ಏಷ್ಯಾಕಪ್​ ಹಾಕಿ ಫೈವ್ಸ್​ ಫೈನಲ್​ನಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿ ಪ್ರಶಸ್ತಿ ಗೆದ್ದ ಭಾರತ; ಏನಿದು ಹಾಕಿ ಫೈವ್ಸ್​?

hockey 5s web
Published on

ಸಲಾಲಹ್​ (ಓಮನ್​): ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವ ಮೂಲಕ ಭಾರತ ತಂಡ ಪುರುಷರ ಏಷ್ಯಾಕಪ್​ ಹಾಕಿ ಫೈವ್ಸ್​ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಶನಿವಾರ ನಡೆದ ಫೈನಲ್​ ಪಂದ್ಯದ ಪೆನಾಲ್ಟಿ ಶೂಟೌಟ್​ನಲ್ಲಿ ಭಾರತ ತಂಡ 2-0ಯಿಂದ ಪಾಕಿಸ್ತಾನ ತಂಡವನ್ನು ಮಣಿಸಿತು. ಮುಂದಿನ ವರ್ಷ ಜನವರಿಯಲ್ಲಿ ಮಸ್ಕತ್​ನಲ್ಲಿ ನಡೆಯಲಿರುವ ಹಾಕಿ ಫೈವ್ಸ್​ ವಿಶ್ವಕಪ್​ಗೂ ಭಾರತ ತಂಡ ಅರ್ಹತೆ ಸಂಪಾದಿಸಿದೆ. ಈ ಮುನ್ನ ಇತ್ತೀಚೆಗಷ್ಟೇ ನಡೆದ ಮಹಿಳೆಯರ ಹಾಕಿ ಫೈವ್ಸ್​ ಏಷ್ಯಾಕಪ್​ನಲ್ಲೂ ಭಾರತ ತಂಡ ಪ್ರಶಸ್ತಿ ಜಯಿಸಿತ್ತು.

ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರಶಸ್ತಿ ಸೆಣಸಾಟದಲ್ಲಿ ಪಂದ್ಯ ನಿಗದಿತ ಅವಧಿಯಲ್ಲಿ 4-4ರಿಂದ ಸಮಬಲಗೊಂಡಿತು. ಭಾರತ ತಂಡದ ಉಪನಾಯಕ ಹಾಗೂ ಕರ್ನಾಟಕದ ಆಟಗಾರ ಮೊಹಮದ್​ ರಾಹೀಲ್​ (19, 26ನೇ ನಿಮಿಷ) ಎರಡು ಗೋಲು ಬಾರಿಸಿ ಭಾರತ ತಂಡ ಸಮಬಲ ಸಾಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನಂತರ ಶೂಟೌಟ್​ನಲ್ಲಿ ಭಾರತ ತಂಡದ ಗೋಲು ಕೀಪರ್​ ಸೂರಜ್​ ಕರ್ಕೆರಾ ಪಾಕಿಸ್ತಾನದ ಎರಡು ಹೊಡೆತಗಳನ್ನು ತಡೆದು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಹಾಕಿ ಇಂಡಿಯಾ ತಂಡದ ಆಟಗಾರರಿಗೆ ತಲಾ 2 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1 ಲಕ್ಷ ರೂ. ಬಹುಮಾನ ಪ್ರಕಟಿಸಿದೆ.

ಭಾರತ ತಂಡ ಈ ಮುನ್ನ ಶನಿವಾರ ಬೆಳಗ್ಗೆ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 10-4 ಅಂತರದಿಂದ ಗೆಲುವು ದಾಖಲಿಸಿ, ವಿಶ್ವಕಪ್​ ಪ್ರವೇಶವನ್ನೂ ಖಚಿತಪಡಿಸಿಕೊಂಡಿತ್ತು. ಕನ್ನಡಿಗ ಮೊಹಮದ್​ ರಾಹೀಲ್​ ಸೆಮೀಸ್​ನಲ್ಲೂ 4 ಗೋಲು ಸಿಡಿಸಿ ಮಿಂಚಿದ್ದರು.

ಏನಿದು ಹಾಕಿ ಫೈವ್ಸ್​?

ಹೆಸರೇ ಹೇಳುವಂತೆ ಇದು 11 ಜನರಿಗೆ ಬದಲಾಗಿ ಕೇವಲ 5 ಆಟಗಾರರ (ಗೋಲುಕೀಪರ್​ ಸೇರಿ) ತಂಡ ಆಡುವ ಆಟ. ಟಿ20 ಕ್ರಿಕೆಟ್​ನಂತೆ ಇದು ಚುಟುಕು ಹಾಕಿ. ಎಂದಿನ ಹಾಕಿ (91.4-55 ಮೀ.) ಮೈದಾನಕ್ಕಿಂತ ಸುಮಾರು ಅರ್ಧದಷ್ಟು (55-41.70 ಮೀ.) ಮೈದಾನದಲ್ಲಿ ಪಂದ್ಯ ನಡೆಯುತ್ತದೆ. ತಲಾ 30 ನಿಮಿಷಗಳ ಎರಡು ಅವಧಿಯಲ್ಲಿ ಪಂದ್ಯ ನಡೆಯುತ್ತದೆ. ಜತೆಗೆ ಪೆನಾಲ್ಟಿ ಕಾರ್ನರ್​ ಇರುವುದಿಲ್ಲ. ಮುಂದಿನ ವರ್ಷ ಮೊದಲ ಬಾರಿಗೆ ಈ ಮಾದರಿಯ ಹಾಕಿಯ ವಿಶ್ವಕಪ್​ ನಡೆಯಲಿದೆ. 2014ರಲ್ಲಿ ಯೂತ್​ ಒಲಿಂಪಿಕ್ಸ್​ನ ಭಾಗವೂ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net