More

    ಏಷ್ಯಾಡ್​ನಲ್ಲಿ ಇತಿಹಾಸ ನಿರ್ಮಿಸಿದ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಭೇಷ್​

    ನವದೆಹಲಿ: ಎಲ್ಲ 140 ಕೋಟಿ ಭಾರತೀಯರ ಪರವಾಗಿ ನಿಮ್ಮನ್ನು ನಾನು ಸ್ವಾಗತಿಸುತ್ತೇನೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಾಧನೆಗಳಿಂದ ಇಡೀ ದೇಶದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ನೀವು ಇತಿಹಾಸ ನಿರ್ಮಿಸಿದ್ದೀರಿ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಏಷ್ಯಾಡ್​ನಲ್ಲಿ ಪದಕ ಜಯಿಸಿದ ಮತ್ತು ಸ್ಪರ್ಧಿಸಿದ ಭಾರತೀಯ ಕ್ರೀಡಾಪಟುಗಳ ಬೆನ್ನತಟ್ಟಿದರು. ಜತೆಗೆ ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲು ಬೇಕಿರುವ ಎಲ್ಲ ರೀತಿಯ ನೆರವು ನೀಡಲು ಸಿದ್ಧನಿದ್ದೇನೆ ಎಂಬ ಭರವಸೆ ನೀಡಿದರು. ಮುಂದಿನ ಏಷ್ಯಾಡ್​ನಲ್ಲಿ ಭಾರತ ಇನ್ನಷ್ಟು ಉತ್ತಮ ನಿರ್ವಹಣೆ ತೋರುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

    ಮೇಜರ್​ ಧ್ಯಾನ್​ಚಂದ್​ ಸ್ಟೇಡಿಯಂನಲ್ಲಿ ನಡೆದ ಏಷ್ಯಾಡ್​ ಸಾಧಕರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಭಾರತ 28 ಚಿನ್ನದ ಸಹಿತ ಗೆದ್ದ ಒಟ್ಟು 107 ಪದಕಗಳಲ್ಲಿ ಅರ್ಧದಷ್ಟು ಕೊಡುಗೆ ಮಹಿಳೆಯರದ್ದೇ ಆಗಿದೆ ಎಂದು ವಿಶೇಷ ಅಭಿನಂದನೆ ಸಲ್ಲಿಸಿದರು. ಈ ಬಾರಿ 100ರ ಗಡಿ ದಾಟಿದ್ದೀರಿ. ಮುಂದಿನ ಬಾರಿ ಈ ದಾಖಲೆಯನ್ನೂ ಮುರಿಯಲಿದ್ದೀರಿ. 2024ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲೂ ನಿಮ್ಮಿಂದ ಶ್ರೇಷ್ಠ ನಿರ್ವಹಣೆ ನಿರೀಸುತ್ತೇನೆ ಎಂದರು. ಈ ಸಾಧನೆ ದೇಶದ ಯಶಸ್ಸಿನ ಪ್ರತಿಕವಾಗಿದೆ. ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನನಗೆ ವೈಯಕ್ತಿಕವಾಗಿಯೂ ತೃಪ್ತಿ ತಂದಿದೆ ಎಂದರು.

    ಭಾರತದಲ್ಲಿ ಪ್ರತಿಭೆಗಳಿಗೆ ಯಾವತ್ತೂ ಕೊರತೆ ಇಲ್ಲ. ಆದರೆ ಸಾಧನೆಯಲ್ಲಿ ಹಲವು ತೊಡಕುಗಳು ಇದ್ದವು. ಆದರೆ 2014ರ ನಂತರದಲ್ಲಿ ಕ್ರೀಡಾಪಟುಗಳಿಗೆ ಅತ್ಯುತ್ತಮ ತರಬೇತಿ, ವ್ಯವಸ್ಥೆ ಮತ್ತು ವಿದೇಶದಲ್ಲಿ ಸ್ಪರ್ಧೆಯ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮೋದಿ ವಿವರಿಸಿದರು. ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಕೂಡ ಹಾಜರಿದ್ದರು.

    ಖೇಲೋ ಇಂಡಿಯಾಗೆ ಮೆಚ್ಚುಗೆ
    ಕ್ರೀಡಾ ಇಲಾಖೆಯ ಖೇಲೋ ಇಂಡಿಯಾ ಯೋಜನೆಗೆ ಮೋದಿ ವಿಶೇಷ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಏಷ್ಯಾಡ್​ನಲ್ಲಿ ಪದಕ ಗೆದ್ದ 125 ಕ್ರೀಡಾಪಟುಗಳು ಖೇಲೋ ಇಂಡಿಯಾದಲ್ಲೇ ಬೆಳಕಿಗೆ ಬಂದವರು. ಅವರು 40 ಪದಕಗಳನ್ನು ಗೆದ್ದುಕೊಟ್ಟರು. ಖೇಲೋ ಇಂಡಿಯಾ ಮೂಲಕ ಇದುವರೆಗೆ 25 ಸಾವಿರ ಕೋಟಿ ರೂ.ಗಳನ್ನು ಕ್ರೀಡಾಪಟುಗಳಿಗೆ ವ್ಯಯಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಸರ್ಕಾರ ಹೆಚ್ಚುವರಿ 3 ಸಾವಿರ ಕೋಟಿ ರೂ. ಖರ್ಚು ಮಾಡಲಿದೆ ಎಂದರು.

    ಕ್ರೀಡಾಪಟುಗಳಿಂದ ಉಡುಗೊರೆ
    ಕಾರ್ಯಕ್ರಮದ ವೇಳೆ ಕ್ರೀಡಾಪಟುಗಳು ಪ್ರಧಾನಿಗೆ ವಿಶೇಷ ಉಡುಗೊರೆಗಳನ್ನು ನೀಡಿದರು. ಕ್ರಿಕೆಟ್​ ತಂಡ ಆಟಗಾರರ ಸಹಿ ಇದ್ದ ಬ್ಯಾಟ್​ ನೀಡಿದರೆ, ಹಾಕಿ ತಂಡ ಸ್ಟಿಕ್​, ಜೆರ್ಸಿ ನೀಡಿತು. ಟೆನಿಸ್​ ತಂಡ ರ್ಯಾಕೆಟ್​ ವಿತರಿಸಿತು. ಇತರ ಕ್ರೀಡಾಪಟುಗಳೂ ವಿಶೇಷ ಸ್ಮರಣಿಕೆಗಳನ್ನು ಪ್ರಧಾನಿಗೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts