್​ ಯಾದವ್​, ಮುಕೇಶ್​ ಕುಮಾರ್​.

ದಕ್ಷಿಣ ಆಫ್ರಿಕಾ: ಎಡಗೈ ವೇಗಿ ನಾಂಡ್ರೆ ರ್ಬಗರ್​ ಟಿ20 ಪರ್ದಾಪಣೆಯ ಬಳಿಕ ಏಕದಿನ ತಂಡಕ್ಕೂ ಪ್ರವೇಶ ಪಡೆಯುವ ನಿರೀಕ್ಷೆ ಇದೆ. ದಣ ಆಫ್ರಿಕಾ ತಂಡ ಸ್ಪಿನ್ನರ್​ಗಳಾದ ಕೇಶವ್​ ಮಹಾರಾಜ್​ ಮತ್ತು ತಬರೇಜ್​ ಶಮ್ಸಿ ಇಬ್ಬರನ್ನೂ ಆಡಿಸುವುದೇ ಅಥವಾ ಒಬ್ಬರನ್ನು ಮಾತ್ರ ಕಣಕ್ಕಿಳಿಸುವುದೇ ಎಂಬುದು ಸ್ಪಷ್ಟವಿಲ್ಲ.

ಸಂಭಾವ್ಯ ತಂಡ: ರೀಜಾ ಹೆಂಡ್ರಿಕ್ಸ್​, ಟೋನಿ ಡಿ ಜಾರ್ಜಿ, ವಾನ್​ ಡರ್​ ಡುಸೆನ್​, ಏಡನ್​ ಮಾರ್ಕ್ರಮ್​ (ನಾಯಕ), ಹೆನ್ರಿಕ್​ ಕ್ಲಾಸೆನ್​ (ವಿ.ಕೀ), ಡೇವಿಡ್​ ಮಿಲ್ಲರ್​, ಪೆಹ್ಲುಕ್​ವಾಯೊ, ವಿಯಾನ್​ ಮುಲ್ಡರ್​, ನಾಂಡ್ರೆ ಬರ್ಗರ್​, ಕೇಶವ್​ ಮಹಾರಾಜ್​/ತಬರೇಜ್​ ಶಮ್ಸಿ, ಲಿಜಾಡ್​ ವಿಲಿಯಮ್ಸ್​.

*ಮುಖಾಮುಖಿ: 91

ಭಾರತ: 38

ದಕ್ಷಿಣ ಆಫ್ರಿಕಾ: 50

ರದ್ದು: 3

*ದಕ್ಷಿಣ ಆಫ್ರಿಕಾದಲ್ಲಿ: 37

ಭಾರತ: 10

ದಕ್ಷಿಣ ಆಫ್ರಿಕಾ: 25

ರದ್ದು: 2

ಏಕದಿನ ಸರಣಿ ವೇಳಾಪಟ್ಟಿ

ಪಂದ್ಯ ದಿನಾಂಕ ಎಲ್ಲಿ ಆರಂಭ

1. ಡಿ.17 ಜೊಹಾನ್ಸ್​ರ್ಬಗ್​ ಮಧ್ಯಾಹ್ನ 1.30

2. ಡಿ.19 ಗೆರ್ಬಹ ಸಂಜೆ 4.30

3. ಡಿ.21 ಪಾರ್ಲ್​ ಸಂಜೆ 4.30

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​/ಹಾಟ್​ಸ್ಟಾರ್​

ದಕ್ಷಿಣ ಆಫ್ರಿಕಾಕ್ಕೆ ಪಿಂಕ್​ ಜೆರ್ಸಿ!

ದಕ್ಷಿಣ ಆಫ್ರಿಕಾ ತಂಡ ಸ್ತನ ಕ್ಯಾನ್ಸರ್​ ಜಾಗೃತಿಯ ಹಿನ್ನೆಲೆಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ತನ್ನ ಎಂದಿನ ಹಸಿರು ಜೆರ್ಸಿಗೆ ಬದಲಾಗಿ ನಸುಗೆಂಪು ಬಣ್ಣದ ಜೆರ್ಸಿಯಲ್ಲಿ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net