ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾಗೆ ಇಂದು ಆಫ್ಘಾನಿಸ್ತಾನ ​ ಸವಾಲು; ರೋಹಿತ್​ ಪಡೆಗೆ ಸುಲಭ ಗೆಲುವಿನ ನಿರೀಕ್ಷೆ

ind vs afghan wc web
Published on

ನವದೆಹಲಿ: ಐದು ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸವಾಲಿನ ಪರಿಸ್ಥಿತಿಯನ್ನು ನಿಭಾಯಿಸಿ ಶುಭಾರಂಭ ಕಂಡಿರುವ ಟೀಮ್​ ಇಂಡಿಯಾ, ತವರಿನ ಏಕದಿನ ವಿಶ್ವಕಪ್​ನಲ್ಲಿ ಬುಧವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಸವಾಲು ಎದುರಿಸಲಿದೆ. ಟಿ20 ಕ್ರಿಕೆಟ್​ನಲ್ಲಿ ಆಫ್ಘನ್​ ತಂಡ ಹೆಚ್ಚಿನ ಸದ್ದು ಮಾಡಿದ್ದರೂ, ಏಕದಿನದಲ್ಲಿ ಇನ್ನೂ ಅಂಬೆಗಾಲಿಡುವಂತಿದೆ. ಹೀಗಾಗಿ ರೋಹಿತ್​ ಶರ್ಮ ಬಳಗಕ್ಕೆ ಸುಲಭ ಗೆಲುವಿನ ನಿರೀಕ್ಷೆ ಇದೆ. ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್​ ಪಂದ್ಯಕ್ಕೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವಂಥ ಗೆಲುವಿನ ಹಂಬಲ ಭಾರತ ತಂಡದ್ದಾಗಿದೆ.

ಆಸೀಸ್​ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದರೂ, ಕೆಲವೊಂದು ಎಡವಟ್ಟುಗಳನ್ನು ಮಾಡಿಕೊಂಡಿತ್ತು. ಆಫ್ಘನ್​ ಎದುರು ಅದನ್ನು ಸರಿಪಡಿಸಿಕೊಳ್ಳಬೇಕಿದೆ. ಮುಖ್ಯವಾಗಿ ಉತ್ತಮ ಆರಂಭ ಸಿಗಬೇಕಾಗಿದೆ. ಇಶಾನ್​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್​ ಹೊಡೆತಗಳ ಆಯ್ಕೆ ಕೆಟ್ಟದಾಗಿತ್ತು. ನಾಯಕ ರೋಹಿತ್​ ಶರ್ಮ ಕೂಡ ಜವಾಬ್ದಾರಿಯುತ ನಿರ್ವಹಣೆ ತೋರಬೇಕಾಗಿದೆ. ಗಿಲ್​ ಗೈರಿನಲ್ಲಿ ದೊರೆತಿರುವ ಅವಕಾಶವನ್ನು ಕಿಶನ್​ ಬಳಸಿಕೊಳ್ಳಬೇಕಿದೆ. ಶ್ರೇಯಸ್​ ಕೂಡ ಸಿಕ್ಕ ಅವಕಾಶ ಬಳಸಿಕೊಳ್ಳದಿದ್ದರೆ, 4ನೇ ಕ್ರಮಾಂಕದ ಸ್ಥಾನವನ್ನು ಸೂರ್ಯಕುಮಾರ್​ಗೆ ಬಿಟ್ಟುಕೊಡಬೇಕಾದೀತು.

ಒತ್ತಡದಲ್ಲಿ ಅಫ್ಘಾನಿಸ್ತಾನ: ಹಶ್ಮಾತ್​ಉಲ್ಲಾ ಶಾಹಿದಿ ಬಳಗ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ನೀರಸ ನಿರ್ವಹಣೆ ತೋರಿ ಸೋಲು ಕಂಡಿತ್ತು. ಈ ಬಾರಿ ತಂಡದಿಂದ ಚೇತೋಹಾರಿ ನಿರ್ವಹಣೆ ಬರದಿದ್ದರೆ ಭಾರತಕ್ಕೆ ಸುಲಭ ತುತ್ತಾಗಲಿದೆ. ರಶೀದ್​ ಖಾನ್​, ಮುಜೀಬ್​ ಜದ್ರಾನ್​ ಸಹಿತ ಆಫ್ಘನ್​ ಸ್ಪಿನ್ನರ್​ಗಳು ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಮಿಂಚಿದ್ದಾರೆ. ಆದರೆ ಏಕದಿನದಲ್ಲಿ ಬ್ಯಾಟರ್​ಗಳಿಗೆ ಹೆಚ್ಚಿನ ರಿಸ್ಕ್​ ತೆಗೆದುಕೊಳ್ಳದೆ ಆಡುವ ಸ್ವಾತಂತ್ರ್ಯ ಇರುತ್ತದೆ. ಹೀಗಾಗಿ ಇಲ್ಲಿ ಆಫ್ಘನ್​ ಸ್ಪಿನ್ನರ್​ಗಳು ಭಿನ್ನ ಕಾರ್ಯತಂತ್ರ ಅಳವಡಿಸಿಕೊಳ್ಳಬೇಕಾಗಿದೆ. ಬಾಂಗ್ಲಾ ಎದುರು ಕೇವಲ 156 ರನ್​ಗೆ ಆಲೌಟ್​ ಆಗಿದ್ದ ಆಫ್ಘನ್​ ಬ್ಯಾಟಿಂಗ್​ನಲ್ಲೂ ಸುಧಾರಣೆ ಕಾಣಬೇಕಿದೆ. ಆಫ್ಘನ್​ಗೆ 2019ರ ವಿಶ್ವಕಪ್​ನಲ್ಲಿ ಭಾರತದೆದುರು ತೋರಿದ ದಿಟ್ಟ ನಿರ್ವಹಣೆ ಸ್ಫೂರ್ತಿ ತುಂಬಬಹುದು. ಭಾರತವೂ ಆ ಪಂದ್ಯವನ್ನು ನೆನಪಿನಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಆಡಬೇಕಿದೆ.

ಟೀಮ್​ ನ್ಯೂಸ್​:

ಭಾರತ: ಶುಭಮಾನ್​ ಗಿಲ್​ ಚೇತರಿಸಿಕೊಳ್ಳದ ಕಾರಣ, ಇಶಾನ್​ ಕಿಶನ್​ ಆರಂಭಿಕರಾಗಿ ಮುಂದುವರಿಯಲಿದ್ದಾರೆ. ಆದರೆ ಭಾರತ ಫಿರೋಜ್​ ಷಾ ಕೋಟ್ಲಾದಲ್ಲೂ ತ್ರಿವಳಿ ಸ್ಪಿನ್ನರ್ಸ್​ ಕಣಕ್ಕಿಳಿಸುವುದು ಅನುಮಾನ. ಹೀಗಾಗಿ ಅಶ್ವಿನ್​ ಬದಲಿಗೆ ವೇಗಿ ಮೊಹಮದ್​ ಶಮಿ​ ಕಣಕ್ಕಿಳಿಯಬಹುದು. ತಂಡದಲ್ಲಿ ಬೇರಾವುದೇ ಬದಲಾವಣೆಯ ಸಾಧ್ಯತೆ ಇಲ್ಲ.

ಅಫ್ಘಾನಿಸ್ತಾನ: ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದ ಸೋಲಿನ ನಡುವೆಯೂ ತಂಡದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಯಾಕೆಂದರೆ ಆಫ್ಘನ್​ ಲಭ್ಯವಿರುವ ತನ್ನ ಅತ್ಯುತ್ತಮ 11ರ ಬಳಗವನ್ನು ಕಣಕ್ಕಿಳಿಸುತ್ತಿದೆ.

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಡಿ

ಕೊಹ್ಲಿಗೆ ತವರಿನ ಪಂದ್ಯ

ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ತಾನು ಆಡಿ ಬೆಳೆದ ಸ್ಟೇಡಿಯಂನಲ್ಲೇ ಆಡಲಿದ್ದಾರೆ. ಅದೂ ತನ್ನದೇ ಹೆಸರಿನ ಪೆವಿಲಿಯನ್​ ಎದುರಿನಲ್ಲಿ ಆಡುವ ಅವಕಾಶ ಹೊಂದಿದ್ದಾರೆ. ಕಳೆದ ಐಪಿಎಲ್​ನಲ್ಲಿ ಆರ್​ಸಿಬಿ-ಲಖನೌ ನಡುವಿನ ಮುಖಾಮುಖಿಯ ವೇಳೆ ಕೊಹ್ಲಿ ಮತ್ತು ಆಫ್ಘನ್​ ವೇಗಿ ನವೀನ್​ ಉಲ್​ ಹಕ್​ ಜಗಳವಾಡಿದ್ದರು. ಹೀಗಾಗಿ ಈ ಬಾರಿ ಅವರಿಬ್ಬರ ಮುಖಾಮುಖಿ ಕುತೂಹಲ ಕೆರಳಿಸಿದ್ದು, ಕೊಹ್ಲಿ ತವರು ಪ್ರೇಕ್ಷಕರ ಬೆಂಬಲವನ್ನೂ ಪಡೆಯಲಿದ್ದಾರೆ.

ಮತ್ತೆ ರನ್​ಪ್ರವಾಹ?

ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ-ಶ್ರೀಲಂಕಾ ನಡುವೆ ನಡೆದ ಮೊದಲ ಪಂದ್ಯದಲ್ಲಿ 750ಕ್ಕೂ ಅಧಿಕ ರನ್​ ಮತ್ತು 31 ಸಿಕ್ಸರ್​ ಸಿಡಿದಿತ್ತು. ಹೀಗಾಗಿ ಈ ಸಲವೂ ರನ್​ಪ್ರವಾಹ ಮುಂದುವರಿಯುವ ನಿರೀಕ್ಷೆ ಇದೆ. ಆಫ್ಘನ್​ ಸ್ಪಿನ್ನರ್​ಗಳು ಪ್ರಬಲರಾಗಿದ್ದರೂ, ವೇಗದ ಬೌಲಿಂಗ್​ ವಿಭಾಗ ಭಾರತಕ್ಕೆ ಸುಲಭ ಸವಾಲಾಗಬಹುದು. ರನ್​ರೇಟ್​ ಸುಧಾರಿಸುವ ನಿಟ್ಟಿನಲ್ಲೂ ಭಾರತ ಪ್ರಯತ್ನಿಸಬಹುದು.

ಏಕದಿನ ಮುಖಾಮುಖಿ: 3

ಭಾರತ: 2

ಅಫ್ಘಾನಿಸ್ತಾನ: 0

ಟೈ: 1

ವಿಶ್ವಕಪ್​ ಮುಖಾಮುಖಿ: 1

ಭಾರತ: 1

ಅಫ್ಘಾನಿಸ್ತಾನ: 0

2019ರಲ್ಲಿ ಭೀತಿ ಹುಟ್ಟಿಸಿತ್ತು ಆಫ್ಘನ್​​!

ಭಾರತ-ಆಫ್ಘನ್​​ ತಂಡಗಳು ಏಕದಿನ ವಿಶ್ವಕಪ್​ನಲ್ಲಿ ಇದುವರೆಗೆ ಒಮ್ಮೆ ಮಾತ್ರ ಮುಖಾಮುಖಿ ಆಗಿವೆ. 2019ರಲ್ಲಿ ಸೌಥಾಂಪ್ಟನ್​ನಲ್ಲಿ ನಡೆದ ಆ ಪಂದ್ಯದಲ್ಲಿ ಆಫ್ಘನ್​, ಭಾರತಕ್ಕೆ ಸೋಲಿನ ಭೀತಿಯನ್ನೂ ಮೂಡಿಸಿತ್ತು. ಭಾರತವನ್ನು 8 ವಿಕೆಟ್​ಗೆ 224 ರನ್​ಗಳಿಗೆ ನಿಯಂತ್ರಿಸಿದ್ದ ಆಫ್ಘನ್​, ಬಳಿಕ ಮೊಹಮದ್​ ನಬಿ ಅರ್ಧಶತಕದಿಂದ ಯಶಸ್ವಿ ಚೇಸಿಂಗ್​ನತ್ತ ಮುನ್ನಡೆದಿತ್ತು. ಆದರೆ ಕೊನೇ ಓವರ್​ನಲ್ಲಿ 16 ರನ್​ ಬೇಕಿದ್ದಾಗ, ಮೊಹಮದ್​ ಶಮಿ ಹ್ಯಾಟ್ರಿಕ್​ ವಿಕೆಟ್​ ಸಾಧನೆಯೊಂದಿಗೆ ಅಫ್ಘಾನಿಸ್ತಾನವನ್ನು 213 ರನ್​ಗೆ ಆಲೌಟ್​ ಮಾಡಿ 11 ರನ್​ ಗೆಲುವು ತಂದುಕೊಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net