

ಬ್ಲೋಮ ಫಾಂಟೇನ್: ಇಲ್ಲಿನ ಮಂಗೌಂಗ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ 19 ವಯೋಮಿತಿ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಕಂಡಿದ್ದು, ಅಭಿಯಾನದಲ್ಲಿ ಶುಭಾರಂಭ ಕಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ, ಆರಂಭಿಕ ಆಘಾತದ ನಡುವೆಯೂ, ಆದರ್ಶ್ ಸಿಂಗ್ & ನಾಯಕ ಉದಯ್ ಸಹರಾನ್ (64 ರನ್, 94 ಎಸೆತ, 4 ಬೌಂಡರಿ) ಜೋಡಿ 3ನೇ ವಿಕೆಟ್ಗೆ ನಡೆಸಿದ 116 ರನ್ಗಳ ಜತೆಯಾಟದ ಬಲದಿಂದ 7 ವಿಕೆಟ್ಗೆ 251 ರನ್ಗಳ ಸ್ಫರ್ಧಾತ್ಮಕ ಮೊತ್ತ ಕಲೆಹಾಕಿತು.
ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಉದಯ್ ಸಹರಾನ್ ಜೊತೆ ಬಾಂಗ್ಲಾದೇಶದ ಆಟಗಾರರು ಕಾಲ್ಕೆರೆದು ಜಗಳ ಮಾಡಿದ ಘಟನೆ ನಡೆದಿದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರ್ಶ್ ಸಿಂಗ್ 67 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಭಾರತದ ನಾಯಕ ಅರ್ಧಶತಕದತ್ತ ಸಾಗುತ್ತಿದ್ದರು. ಈ ಇಬ್ಬರ ನಡುವಿನ ಜೊತೆಯಾಟವು ಶತಕದ ಸಮೀಪದಲ್ಲಿದ್ದಾಗ ವಿಕೆಟ್ ಸಿಗದೆ ಹೈರಾಣಾದ ಬಾಂಗ್ಲಾದೇಶದ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಭಾರತದ ನಾಯಕ ಸಹರಾನ್ ಜೊತೆ ವಾಕ್ಸಮರಕ್ಕೆ ಮುಂದಾಗಿದ್ದಾರೆ.
ಭಾರತ ತಂಡದ ಉತ್ತಮ ಜೊತೆಯಾಟ ನೋಡಿದ ಬಾಂಗ್ಲಾದೇಶದ ಅರಿಫುಲ್ ಇಸ್ಲಾಂ ಭಾರತದ ನಾಯಕನಿಗೆ ಏನೇನೋ ಹೇಳಿ ಲೇವಡಿ ಮಾಡಿದರು. ಈ ಸಮಯದಲ್ಲಿ, ಇನಿಂಗ್ಸ್‌ನ 25 ನೇ ಓವರ್‌ನಲ್ಲಿ ಭಾರತೀಯ ನಾಯಕ ಮತ್ತು ಅರಿಫುಲ್ ಇಸ್ಲಾಂ ನಡುವೆ ವಾಕ್ಸಮರ ಪ್ರಾರಂಭವಾಗುವ ಮೊದಲು, ಓವರ್ ನಡುವೆ ಬಾಂಗ್ಲಾ ಫೀಲ್ಡರ್ ಸಹಾರಾನ್‌ಗೆ ಏನೋ ಹೇಳಿದರು. ಇಬ್ಬರೂ ಆಟಗಾರರು ಹತ್ತಿರ ಬರುವುದನ್ನು ನೋಡಿದ ಅಂಪೈರ್ ಇಬ್ಬರನ್ನೂ ತಡೆದಿದ್ದಾರೆ.
ಅಂಪೈರ್ ಮಧ್ಯಪ್ರವೇಶಿಸುವ ಮೊದಲು, ಬಾಂಗ್ಲಾದೇಶ ಇತರ ಆಟಗಾರರು ಸಹರಾನ್ ಮೇಲೆ ಮುಗಿಬಿದ್ದರು. ಬಳಿಕ ಮಧ್ಯಪ್ರವೇಶಿಸಿದ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ಈ ಎರಡು ತಂಡದ ಆಟಗಾರರ ನಡುವಿನ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.