

ಟೋಕಿಯೊ: ಕ್ರೀಡಾಸ್ಪರ್ಧೆಯ 9ನೇ ದಿನವಾದ ಭಾನುವಾರ ಭಾರತ ಟೋಕಿಯೊ ಒಲಿಂಪಿಕ್ಸ್‌ನ ಪದಕ ಬೇಟೆಯನ್ನು ಮೂರಕ್ಕೆ ವಿಸ್ತರಿಸುವ ನಿರೀಕ್ಷೆಗಳಿವೆ. ಪಿವಿ ಸಿಂಧು ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕಕ್ಕೆ ಹೋರಾಡಲಿದ್ದು, ಗೆದ್ದರೆ ಹೊಸ ಇತಿಹಾಸ ನಿರ್ಮಿಸಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ 2 ವೈಯಕ್ತಿಕ ಪದಕ ಗೆದ್ದ 2ನೇ ಭಾರತೀಯರೆನಿಸುವ ಅವಕಾಶ ಅವರ ಮುಂದಿದೆ. ಕುಸ್ತಿಪಟು ಸುಶೀಲ್ ಕುಮಾರ್ ಈ ಸಾಧನೆ ಮಾಡಿರುವ ಮೊದಲ ಭಾರತೀಯರಾಗಿದ್ದಾರೆ. ಇನ್ನು ಬಾಕ್ಸಿಂಗ್‌ನಲ್ಲಿ ಸತೀಶ್ ಕುಮಾರ್ ಎಂಟರ ಘಟ್ಟದಲ್ಲಿ ಸೆಣಸಲಿದ್ದು, ಗೆದ್ದರೆ ಪದಕ ಖಚಿತವೆನಿಸಲಿದೆ. ಗಾಲ್ಫ್‌ನಲ್ಲಿ ಪದಕ ಪಣಕ್ಕಿದ್ದರೂ, ಭಾರತೀಯರಿಗೆ ಒಲಿಯುವ ನಿರೀಕ್ಷೆಗಳಿಲ್ಲ. ಪುರುಷರ ಹಾಕಿ ತಂಡ 41 ವರ್ಷಗಳ ಬಳಿಕ ಉಪಾಂತ್ಯಕ್ಕೇರಿ ಪದಕದ ಕನಸು ಜೀವಂತವಿಡುವ ಅವಕಾಶವಿದೆ.
ಭಾರತಕ್ಕೆ ಇಂದು ಕ್ರೀಡಾಸ್ಪರ್ಧೆಗಳು:
*ಬ್ಯಾಡ್ಮಿಂಟನ್: ಸಂಜೆ 5: ಮಹಿಳಾ ಸಿಂಗಲ್ಸ್ ಕಂಚಿನ ಪದಕದ ಹೋರಾಟ: ಪಿವಿ ಸಿಂಧುಗೆ ಚೀನಾದ ಹಿ ಬಿಂಗ್ ಜಿಯಾವೊ ಎದುರಾಳಿ.
*ಬಾಕ್ಸಿಂಗ್: ಬೆಳಗ್ಗೆ 9.36: ಪುರುಷರ ಸೂಪರ್ ಹೆವಿವೇಟ್ ವಿಭಾಗ: ಸತೀಶ್ ಕುಮಾರ್‌ಗೆ ಕ್ವಾರ್ಟರ್ಫೈನಲ್ನಲ್ಲಿ ಉಜ್ಬೇಕಿಸ್ತಾನದ ಬಖೋದಿರ್ ಜಲೊಲೊವ್ ಎದುರಾಳಿ.
ಹಾಕಿ: ಸಂಜೆ 5.30: ಪುರುಷರ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಬ್ರಿಟನ್ ಎದುರಾಳಿ.
ಈಕ್ವೆಸ್ಟ್ರಿಯನ್: ಬೆಳಗ್ಗೆ 4.15: ಕ್ರಾಸ್ ಕಂಟ್ರಿ: ಫವಾದ್ ಮಿರ್ಜಾ ಕಣಕ್ಕೆ.
*ಗಾಲ್ಫ್: ಬೆಳಗ್ಗೆ 4: ಪುರುಷರ ವೈಯಕ್ತಿಕ ವಿಭಾಗ 4ನೇ ಸುತ್ತು: ಉದಯನ್ ಮಾನೆ, ಅನಿರ್ಬನ್ ಲಹಿರಿ ಕಣಕ್ಕೆ.
*ಪದಕ ನಿರ್ಧಾರವಾಗುವ ಸ್ಪರ್ಧೆ.
ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್.
*25: ಕ್ರೀಡಾಸ್ಪರ್ಧೆಯ 9ನೇ ದಿನವಾದ ಭಾನುವಾರ ಒಟ್ಟು 25 ಸ್ವರ್ಣ ಪದಕಗಳು ಪಣಕ್ಕಿವೆ. ಈಜಿನಲ್ಲಿ 5, ಅಥ್ಲೆಟಿಕ್ಸ್, ಆರ್ಟಿಸ್ಟಿಕ್ಸ್ ಜಿಮ್ನಾಸ್ಟಿಕ್ಸ್‌ನಲ್ಲಿ ತಲಾ 4, ಟೆನಿಸ್‌ನಲ್ಲಿ 3, ಸೈಲಿಂಗ್‌ನಲ್ಲಿ 2, ವೇಟ್‌ಲಿಫ್ಟಿಂಗ್, ಫೆನ್ಸಿಂಗ್, ಕನೋಯಿಂಗ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಡೈವಿಂಗ್, ಗಾಲ್ಫ್‌ನಲ್ಲಿ ತಲಾ 1 ಚಿನ್ನದ ಪದಕ ನಿರ್ಧಾರವಾಗಲಿದೆ.