More

    ಬದುಕಿಗೆ ಮಾನವೀಯ ಮೌಲ್ಯ ಅವಶ್ಯ

    ಶಿಕಾರಿಪುರ: ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ನಡೆಸುವುದೇ ನಿಜವಾದ ಬದುಕು. ಪರಿಶುದ್ಧ ಭಾವನೆಯಿಂದ ಮನುಷ್ಯ ಭಗವಂತನಾಗಬಲ್ಲ ಎಂದು ಕಾಶಿಪೀಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

    ಸಮೀಪದ ಕಾನಳ್ಳಿಯಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸತ್ಕಾರ್ಯ, ಸಾಮಾಜಿಕ ಕಳಕಳಿ ಹಾಗೂ ಧರ್ಮ ಮಾರ್ಗದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ದೈವಾರಾಧನೆ, ಭಗವಂತನ ನಾಮಸ್ಮರಣೆಯಿಂದ ಮನಸ್ಸು ನಿರ್ಮಲವಾಗಿರುತ್ತದೆ. ಸದ್ವಿಚಾರಗಳ ಸಂದೇಶ ಸಾರುವುದೇ ಗುರು ಪರಂಪರೆಯ ಕಾಯಕ. ಮಠ ಮಂದಿರಗಳು ಆಧ್ಯಾತ್ಮಿಕ ಚಿಂತನೆಯ ಸಾಕ್ಷಿರೂಪ ಎಂದು ತಿಳಿಸಿದರು.
    ಭಗವಂತ ಮತ್ತು ಭಕ್ತರ ನಡುವೆ ಸೇತುವೆಯಾಗಿ ನಿಂತು ಮಾರ್ಗದರ್ಶನ ಮಾಡುವವರು ಗುರುಗಳು. ಹರ ಮುನಿದರೂ ಗುರು ಕಾಯುವವನು. ಮಠ ಮತ್ತು ಭಕ್ತರ ನಡುವೆ ಸಂಬಂಧಗಳು ನಿರಂತರವಾಗಿರಬೇಕು. ಅನಾದಿ ಕಾಲದಿಂದಲೂ ಗುರುಪರಂಪರೆಯು ಸಮಾಜ ಉದ್ಧಾರದ ಹೆದ್ದಾರಿಯಲ್ಲಿ ಸಾಗಲು ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದರು.
    ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಧರ್ಮ ಮಾರ್ಗ ಎಂದರೆ ರಾಜಮಾರ್ಗ. ನಾವು ಎಂದಿಗೂ ಧರ್ಮಮಾರ್ಗ ತೊರೆಯಬಾರದು. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಗಳು ವಿಶ್ವ ಶ್ರೇಷ್ಠ. ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
    ಸಿದ್ಧಾಂತ ಶಿಖಾಮಣಿ ವೀರಶೈವರ ಪ್ರಾಚೀನ ಧರ್ಮಗ್ರಂಥ. ಭಾರತೀಯ ಬಹುತೇಕ ಭಾಷೆಗಳಿಗೆ ಹಾಗೂ ರಷ್ಯನ್ ಭಾಷೆಗೆ ಅನುವಾದಗೊಂಡಿದೆ. ಜೀವನದ ಮೌಲ್ಯಗಳನ್ನು ತಿಳಿಸುವ ಪವಿತ್ರ ಗ್ರಂಥವಾಗಿದೆ. ಮನುಷ್ಯ ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಸಂಸ್ಕಾರವಂತನಾಗಲು ಹಾಗೂ ಭವಿಷ್ಯದ ಬದುಕಿಗೆ ಗ್ರಂಥವು ಮಾರ್ಗಸೂಚಿ ಎಂದರು.
    ಶಿರಾಳಕೊಪ್ಪ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಸಾಲೂರು ಹಿರೇಮಠದ ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿ ಕೇಂದ್ರ ಸ್ವಾಮೀಜಿ, ಕಡೇನಂದಿಹಳ್ಳಿ ಪುಣ್ಯಾಶ್ರಮದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಭುಸ್ವಾಮಿ ಕಾನಳ್ಳಿ ಸೇರಿ ಪ್ರಮುಖರು ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts