

ಹಾಂಗ್ರೆೌ: ಭಾರತದ ಪ್ಯಾರಾ ಕ್ರೀಡಾಪಟುಗಳು 4ನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಸಾರ್ವಕಾಲಿಕ ಗರಿಷ್ಠ 82 ಪದಕ ಗೆಲುವಿನ ಹೊಸ ದಾಖಲೆ ಸೃಷ್ಟಿಸಿದ್ದಾರೆ. 2018ರ ಕಳೆದ ಆವೃತ್ತಿಯಲ್ಲಿ 72 ಪದಕ ಗೆದ್ದುಕೊಂಡಿದ್ದು ಭಾರತದ ಈ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು. ಇನ್ನೂ 2 ದಿನಗಳ ಕ್ರೀಡಾಸ್ಪರ್ಧೆಗಳು ಬಾಕಿ ಉಳಿದಿರುವ ಕ್ರೀಡಾಕೂಟದಲ್ಲಿ ಭಾರತ ಈಗ ಪದಕಗಳ ಶತಕ ಸಾಧಿಸಿ ಏಷ್ಯನ್ ಗೇಮ್ಸ್ ಸಾಧನೆಯನ್ನು ಪುನರಾವರ್ತಿಸುವ ತವಕದಲ್ಲಿದೆ.
ಪದಕ ಸ್ಪರ್ಧೆಯ 4ನೇ ದಿನವಾದ ಗುರುವಾರ ಭಾರತದ ಅಂಗವಿಕಲ ಕ್ರೀಡಾಪಟುಗಳು ಒಟ್ಟು 18 ಪದಕಗಳನ್ನು ಗೆದ್ದುಕೊಂಡರು. ಈ ಪೈಕಿ 3 ಚಿನ್ನ, 3 ಬೆಳ್ಳಿ ಮತ್ತು 12 ಕಂಚಿನ ಪದಕಗಳು ಸೇರಿವೆ. ಭಾರತ ಇದುವರೆಗೆ ಗೆದ್ದಿರುವ ಒಟ್ಟು 82 ಪದಕಗಳಲ್ಲಿ 18 ಚಿನ್ನ, 23 ಬೆಳ್ಳಿ ಮತ್ತು 41 ಕಂಚಿನ ಪದಕಗಳಾಗಿವೆ. ಪದಕ ಪಟ್ಟಿಯಲ್ಲಿ ಭಾರತ ಸದ್ಯ 8ನೇ ಸ್ಥಾನದಲ್ಲಿದೆ.
ಪುರುಷರ ಶಾಟ್ಪುಟ್ ಎಫ್46 ವಿಭಾಗದಲ್ಲಿ ಸಚಿನ್ ಸರ್ಜೆರಾವ್ ಖಿಲಾರಿ 16.03 ಮೀ. ದೂರದ ಎಸೆತದೊಂದಿಗೆ ಕೂಟದಾಖಲೆ ನಿರ್ಮಿಸಿ ದಿನದ ಮೊದಲ ಚಿನ್ನ ಗೆದ್ದುಕೊಟ್ಟರು. ಪ್ಯಾರಾ ಶೂಟರ್ ಸಿದ್ಧಾರ್ಥ ಬಾಬು ಆರ್6 ಮಿಶ್ರ 50 ಮೀ. ರೈಫಲ್ ಪ್ರೊನ್ ಎಸ್ಎಚ್1 ವಿಭಾಗದಲ್ಲಿ 247.7 ಅಂಕ ಕಲೆಹಾಕಿ ಚಿನ್ನಕ್ಕೆ ಕೊರಳೊಡ್ಡಿದರು. ಆರ್ಚರಿ ಸ್ಪರ್ಧೆಯ ಮಿಶ್ರ ತಂಡ ಕಂಪೌಂಡ್ ವಿಭಾಗದಲ್ಲಿ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಭಾರತಕ್ಕೆ ದಿನದ 3ನೇ ಚಿನ್ನ ತಂದುಕೊಟ್ಟರು.
ಅಥ್ಲೆಟಿಕ್ಸ್ನಲ್ಲಿ ಪ್ರಾಬಲ್ಯ
ಭಾರತ ಅಥ್ಲೆಟಿಕ್ಸ್ನಲ್ಲಿ ಪದಕ ಬೇಟೆ ಮುಂದುವರಿಸಿದ್ದು, ಗುರುವಾರ 1 ಚಿನ್ನ ಸಹಿತ 8 ಪದಕಗಳನ್ನು ಗೆದ್ದುಕೊಂಡಿತು. ಇದುವರೆಗೆ ಒಟ್ಟು 82ರಲ್ಲಿ 45 ಪದಕ ಮತ್ತು 18ರಲ್ಲಿ 14 ಚಿನ್ನ ಅಥ್ಲೆಟಿಕ್ಸ್ನಲ್ಲೇ ಒಲಿದಿವೆ. ಮಹಿಳೆಯರ 100 ಮೀ. ಓಟದ ಟಿ12 ವಿಭಾಗದಲ್ಲಿ ಸಿಮ್ರನ್ ಮತ್ತು ಶಾಟ್ಪುಟ್ ಸ್ಪರ್ಧೆಯ ಎಫ್34 ವಿಭಾಗದಲ್ಲಿ ಭಾಗ್ಯಶ್ರೀ ಮಾಧವರಾವ್ ಜಾಧವ್ ಬೆಳ್ಳಿ ಪದಕ ಗೆದ್ದುಕೊಂಡರು. ಪುರುಷರ ಡಿಸ್ಕಸ್ ಥ್ರೋ ಎಫ್11 ವಿಭಾಗದಲ್ಲಿ ಮೋನು ಂಗಾಸ್ ಕೂಡ ಬೆಳ್ಳಿ ಜಯಿಸಿದರು.
ಬಂಗಾರದ ಸನಿಹ ಕನ್ನಡಿಗ ಸುಹಾಸ್
ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಆಗಿರುವ ಕನ್ನಡಿಗ ಸುಹಾಸ್ ಯತಿರಾಜ್ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್ಎಲ್4 ವಿಭಾಗದಲ್ಲಿ ಫೈನಲ್ಗೇರಿದ್ದು, ಶುಕ್ರವಾರ ಚಿನ್ನದ ಪದಕಕ್ಕೆ ಹೋರಾಡಲಿದ್ದಾರೆ. ಶಿವಮೊಗ್ಗ ಮೂಲದ ಸುಹಾಸ್ ಗುರುವಾರ ನಡೆದ ಸೆಮಿಫೈನಲ್ನಲ್ಲಿ ಇಂಡೋನೇಷ್ಯಾದ ಫ್ರೆಡಿ ಸೆಟಿಯವಾನ್ ಎದುರು 21-12, 21-19ರಿಂದ ಗೆದ್ದರು. ಫೈನಲ್ನಲ್ಲಿ ಮಲೇಷ್ಯಾದ ಮೊಹಮದ್ ಅಮಿನ್ ಎದುರು ಸೆಣಸಲಿದ್ದಾರೆ. ಇನ್ನುಳಿದಂತೆ ಭಾರತಕ್ಕೆ ಶುಕ್ರವಾರ ಬ್ಯಾಡ್ಮಿಂಟನ್ನಲ್ಲೇ ಒಟ್ಟು 6 ಕಂಚಿನ ಪದಕಗಳು ಒಲಿದವು.