ಮೊದಲ ಟೆಸ್ಟ್​ನಲ್ಲಿ ಕಾಡಿದ ರಬಾಡ; ಭಾರತಕ್ಕೆ ಕನ್ನಡಿಗ ಕೆಎಲ್​ ರಾಹುಲ್​ ರಕ್ಷಣೆ​

ind vs sa web
Published on

ಸೆಂಚುರಿಯನ್​: ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್​ ಸರಣಿ ಜಯಿಸುವ ಕನಸಿನೊಂದಿಗೆ ಕಣಕ್ಕಿಳಿದ ಭಾರತ ತಂಡ ಮೊದಲ ಟೆಸ್ಟ್​ ಪಂದ್ಯದ ಮೊದಲ ದಿನವೇ ವೇಗಿ ಕಗಿಸೊ ರಬಾಡ (44ಕ್ಕೆ 5) ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿತು. ಆಗ ಆಸರೆಯಾದ ಕನ್ನಡಿಗ ಕೆಎಲ್​ ರಾಹುಲ್​ (70*ರನ್​, 105 ಎಸೆತ, 10 ಬೌಂಡರಿ, 2 ಸಿಕ್ಸರ್​) ದಿಟ್ಟ ಬ್ಯಾಟಿಂಗ್​ ನಿರ್ವಹಣೆಯ ಮೂಲಕ ಭಾರತ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ಸೂಪರ್​ಸ್ಪೋರ್ಟ್​ ಪಾರ್ಕ್​ನಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ, ಅಗ್ರ ಕ್ರಮಾಂಕದ ವೈಫಲ್ಯದ ನಡುವೆ 59 ಓವರ್​ಗಳಲ್ಲಿ 8 ವಿಕೆಟ್​ಗೆ 208 ರನ್​ ಪೇರಿಸಿದೆ. ಮಳೆ ಅಡಚಣೆ ಎದುರಿಸಿದ ಮೊದಲ ದಿನದಾಟದಲ್ಲಿ ಮೋಡ ಕವಿದ ವಾತಾವರಣದಲ್ಲಿ ಟಾಸ್​ ಗೆಲುವಿನ ಲಾಭ ಪಡೆದ ದ. ಆಫ್ರಿಕಾ, ಭಾರತವನ್ನು ಬೇಗನೆ ಕಟ್ಟಿಹಾಕಲು ಯತ್ನಿಸಿತು. ಆದರೆ ಕೆಎಲ್​ ರಾಹುಲ್​ ಏಕಾಂಗಿ ಹೋರಾಟದ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ರಬಾಡ ಮಾರಕ ದಾಳಿ

ಭಾರತದ ಯುವ-ಅನುಭವಿ ಬ್ಯಾಟರ್​ಗಳನ್ನು ಒಳಗೊಂಡ ಬ್ಯಾಟಿಂಗ್​ ಕ್ರಮಾಂಕ ರಬಾಡ ಮಾರಕ ದಾಳಿಗೆ ತತ್ತರಿಸಿತು. ಭಾರತ ತಂಡದ ಪ್ರಮುಖ ಬ್ಯಾಟರ್​ಗಳಾದ ರೋಹಿತ್​ ಶರ್ಮ (5) ಮತ್ತು ವಿರಾಟ್​ ಕೊಹ್ಲಿ (38) ವಿಕೆಟ್​ ಕಬಳಿಸುವ ಮೂಲಕ ರಬಾಡ ಆತಿಥೇಯರಿಗೆ ಮೇಲುಗೈ ಒದಗಿಸಿದರು. ರೋಹಿತ್​ ಪಂದ್ಯದ 5ನೇ ಓವರ್​ನಲ್ಲೇ ರಬಾಡರ ಶಾರ್ಟ್​ಪಿಚ್​ ಎಸೆತಕ್ಕೆ ಹುಕ್​ ಮಾಡಲು ಯತ್ನಿಸಿ ರ್ಬಗರ್​ಗೆ ಕ್ಯಾಚ್​ ನೀಡಿದರು. ಬಳಿಕ ಯುವ ಬ್ಯಾಟರ್​ಗಳಾದ ಯಶಸ್ವಿ ಜೈಸ್ವಾಲ್​ (17) ಮತ್ತು ಶುಭಮಾನ್​ ಗಿಲ್​ (2) ಟೆಸ್ಟ್​ ಪದಾರ್ಪಣೆ ಮಾಡಿದ ಎಡಗೈ ವೇಗಿ ನಾಂಡ್ರೆ ರ್ಬಗರ್​ ಎಸೆತದಲ್ಲಿ ಕೀಪರ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ಇದರಿಂದ ಭಾರತ 24 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕ್ರೀಸ್​ಗೆ ಬಂದ ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್​ ತಲಾ 4 ರನ್​ ಗಳಿಸಿದ್ದಾಗ ದ. ಆಫ್ರಿಕಾದ ಫೀಲ್ಡರ್​ಗಳು ಕ್ಯಾಚ್​ ಕೈಚೆಲ್ಲಿ ಇಬ್ಬರಿಗೂ ಜೀವದಾನ ನೀಡಿದರು. ಇದರಿಂದ ಭಾರತ ಭೋಜನ ವಿರಾಮದ ವೇಳೆಗೆ 3 ವಿಕೆಟ್​ಗೆ 91 ರನ್​ ಗಳಿಸಿ ಚೇತರಿಕೆಯ ಹಾದಿಯಲ್ಲಿತ್ತು. ಆದರೆ ವಿರಾಮದ ನಂತರ ಇವರಿಬ್ಬರ ವಿಕೆಟ್​ ಕಬಳಿಸಿದ ರಬಾಡ ಭಾರತವನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದರು. ಶ್ರೇಯಸ್​ ಅಯ್ಯರ್​ (31) ಮತ್ತು ಕೊಹ್ಲಿ 4ನೇ ವಿಕೆಟ್​ಗೆ 68 ರನ್​ ಜತೆಯಾಟವಾಡಿದರು.

ರಾಹುಲ್​ ಏಕಾಂಗಿ ಹೋರಾಟ

ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ವಿಕೆಟ್​ ಕೀಪಿಂಗ್​ ಜವಾಬ್ದಾರಿ ವಹಿಸಿಕೊಂಡಿರುವ ಕೆಎಲ್​ ರಾಹುಲ್​, ಹರಿಣಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲುವ ಮೂಲಕ ಭಾರತಕ್ಕೆ ಆಸರೆಯಾದರು. ಆರ್​. ಅಶ್ವಿನ್​ (8) ನಿರ್ಗಮನದ ಬಳಿಕ ರಾಹುಲ್​, ಶಾರ್ದೂಲ್​ ಠಾಕೂರ್​ (24) ಬೆಂಬಲ ಪಡೆದರು. ಇವರಿಬ್ಬರು 7ನೇ ವಿಕೆಟ್​ಗೆ 43 ರನ್​ ಸೇರಿಸಿದರು. ಆದರೆ ಚಹಾ ವಿರಾಮಕ್ಕೆ ಮುನ್ನ ಶಾರ್ದೂಲ್​ ವಿಕೆಟ್​ ಕಬಳಿಸಿದ ರಬಾಡ ಟೆಸ್ಟ್​ ಕ್ರಿಕೆಟ್​ನಲ್ಲಿ 14ನೇ ಬಾರಿ 5 ವಿಕೆಟ್​ ಗೊಂಚಲು ಪಡೆದರು. ನಂತರದಲ್ಲಿ ಸ್ವಲ್ಪ ಬಿರುಸಿನ ಆಟಕ್ಕಿಳಿದ ರಾಹುಲ್​, ರ್ಬಗರ್​ ಎಸೆತದಲ್ಲಿ ಸಿಕ್ಸರ್​ ಸಿಡಿಸುವ ಮೂಲಕ ಅರ್ಧಶತಕ ಪೂರೈಸಿದರು. 8ನೇ ವಿಕೆಟ್​ಗೆ ಬುಮ್ರಾ ಜತೆ 27 ರನ್​ ಸೇರಿಸಿದ ರಾಹುಲ್​, ಇದರಲ್ಲಿ 24 ರನ್​ಗಳನ್ನು ಒಬ್ಬರೇ ಗಳಿಸಿದರು. ನಂತರ ಸಿರಾಜ್​ ಜತೆ ಮುರಿಯದ 9ನೇ ವಿಕೆಟ್​ಗೆ 17 ರನ್​ ಸೇರಿಸಿದ್ದು, ಈ ಎಲ್ಲ ರನ್​ಗಳನ್ನು ಅವರೇ ಗಳಿಸಿದ್ದಾರೆ. ಶಾದೂಲ್​ ನಿರ್ಗಮನದ ಬಳಿಕ ಭಾರತ ಸೇರಿಸಿದ 44 ರನ್​ಗಳಲ್ಲಿ 41 ರನ್​ ರಾಹುಲ್​ ಬ್ಯಾಟ್​ನಿಂದಲೇ ಸಿಡಿಯಿತು.

*500: ವೇಗಿ ಕಗಿಸೊ ರಬಾಡ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500 ವಿಕೆಟ್​ ಕಬಳಿಸಿದ ದ. ಆಫ್ರಿಕಾದ 7ನೇ ಬೌಲರ್​ ಎನಿಸಿದರು.

ಮಳೆ, ಮಂದಬೆಳಕಿನ ಅಡಚಣೆ

ನಿರೀಕ್ಷೆಯಂತೆಯೇ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡಚಣೆ ತಂದಿತು. ಹಿಂದಿನ ದಿನ ರಾತ್ರಿ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದ ಕಾರಣ ಟಾಸ್​ ಪ್ರಕ್ರಿಯೆ ವಿಳಂಬಗೊಂಡಿತು. ಕೊನೆಗೆ ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ಪಂದ್ಯ ಆರಂಭಗೊಂಡಿತು. ಬಳಿಕ ಚಹಾ ವಿರಾಮದವರೆಗೂ ಸರಾಗವಾಗಿ ಆಟ ನಡೆಯಿತು. ಆದರೆ ಚಹಾ ವಿರಾಮದ ಬಳಿಕ ಮಳೆ ಮತ್ತು ಮಂದಬೆಳಕಿನ ಅಡಚಣೆಯಿಂದಾಗಿ ಕೇವಲ 9 ಓವರ್​ ಆಟವಷ್ಟೇ ನಡೆಸಲು ಸಾಧ್ಯವಾಯಿತು. ಒಟ್ಟಾರೆ ಇಡೀ ದಿನ 59 ಓವರ್​ ಆಟ ಮಾತ್ರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net