

ಸೌಥಾಂಪ್ಟನ್: ಭಾರತ ಕಳೆದ 8 ವರ್ಷಗಳಿಂದ ಐಸಿಸಿ ಪ್ರಶಸ್ತಿ ಗೆಲ್ಲದ ಬರ ಎದುರಿಸುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಶುಕ್ರವಾರದಿಂದ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಈ ಕೊರತೆ ನೀಗಿಸಿಕೊಳ್ಳುವ ಅದೃಷ್ಟ ಟೀಮ್ ಇಂಡಿಯಾ ಮುಂದಿದೆ.
2013ರಲ್ಲಿ ಕೊನೆಯದಾಗಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಭಾರತ, 2014ರ ಟಿ20 ವಿಶ್ವಕಪ್ ಮತ್ತು 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಎಡವಿತ್ತು. 2016ರ ಟಿ20 ವಿಶ್ವಕಪ್, 2015 ಮತ್ತು 2019ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತ್ತು.
ಅತ್ತ ಕಿವೀಸ್‌ಗೆ 21 ವರ್ಷಗಳಿಂದ ಐಸಿಸಿ ಟ್ರೋಫಿ ಬರ ಕಾಡುತ್ತಿದೆ. 2000ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ಏಕೈಕ ಐಸಿಸಿ ಟ್ರೋಫಿ ಜಯಿಸಿದೆ. ಅಲ್ಲಿ ಫೈನಲ್‌ನಲ್ಲಿ ಭಾರತ ವಿರುದ್ಧವೇ ಕಿವೀಸ್ ಜಯಿಸಿತ್ತು.
ಡಬ್ಲ್ಯುಟಿಸಿ ಫೈನಲ್ ಹಾದಿ:
ಭಾರತ:
*ವೆಸ್ಟ್ ಇಂಡೀಸ್ ವಿರುದ್ಧ 2-0 ಜಯ
*ದಕ್ಷಿಣ ಆಫ್ರಿಕಾ ವಿರುದ್ಧ 3-0 ಜಯ
*ಬಾಂಗ್ಲಾದೇಶ ವಿರುದ್ಧ 2-0 ಜಯ
*ನ್ಯೂಜಿಲೆಂಡ್ ವಿರುದ್ಧ 0-2 ಸೋಲು
*ಆಸ್ಟ್ರೇಲಿಯಾ ವಿರುದ್ಧ 2-1 ಜಯ
*ಇಂಗ್ಲೆಂಡ್ ವಿರುದ್ಧ 3-1 ಜಯ
ನ್ಯೂಜಿಲೆಂಡ್:
*ಶ್ರೀಲಂಕಾ ವಿರುದ್ಧ 1-1 ಡ್ರಾ
*ಆಸ್ಟ್ರೇಲಿಯಾ ವಿರುದ್ಧ 0-3 ಸೋಲು
*ಭಾರತ ವಿರುದ್ಧ 2-0 ಜಯ
*ವೆಸ್ಟ್ ಇಂಡೀಸ್ ವಿರುದ್ಧ 2-0 ಜಯ
*ಪಾಕಿಸ್ತಾನ ವಿರುದ್ಧ 2-0 ಜಯ