

ಅಹಮದಾಬಾದ್: ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವೆನಿಸಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಭರ್ಜರಿ ಗೆಲುವಿನ ಸಾಧನೆ ಮಾಡಿದೆ. ಪಿಂಕ್ ಬಾಲ್‌ನಲ್ಲೂ ಸ್ಪಿನ್ ಮೋಡಿ ತೋರಿಸಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಕಂಗೆಡಿಸಿದ ಭಾರತ ತಂಡ ಅಹರ್ನಿಶಿ ಟೆಸ್ಟ್ ಎರಡೇ ದಿನಗಳಲ್ಲೇ ಮುಗಿದರೂ ಹಲವಾರು ದಾಖಲೆಗಳನ್ನು ನಿರ್ಮಿಸಿ ಬೀಗಿತು. ಸ್ಥಳೀಯ ಆಟಗಾರ ಅಕ್ಷರ್ ಪಟೇಲ್ ಪಂದ್ಯದಲ್ಲಿ 11 ವಿಕೆಟ್ ಕಬಳಿಸಿದ ಸಾಧನೆಯೊಂದಿಗೆ ಭಾರತ ತಂಡ 10 ವಿಕೆಟ್‌ಗಳಿಂದ ಅಮೋಘ ಗೆಲುವು ಕಂಡಿತು. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಮತ್ತಷ್ಟು ಸನಿಹವಾಯಿತು.
ಇದನ್ನೂ ಓದಿ: ಕಡಲ ದಡದಲ್ಲಿ ಪೃಥ್ವಿ-ಮಿಲನಾ ಡ್ಯುಯೆಟ್
ಗುರುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 3 ವಿಕೆಟ್‌ಗೆ 99 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಭಾರತ ತಂಡ, ರೋಹಿತ್ ಶರ್ಮ (66 ರನ್, 96 ಎಸೆತ, 11 ಬೌಂಡರಿ) ಅರ್ಧಶತಕದಾಟದ ನಡುವೆಯೂ ಜೋ ರೂಟ್ (8ಕ್ಕೆ 5) ಹಾಗೂ ಜಾಕ್ ಲೀಚ್ (54ಕ್ಕೆ 4) ಮಾರಕ ದಾಳಿಗೆ ನಲುಗಿ 145 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ 33 ರನ್ ಮುನ್ನಡೆ ಸಾಧಿಸಿತು. ಬಳಿಕ ಎರಡನೇ ಸರದಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ, ಅಕ್ಷರ್ ಪಟೇಲ್ (32ಕ್ಕೆ 5) ಹಾಗೂ ಆರ್.ಅಶ್ವಿನ್ (48ಕ್ಕೆ 4) ಜೋಡಿಯ ಮಾರಕ ದಾಳಿಗೆ ನಲುಗಿ 81 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ 49 ರನ್‌ಗಳ ಗೆಲುವಿನ ಗುರಿ ಪಡೆದ ಭಾರತ, 7.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಜಯದ ನಗೆ ಬೀರಿತು.
ಇಂಗ್ಲೆಂಡ್: 112 ಮತ್ತು 30.4 ಓವರ್‌ಗಳಲ್ಲಿ 81 (ಬೆನ್ ಸ್ಟೋಕ್ಸ್ 25, ಒಲಿ ಪೋಪ್ 12, ಜೋ ರೂಟ್ 19, ಅಕ್ಷರ್ ಪಟೇಲ್ 32ಕ್ಕೆ 5, ಆರ್.ಅಶ್ವಿನ್ 48ಕ್ಕೆ 4). ಭಾರತ : 145 (ರೋಹಿತ್ ಶರ್ಮ 66, ಆರ್.ಅಶ್ವಿನ್ 17, ಜೋ ರೂಟ್ 8ಕ್ಕೆ 5, ಜಾಕ್ ಲೀಚ್ 54ಕ್ಕೆ 4), ಮತ್ತು 7.4 ಓವರ್‌ಗಳಲ್ಲಿ 49 (ರೋಹಿತ್ ಶರ್ಮ 25*, ಶುಭಮಾನ್ ಗಿಲ್ 15*).