ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಐತಿಹಾಸಿಕ 11 ಪ್ರಥಮಗಳ ನಿರೀಕ್ಷೆ...

web paris olympics
Published on

ಬೆಂಗಳೂರು: ಭಾರತದ ಕ್ರೀಡಾಪಟುಗಳು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕೆಲ ಐತಿಹಾಸಿಕ ಸಾಧನೆಗಳನ್ನು ಮಾಡುವ ನಿರೀಕ್ಷೆಗಳಿವೆ. ಅಂಥ 11 ಪ್ರಮುಖ ಮೈಲಿಗಲ್ಲುಗಳ ಮೆಲುಕು ಇಲ್ಲಿದೆ. ಇದರಲ್ಲಿ ಎಷ್ಟು ಕನಸುಗಳು ನನಸಾಗಲಿವೆ ಎಂಬುದನ್ನು ಮುಂದಿನ 16 ದಿನಗಳಲ್ಲಿ ಕಾದುನೋಡಬೇಕಾಗಿದೆ...

1. 10 ಅಥವಾ ಅದಕ್ಕಿಂತ ಹೆಚ್ಚಿನ ಪದಕ

ಭಾರತ ಇದುವರೆಗೆ ಒಲಿಂಪಿಕ್ಸ್​ ಕೂಟವೊಂದರಲ್ಲಿ ಎರಡಂಕಿ ಪದಕ ಗೆದ್ದ ದೃಷ್ಟಾಂತವಿಲ್ಲ. ಕಳೆದ 2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ 7 ಪದಕ ಜಯಿಸಿರುವುದೇ ಇದುವರೆಗಿನ ಗರಿಷ್ಠ ಪದಕ ಗೆಲುವಾಗಿದೆ. ಈ ಬಾರಿ ಭಾರತ 10 ಅಥವಾ ಅದಕ್ಕಿಂತ ಹೆಚ್ಚಿನ ಪದಕ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

2. ಒಂದಕ್ಕಿಂತ ಹೆಚ್ಚಿನ ಚಿನ್ನದ ಪದಕ

ಭಾರತ ಇದುವರೆಗೆ ಪುರುಷರ ಹಾಕಿಯಲ್ಲಿ 8 ಮತ್ತು ವೈಯಕ್ತಿಕ ವಿಭಾಗದಲ್ಲಿ 2 (ಅಭಿನವ್​ ಬಿಂದ್ರಾ, ನೀರಜ್​ ಚೋಪ್ರಾ) ಚಿನ್ನದ ಪದಕ ಜಯಿಸಿದೆ. ಆದರೆ ಒಮ್ಮೆಯೂ ಒಂದೇ ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಚಿನ್ನ ಗೆದ್ದ ದೃಷ್ಟಾಂತವಿಲ್ಲ. ಈ ಬಾರಿ ಅಂಥ ಐತಿಹಾಸಿಕ ಸಾಧನೆಯ ನಿರೀಕ್ಷೆಗಳಿವೆ. ನೀರಜ್​ ಚೋಪ್ರಾ ಚಿನ್ನ ಉಳಿಸಿಕೊಂಡರೆ, ಅವರೊಂದಿಗೆ ಚಿನ್ನ ಗೆಲ್ಲಬಹುದಾದ ಮತ್ತೋರ್ವ ಸಾಧಕ ಯಾರು ಎಂಬುದಷ್ಟೇ ಕುತೂಹಲಕರ.

3. ಎರಡು ವೈಯಕ್ತಿಕ ಚಿನ್ನದ ಪದಕ

ಮೇಜರ್​ ಧ್ಯಾನ್​ಚಂದ್​ ಸಹಿತ ಭಾರತ ಹಾಕಿ ತಂಡದ ಪರ ಕೆಲ ಆಟಗಾರರು 3 ಒಲಿಂಪಿಕ್ಸ್​ ಚಿನ್ನದ ಪದಕವನ್ನೂ ಗೆದ್ದ ದೃಷ್ಟಾಂತವಿದೆ. ಆದರೆ ವೈಯಕ್ತಿಕ ವಿಭಾಗದಲ್ಲಿ ಇದುವರೆಗೆ ಯಾರೂ ಎರಡು ಚಿನ್ನ ಗೆದ್ದ ಸಾಧನೆ ದಾಖಲಾಗಿಲ್ಲ. ಈ ಬಾರಿ ಜಾವೆಲಿನ್​ ಎಸೆತ ಸ್ಪರ್ಧೆಯಲ್ಲಿ ನೀರಜ್​ ಚೋಪ್ರಾ ಮತ್ತೊಮ್ಮೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಒಲಿಂಪಿಕ್ಸ್​ ಇತಿಹಾಸದಲ್ಲಿ 2 ವೈಯಕ್ತಿಕ ಸ್ವರ್ಣ ಪದಕ ಗೆದ್ದ ಮೊದಲ ಸಾಧಕ ಎನಿಸಲಿದ್ದಾರೆ.

4. ಮೂರು ವೈಯಕ್ತಿಕ ಪದಕ

ಇದುವರೆಗೆ ಇಬ್ಬರು ಭಾರತೀಯರು (ಸುಶೀಲ್​ ಕುಮಾರ್​, ಪಿವಿ ಸಿಂಧು) ಭಿನ್ನ ಒಲಿಂಪಿಕ್ಸ್​ ಆವೃತ್ತಿಗಳಲ್ಲಿ ಎರಡು ಪದಕ ಗೆದ್ದುಕೊಂಡಿದ್ದಾರೆ. ಆದರೆ ಯಾವ ಕ್ರೀಡಾಪಟುವೂ 3 ವೈಯಕ್ತಿಕ ಪದಕ ಗೆದ್ದ ದೃಷ್ಟಾಂತವಿಲ್ಲ. ಪಿವಿ ಸಿಂಧು ಈ ಬಾರಿ ಪದಕ ಗೆದ್ದರೆ ಒಲಿಂಪಿಕ್ಸ್​ನಲ್ಲಿ ತ್ರಿವಳಿ ಪದಕ ಗೆದ್ದ ಮೊದಲ ಭಾರತೀಯರೆನಿಸಲಿದ್ದಾರೆ. ಚಿನ್ನ ಗೆದ್ದರೆ ಎಲ್ಲ ಮೂರು ಬಣ್ಣದ ಒಲಿಂಪಿಕ್ಸ್​ ಪದಕ ಜಯಿಸಿದ ಮೊದಲ ಭಾರತೀಯರೆಂಬ ಇತಿಹಾಸವನ್ನೂ ಸೃಷ್ಟಿಸಲಿದ್ದಾರೆ.

5. ಚಿನ್ನ ಗೆದ್ದ ಮೊದಲ ಮಹಿಳೆ

ಭಾರತ ಪುರುಷರ ಹಾಕಿ ತಂಡ, ಬಿಂದ್ರಾ, ನೀರಜ್​ ಹೀಗೆ ಇದುವರೆಗೆ ಒಲಿಂಪಿಕ್ಸ್​ನಲ್ಲಿ ಪುರುಷರೇ ಚಿನ್ನದ ಪದಕ ಗೆದ್ದಿದ್ದರೆ, ಭಾರತದ ಮಹಿಳೆಯೂ ಚಿನ್ನದ ಪದಕಕ್ಕೆ ಕೊರಳೊಡ್ಡುವ ಐತಿಹಾಸಿಕ ಕ್ಷಣ ಪ್ಯಾರಿಸ್​ನಲ್ಲಿ ಕೂಡಿಬರಬಹುದೇ ಎಂಬ ನಿರೀಕ್ಷೆ ಹರಡಿದೆ. ಮಹಿಳಾ ಶೂಟರ್​ಗಳು, ಬಾಕ್ಸರ್​ಗಳು, ಕುಸ್ತಿಪಟುಗಳು, ವೇಟ್​ಲ್ಟಿರ್​ ಮೀರಾಬಾಯಿ ಚಾನು, ಷಟ್ಲರ್​ ಪಿವಿ ಸಿಂಧು ಮುಂತಾದವರಿಗೆ ಅಂಥ ಅವಕಾಶ, ಸಾಮರ್ಥ್ಯಗಳಿವೆ. ಪಿವಿ ಸಿಂಧು 2016 ಮತ್ತು ಮೀರಾಬಾಯಿ 2021ರಲ್ಲಿ ರಜತ ಪದಕ ಗೆದ್ದಿರುವುದೇ ಒಲಿಂಪಿಕ್ಸ್​ನಲ್ಲಿ ಭಾರತೀಯ ಮಹಿಳೆಯರ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.

6. ಮಹಿಳಾ ಶೂಟಿಂಗ್​ನಲ್ಲಿ ಮೊದಲ ಪದಕ

ಭಾರತದ ಪುರುಷ ಶೂಟರ್​ಗಳು ಒಲಿಂಪಿಕ್ಸ್​ನಲ್ಲಿ ಇದುವರೆಗೆ ಮೂರೂ ಬಣ್ಣದ (ಬಿಂದ್ರಾ ಚಿನ್ನ, ವಿಜಯ್​, ರಾಥೋಡ್​ ಬೆಳ್ಳಿ, ನಾರಂಗ್​ ಕಂಚು) ಪದಕಗಳನ್ನು ಗೆದ್ದುಕೊಂಡಿದ್ದಾರೆ. ಆದರೆ ಭಾರತದ ಮಹಿಳಾ ಶೂಟರ್​ಗಳು ನಿರೀೆಗಳನ್ನು ಹುಸಿಗೊಳಿಸುತ್ತ ಬಂದಿದ್ದಾರೆ. ಈ ಸಲವಾದರೂ ಮಹಿಳಾ ಶೂಟರ್​ಗಳು ಪದಕಕ್ಕೆ ಗುರಿ ಇಡಬಹುದೇ ಎಂಬ ನಿರೀಕ್ಷೆ ಇದೆ. ಮನು ಭಾಕರ್​, ಸಿಫ್ಟ್​ ಕೌರ್​ ಸಮ್ರಾ ಈ ಸಾಧನೆಯ ಭರವಸೆಯನ್ನೂ ಮೂಡಿಸಿದ್ದಾರೆ.

7. ಬ್ಯಾಡ್ಮಿಂಟನ್​ನಲ್ಲಿ ಮೊದಲ ಸ್ವರ್ಣ

ಒಲಿಂಪಿಕ್ಸ್​ ಬ್ಯಾಡ್ಮಿಂಟನ್​ನಲ್ಲಿ ಭಾರತ ಇದುವರೆಗೆ ಬೆಳ್ಳಿ, ಕಂಚಿನ ಸಂಭ್ರಮವನ್ನು ಕಂಡಿದೆ. ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿನ್ನದ ಪದಕಕ್ಕೆ ಕೊರಳೊಡ್ಡುವ ತವಕವಿದೆ. ಪಿವಿ ಸಿಂಧು ಜತೆಗೆ ಪುರುಷರ ಡಬಲ್ಸ್​ನಲ್ಲಿ ಚಿರಾಗ್​ ಶೆಟ್ಟಿ-ಸಾತ್ವಿಕ್​ ಸಾಯಿರಾಜ್​, ಸಿಂಗಲ್ಸ್​ನಲ್ಲಿ ಎಚ್​ಎಸ್​ ಪ್ರಣಯ್​, ಲಕ್ಷ್ಯ ಸೇನ್​ರಂಥ ಸ್ಟಾರ್​ ಷಟ್ಲರ್​ಗಳು ಕಣದಲ್ಲಿರುವುದರಿಂದ ಮತ್ತು ದಿಗ್ಗಜ ಪ್ರಕಾಶ್​ ಪಡುಕೋಣೆ ತಂಡದ ಮೆಂಟರ್​ ಆಗಿರುವುದರಿಂದ ನಿರೀಕ್ಷೆಯೂ ಹೆಚ್ಚಿದೆ.

8. ಬಾಕ್ಸಿಂಗ್​ನಲ್ಲಿ ಮೊದಲ ಬಾರಿ ಚಿನ್ನ/ಬೆಳ್ಳಿ

ಭಾರತ ಬಾಕ್ಸಿಂಗ್​ನಲ್ಲಿ ಇದುವರೆಗೆ 3 ಕಂಚಿನ ಪದಕಗಳನ್ನು (ವಿಜೇಂದರ್​, ಮೇರಿಕೋಮ್​, ಲವ್ಲಿನಾ) ಗೆದ್ದುಕೊಂಡಿದೆ. ಈ ಬಾರಿ ಭಾರತೀಯ ಬಾಕ್ಸರ್​ಗಳು ಫೈನಲ್​ಗೇರುವ ಮೂಲಕ ಚಿನ್ನ ಅಥವಾ ಕನಿಷ್ಠ ಬೆಳ್ಳಿ ಪದಕ ಗೆಲ್ಲುವರೇ ಎಂಬ ಕುತೂಹಲವಿದೆ. ಲವ್ಲಿನಾ ಬೋಗೋರ್ಹೈನ್​, ನಿಖತ್​ ಜರೀನ್​ ಈ ನಿಟ್ಟಿನಲ್ಲಿ ಫೇವರಿಟ್​ಗಳೆನಿಸಿದ್ದಾರೆ. ಇನ್ನು ಲವ್ಲಿನಾ ಒಲಿಂಪಿಕ್ಸ್​ನಲ್ಲಿ ಅವಳಿ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್​ ಎನಿಸುವ ಅವಕಾಶವನ್ನೂ ಹೊಂದಿದ್ದಾರೆ.

9. ಮತ್ತೊಂದು ಹೊಸ ಕ್ರೀಡೆಯಲ್ಲಿ ಪದಕ

ಭಾರತ ಒಲಿಂಪಿಕ್ಸ್​ನಲ್ಲಿ ಇದುವರೆಗೆ 8 ಕ್ರೀಡೆಗಳಲ್ಲಿ (ಹಾಕಿ, ಅಥ್ಲೆಟಿಕ್ಸ್​, ಕುಸ್ತಿ, ಶೂಟಿಂಗ್​, ಟೆನಿಸ್​, ವೇಟ್​ಲಿಫ್ಟಿಂಗ್​, ಬ್ಯಾಡ್ಮಿಂಟನ್​, ಬಾಕ್ಸಿಂಗ್​) ಪದಕಗಳನ್ನು ಗೆದ್ದುಕೊಂಡಿದೆ. ಈ ಬಾರಿ ಭಾರತ ಯಾವುದಾದರೂ ಹೊಸ ಕ್ರೀಡೆಯಲ್ಲಿ ಪದಕ ಗೆಲ್ಲಬಹುದೇ ಎಂಬ ನಿರೀಕ್ಷೆ ಹರಡಿದೆ. ಆರ್ಚರಿ, ಗಾಲ್ಫ್​ ಈ ಪಟ್ಟಿಗೆ ಸೇರಿಕೊಳ್ಳಬಹುದಾದ ಪ್ರಮುಖ ಕ್ರೀಡೆಗಳಾಗಿವೆ.

10. ಮಿಶ್ರ ವಿಭಾಗದಲ್ಲೂ ಪದಕ ಜಯ

ಭಾರತ ಇದುವರೆಗೆ ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಆದರೆ ಇದುವರೆಗೆ ಪುರುಷ-ಮಹಿಳೆಯರು ಜತೆಯಾಗಿ ಸ್ಪರ್ಧಿಸುವ ಮಿಶ್ರ ವಿಭಾಗದಲ್ಲಿ ಪದಕ ಗೆದ್ದಿಲ್ಲ. ಈ ಬಾರಿ ಶೂಟಿಂಗ್​, ಆರ್ಚರಿಯಲ್ಲಿ ಭಾರತಕ್ಕೆ ಈ ಐತಿಹಾಸಿಕ ಸಾಧನೆ ಮಾಡುವ ಅವಕಾಶ ಹೆಚ್ಚಿದೆ.

11. ಒಂದೇ ಆವೃತ್ತಿಯಲ್ಲಿ ಅವಳಿ ಪದಕ

ಬ್ರಿಟನ್​ ಮೂಲದ ನಾರ್ಮನ್​ ಪ್ರಿಚರ್ಡ್​ 1900ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ 2 ಬೆಳ್ಳಿ ಪದಕಗಳನ್ನು (200 ಮೀ. ಹರ್ಡಲ್ಸ್​, 200 ಮೀ) ಗೆದ್ದುಕೊಂಡಿದ್ದರು. ಆದರೆ ಈ ಪದಕಗಳು ಭಾರತದ ಹೆಸರಿಗೆ ಸೇರಿದ್ದರೂ, ಇದು ಭಾರತೀಯರ ಸಾಧನೆ ಎಂದು ಪರಿಗಣಿಸಲ್ಪಡುವುದಿಲ್ಲ. ಹೀಗಾಗಿ ಭಾರತದ ಯಾವ ಕ್ರೀಡಾಪಟುವೂ ಇದುವರೆಗೆ ಒಂದೇ ಆವೃತ್ತಿಯಲ್ಲಿ ಅವಳಿ ಪದಕ ಗೆದ್ದಿಲ್ಲ ಎನ್ನಬಹುದು. ಈ ಬಾರಿ ಅಂಥ ಸಾಧನೆ ಮಾಡುವ ಅವಕಾಶ ಕೆಲ ಕ್ರೀಡಾಪಟುಗಳ ಮುಂದೆ ಇದೆ. ಶೂಟಿಂಗ್​ನಲ್ಲಿ ಮನು ಭಾಕರ್​ 2 ವೈಯಕ್ತಿಕ ಮತ್ತು 1 ಮಿಶ್ರ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಗರಿಷ್ಠ 2 ಪದಕ ಗೆಲ್ಲುವ ಅವಕಾಶ ಹೊಂದಿದ್ದಾರೆ. ಆರ್ಚರಿ ಪಟುಗಳೂ ವೈಯಕ್ತಿಕ, ತಂಡ, ಮಿಶ್ರ ವಿಭಾಗದಲ್ಲಿ ಸ್ಪರ್ಧಿಸಿ 3 ಪದಕ ಗೆಲ್ಲುವ ಅವಕಾಶ ಹೊಂದಿದ್ದಾರೆ. ಇತರ ಕೆಲ ಶೂಟರ್​ಗಳಾದ ರಿದಂ ಸಂಗ್ವಾನ್​, ಸರಬ್ಜೋತ್​ ಸಿಂಗ್​, ಅರ್ಜುನ್​ ಸಿಂಗ್​, ಸಂದೀಪ್​ ಸಿಂಗ್​, ಇಲವೆನಿಲ್​, ರಮಿತಾ, ಅನಂತ್​ಜೀತ್​, ಮಹೇಶ್ವರಿ ವೈಯಕ್ತಿಕ ಸ್ಪರ್ಧೆ ಜತೆಗೆ ಮಿಶ್ರ ವಿಭಾಗದಲ್ಲೂ ಪದಕಕ್ಕೆ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್​ನಲ್ಲಿ ಪಾರುಲ್​ ಚೌಧರಿ (5 ಸಾವಿರ ಮೀ, 3 ಸಾವಿರ ಮೀ) ಮತ್ತು ಪ್ರಿಯಾಂಕಾ ಗೋಸ್ವಾಮಿ (20 ಕಿಮೀ. ನಡಿಗೆ, ಮ್ಯಾರಥಾನ್​ ಮಿಶ್ರ ನಡಿಗೆ) 2 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಟೇಬಲ್​ ಟೆನಿಸ್​ನಲ್ಲಿ ಶರತ್​ ಕಮಲ್​, ಹಮೀರ್ತ್​ ದೇಸಾಯಿ, ಮನಿಕಾ ಮತ್ತು ಶ್ರೀಜಾಗೆ ಸಿಂಗಲ್ಸ್​ ಮತ್ತು ತಂಡ ವಿಭಾಗದಲ್ಲಿ ಪದಕ ಗೆಲ್ಲುವ ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net