ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಖಚಿತಪಡಿಸಿದ ಗಂಗೂಲಿ

trophy
Published on

ನವದೆಹಲಿ: ಭಾರತ ತಂಡ ನಿಗದಿಯಂತೆಯೇ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾನುವಾರ ಖಚಿತಪಡಿಸಿದ್ದಾರೆ. ಆದರೆ ಆಟಗಾರರು 2 ವಾರಗಳ ಕಾಲ ಹೋಟೆಲ್ ಕೋಣೆಯಲ್ಲಿ ಬಂಧಿಯಾಗಿರುವುದನ್ನು ಒಪ್ಪಿಕೊಳ್ಳದ ಅವರು, ಪ್ರವಾಸದ ಆರಂಭದಲ್ಲಿ ಕಡ್ಡಾಯ ಕ್ವಾರಂಟೈನ್‌ನ ಅವಧಿಯನ್ನು ಕಡಿಮೆ ಮಾಡಲು ಆತಿಥೇಯರನ್ನು ಒತ್ತಾಯಿಸಿದ್ದಾರೆ.

ಕರೊನಾ ಹಾವಳಿಯಿಂದಾಗಿ ಇದೀಗ ಕ್ರೀಡಾ ತಂಡಗಳ ವಿದೇಶಿ ಪ್ರವಾಸದ ನಿಯಮದಲ್ಲಿ ಬದಲಾವಣೆಯಾಗಿದೆ. ಈ ಹಿಂದೆ ಪ್ರವಾಸದ ಆರಂಭದಲ್ಲಿ ತಂಡಗಳು ಅಭ್ಯಾಸ ಪಂದ್ಯ ಆಡುತ್ತಿದ್ದರೆ, ಈಗ ಕ್ವಾರಂಟೈನ್‌ನಲ್ಲಿದ್ದು ಕರೊನಾ ಸೋಂಕು ಇಲ್ಲವೆಂದು ಆಟಗಾರರು ದೃಢಪಡಿಸಬೇಕಾಗಿದೆ. ಹಾಲಿ ಇಂಗ್ಲೆಂಡ್ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡದ ಆಟಗಾರರು ಇದನ್ನೇ ಮಾಡಿದ್ದಾರೆ.

ಡಿಸೆಂಬರ್-ಜನವರಿಯ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡದ ಆಟಗಾರರಿಗೆ ಸ್ವಲ್ಪಮಟ್ಟಿಗೆ ವಿನಾಯಿತಿ ಸಿಗುವ ನಿರೀಕ್ಷೆಯಲ್ಲಿರುವ ಸೌರವ್ ಗಂಗೂಲಿ, ‘ಪ್ರವಾಸವನ್ನು ನಾವು ಖಚಿತಪಡಿಸಿದ್ದೇವೆ. ಡಿಸೆಂಬರ್‌ನಲ್ಲಿ ನಾವು ಆಸೀಸ್‌ಗೆ ತೆರಳುತ್ತೇವೆ. ಆದರೆ ಕ್ವಾರಂಟೈನ್ ನಿಯಮದಲ್ಲಿ ಕಡಿತ ಬಯಸಿದ್ದೇವೆ’ ಎಂದು ಹೇಳಿದ್ದಾರೆ. ಭಾರತ ತಂಡ ಪ್ರವಾಸದಲ್ಲಿ 4 ಟೆಸ್ಟ್ ಪಂದ್ಯ ಮತ್ತು ಏಕದಿನ ಸರಣಿಯಲ್ಲಿ ಆಡಬೇಕಿದೆ.

ಆಟಗಾರರು 2 ವಾರಗಳ ಕಾಲ ಹೋಟೆಲ್ ರೂಂನಲ್ಲಿ ಬಂಧಿಯಾಗಿದ್ದರೆ ಖಿನ್ನತೆಗೆ ಒಳಗಾಗುವ ಭೀತಿ ವ್ಯಕ್ತಪಡಿಸಿರುವ ಗಂಗೂಲಿ, ಮೆಲ್ಬೋರ್ನ್ ಹೊರತಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕರೊನಾ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿವೆ. ಹೀಗಾಗಿ ನಾವು ಪ್ರವಾಸಕ್ಕೆ ಒಪ್ಪಿಕೊಂಡಿದ್ದೇವೆ. ಜತೆಗೆ ಕ್ವಾರಂಟೈನ್ ಅವಧಿ ಕಡಿಮೆಯಾಗಿರಬೇಕೆಂದು ಬಯಸಿದ್ದೇವೆ ಎಂದಿದ್ದಾರೆ. ಆಸೀಸ್‌ನಲ್ಲಿ 9 ಸಾವಿರ ಕರೊನಾ ಪ್ರಕರಣ ದಾಖಲಾಗಿದ್ದು, 7,500 ಮಂದಿ ಗುಣಮುಖರಾಗಿದ್ದಾರೆ. 107 ಮಂದಿ ಸಾವನ್ನಪ್ಪಿದ್ದಾರೆ.

ಕೊಹ್ಲಿ ನಾಯಕತ್ವಕ್ಕೆ ಸವಾಲು

ನಾನು ಡಿಸೆಂಬರ್‌ವರೆಗೂ ಅಧ್ಯಕ್ಷನಾಗಿರುವೆನೋ ಗೊತ್ತಿಲ್ಲ. ಆದರೆ ವಿರಾಟ್ ಕೊಹ್ಲಿಗೆ ನಾಯಕರಾಗಿ ಈ ಪ್ರವಾಸ ಪ್ರಮುಖ ಸವಾಲಾಗಿದೆ. ಅವರ ವೃತ್ತಿಜೀವನದಲ್ಲಿ ಇದೊಂದು ಮೈಲಿಗಲ್ಲಿನ ಸರಣಿಯೂ ಆಗಬಹುದು ಎಂದು ಗಂಗೂಲಿ ಹೇಳಿದ್ದಾರೆ. ಕೊಹ್ಲಿ ಜತೆಗೆ ಮಾತನಾಡಿರುವುದಾಗಿಯೂ ಹೇಳಿರುವ ಗಂಗೂಲಿ, ಪ್ರವಾಸದಲ್ಲಿ ಗೆಲುವಿನ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ್ದಾರೆ. ಲೋಧಾ ಸಮಿತಿಯ ಕೂಲಿಂಗ್-ಆ್ ನಿಯಮದ ಅನ್ವಯ ಗಂಗೂಲಿ ಅಧ್ಯಕ್ಷ ಅವಧಿ ಈ ತಿಂಗಳು ಕೊನೆಗೊಳ್ಳಲಿದ್ದು, ಇದರ ವಿಸ್ತರಣೆಗಾಗಿ ಈಗಾಗಲೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಇದರ ವಿಚಾರಣೆ ಇನ್ನೂ ನಡೆದಿಲ್ಲ. ಅಧ್ಯಕ್ಷರಾಗಿ ತಮ್ಮ 8 ತಿಂಗಳ ಅವಧಿಯಲ್ಲಿ 4 ತಿಂಗಳು ಬಿಸಿಸಿಐ ಕಚೇರಿಗೆ ಹೋಗಲು ಸಾಧ್ಯವಾಗದಿರುವುದಕ್ಕೆ ಗಂಗೂಲಿ ಬೇಸರಿಸಿದ್ದಾರೆ.

ಐಸಿಸಿ ಅಧ್ಯಕ್ಷನಾಗಲು ಅವಸರವಿಲ್ಲ

ಐಸಿಸಿಯ ಮುಂದಿನ ಚೇರ್ಮನ್ ಸ್ಥಾನಕ್ಕೆ ಗಂಗೂಲಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಆದರೆ ನಾನಿನ್ನೂ ಯುವಕನಾಗಿದ್ದು, ಐಸಿಸಿ ಚೇರ್ಮನ್ ಆಗಲು ಅವಸರ ಮಾಡುವುದಿಲ್ಲ. ಈ ಸಮಯದಲ್ಲಿ ಬಿಸಿಸಿಐಯನ್ನು ಬಿಟ್ಟುಹೋಗುವುದು ಸಾಧ್ಯವಾಗದು ಎಂದು 48 ವರ್ಷದ ಗಂಗೂಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net