ಪಾಕಿಸ್ತಾನದಲ್ಲಿ ಇತಿಹಾಸ ಬರೆಯಲು ಭಾರತ ಸಜ್ಜು; ಸಾಂಪ್ರದಾಯಿಕ ಎದುರಾಳಿ ನೆಲದಲ್ಲಿ 60 ವರ್ಷಗಳ ಬಳಿಕ ಡೇವಿಸ್​ ಕಪ್​ ಪಂದ್ಯ

davis web
Published on

ಇಸ್ಲಾಮಾಬಾದ್​: ಪ್ರಮುಖ ಸಿಂಗಲ್ಸ್​ ಆಟಗಾರರ ಗೈರಿನ ನಡುವೆ ಪಾಕಿಸ್ತಾನದ ನೆಲದಲ್ಲಿ 60 ವರ್ಷಗಳ ಬಳಿಕ ಡೇವಿಸ್​ ಕಪ್​ ಪಂದ್ಯ ಆಡಲು ಸಜ್ಜಾಗಿರುವ ಭಾರತ ತಂಡ, ವಿಶ್ವ ಗುಂಪು-1ರ ಪ್ಲೇಆಫ್​ ಸೆಣಸಾಟದಲ್ಲಿ ಐತಿಹಾಸಿಕ ಗೆಲುವಿನ ಹಂಬಲದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ವಿರುದ್ಧದ ಇದುವರೆಗಿನ 7 ಡೇವಿಸ್​ ಕಪ್​ ಕಾದಾಟಗಳಲ್ಲೂ ಗೆದ್ದ ಅಜೇಯ ದಾಖಲೆ ಹೊಂದಿರುವ ಭಾರತ ಈ ಸಲವೂ ಫೇವರಿಟ್​ ತಂಡವಾಗಿ ಕಣಕ್ಕಿಳಿಯಲಿದೆ.

ಹುಲ್ಲುಹಾಸಿನ ಕೋರ್ಟ್​ನಲ್ಲಿ ಪಂದ್ಯಗಳು ನಡೆಯಲಿರುವುದರಿಂದ ಆತಿಥೇಯ ಪಾಕಿಸ್ತಾನ ತಂಡದಿಂದ ನಿಕಟ ಪೈಪೋಟಿ ನಿರೀಕ್ಷಿಸಲಾಗಿದೆ. ಯಾಕೆಂದರೆ ಪಾಕಿಸ್ತಾನದ ಪ್ರಮುಖ ಆಟಗಾರರಾದ ಐಸಾಮ್​ ಉಲ್​ ಹಕ್​ ಖುರೇಷಿ ಮತ್ತು ಅಕೀಲ್​ ಖಾನ್​ ಗ್ರಾಸ್​ ಕೋರ್ಟ್​ನಲ್ಲಿ ಉತ್ತಮ ನಿರ್ವಹಣೆ ತೋರಿದ ದಾಖಲೆ ಹೊಂದಿದ್ದಾರೆ. ಇಸ್ಲಾಮಾಬಾದ್​ನ ಅಂಗಣ ವೇಗ ಮತ್ತು ಲೋ ಬೌನ್ಸ್​ನಿಂದ ಕೂಡಿದೆ. ಹೀಗಾಗಿ ಗ್ರಾಸ್​ ಕೋರ್ಟ್​ನಲ್ಲಿ ಆಡಿದ ಉತ್ತಮ ಅನುಭವ ಹೊಂದಿರುವ ಡಬಲ್ಸ್​ ವಿಶೇಷಜ್ಞ ಆಟಗಾರ ಎನ್​. ಶ್ರೀರಾಮ್​ ಬಾಲಾಜಿರನ್ನು ಭಾರತ ಸಿಂಗಲ್ಸ್​ನಲ್ಲಿ ಕಣಕ್ಕಿಳಿಸಲಿದೆ. ರಾಮ್​ಕುಮಾರ್​ ರಾಮನಾಥನ್​ ತಂಡದಲ್ಲಿರುವ ಅತ್ಯುತ್ತಮ ಸಿಂಗಲ್ಸ್​ ಆಟಗಾರರಾಗಿದ್ದು, ಮೊದಲ ಪಂದ್ಯದಲ್ಲಿ ಆಡಲಿದ್ದಾರೆ. 43 ವರ್ಷದ ಪಾಕ್​ ಅನುಭವಿ ಆಟಗಾರ ಐಸಾಮ್​ ಉಲ್​ ಹಕ್​ ಖುರೇಷಿ ವಿರುದ್ಧ ರಾಮ್​ಕುಮಾರ್​ ಮೊದಲ ಪಂದ್ಯ ಆಡಲಿದ್ದಾರೆ.

ಭಾರತ ತಂಡ ಡಬಲ್ಸ್​ನಲ್ಲಿ ಯೂಕಿ ಭಾಂಬ್ರಿ-ಸಾಕೇತ್​ ಮೈನೇನಿ ಜೋಡಿಯನ್ನು ಕಣಕ್ಕಿಳಿಸಲಿದ್ದು, ಪಾಕ್​ನಿಂದ ರ್ಬಕತ್​ಉಲ್ಲಾ-ಮುಜಮಿಲ್​ ಮುರ್ತಜ ಜೋಡಿ ಸವಾಲೊಡ್ಡಲಿದೆ. ಇತ್ತೀಚೆಗೆ ಎಟಿಪಿ ಚಾಲೆಂಜರ್​ಗಳಲ್ಲಿ ಉತ್ತಮ ನಿರ್ವಹಣೆ ತೋರಿರುವ ರಾಮ್​ಕುಮಾರ್​ ಸಿಂಗಲ್ಸ್​ ರ್ಯಾಂಕಿಂಗ್​ನಲ್ಲಿ 461ನೇ ಸ್ಥಾನದಲ್ಲಿದ್ದರೆ, ಕನ್ನಡಿಗ ರೋಹನ್​ ಬೋಪಣ್ಣರ ಮಾಜಿ ಡಬಲ್ಸ್​ ಜತೆಗಾರ ಐಸಾಮ್​ ಉಲ್​ ಹಕ್​ ಸಿಂಗಲ್ಸ್​ ಆಡದೆ ಸುದೀರ್ ಸಮಯವಾಗಿದೆ.

ಪಾಕ್​ ತಂಡ ತವರಿನಲ್ಲಿ ಆಡುವ ಲಾಭ ಹೊಂದಿದ್ದರೂ, ಭದ್ರತಾ ಕಾರಣಗಳಿಂದಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೇವಲ 500 ವಿಶೇಷ ಆಹ್ವಾನಿತ ಗಣ್ಯರು ಮತ್ತು ಅಭಿಮಾನಿಗಳು ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

ಮುಖಾಮುಖಿ ವೇಳಾಪಟ್ಟಿ
ಶನಿವಾರ (ಆರಂಭ: ಬೆಳಗ್ಗೆ 11.30)
*ರಾಮ್​ಕುಮಾರ್​ Vs ಐಸಾಮ್​ ಉಲ್​ ಹಕ್​
*ಎನ್​. ಶ್ರೀರಾಮ್​ ಬಾಲಾಜಿ Vs ಅಕೀಲ್​ ಖಾನ್​
ಭಾನುವಾರ (ಆರಂಭ: ಬೆಳಗ್ಗೆ 11.30)
*ಯೂಕಿ ಭಾಂಬ್ರಿ, ಸಾಕೇತ್​ Vs ಮುರ್ತಜ, ರ್ಬಕತ್​
*ರಾಮ್​ಕುಮಾರ್​ Vs ಅಕೀಲ್​ ಖಾನ್​
*ಎನ್​. ಶ್ರೀರಾಮ್​ ಬಾಲಾಜಿ Vs ಐಸಾಮ್​ ಉಲ್​ ಹಕ್​

ಕನ್ನಡಿಗ ಜೀಶನ್​ ಅಲಿಗೆ ವಿಶೇಷ ಕ್ಷಣ
ಪಾಕಿಸ್ತಾನ ನೆಲದಲ್ಲಿ 60 ವರ್ಷಗಳ ಹಿಂದೆ 1964ರಲ್ಲಿ ಕೊನೆಯದಾಗಿ ಆಡಿದಾಗ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಅಖ್ತರ್​ ಅಲಿ ಅವರ ಪುತ್ರ ಜೀಶನ್​ ಅಲಿ ಈಗಿನ ತಂಡಕ್ಕೆ ಕೋಚ್​ ಜತೆಗೆ ಆಡದ ನಾಯಕರೂ ಆಗಿದ್ದಾರೆ. ಹೀಗಾಗಿ 54 ವರ್ಷದ ಕನ್ನಡಿಗ ಜೀಶನ್​ ಅಲಿಗೆ ಇದೊಂದು ವಿಶೇಷ ಕ್ಷಣವಾಗಿದೆ. ಭಾರತ ಪರ 8 ವಷ್​ ಡೇವಿಸ್​ ಕಪ್​ನಲ್ಲಿ ಆಡಿದ್ದ ಜೀಶನ್​ ಬಳಿಕ ಕೋಚ್​ ಆಗಿದ್ದರು. ಇದೀಗ ರೋಹಿತ್​ ರಾಜ್​ಪಾಲ್​ ವೈಯಕ್ತಿಕ ಕಾರಣದಿಂದಾಗಿ ಪಾಕ್​ಗೆ ಪ್ರಯಾಣಿಸದ ಕಾರಣ, ಎಐಟಿಎ ಆಡದ ನಾಯಕನ ಪಟ್ಟವನ್ನು ಜೀಶನ್​ಗೆ ವಹಿಸಿದೆ.

ಭಾರತ&ಡೇವಿಸ್​ ಕಪ್​ ಸೆಣಸಾಟ
1962: ಭಾರತಕ್ಕೆ 5-0 ಗೆಲುವು
1963: ಭಾರತಕ್ಕೆ 4-1 ಗೆಲುವು
1964: ಭಾರತಕ್ಕೆ 4-0 ಗೆಲುವು
1970: ಭಾರತಕ್ಕೆ 3-1 ಗೆಲುವು
1973: ಭಾರತಕ್ಕೆ 4-0 ಗೆಲುವು
2006: ಭಾರತಕ್ಕೆ 3-2 ಗೆಲುವು
2019: ಭಾರತಕ್ಕೆ 4-0 ಗೆಲುವು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net