More

    ಸಂಪತ್ತು ಮುಸ್ಲಿಂರಿಗೆ ಮರು ಹಂಚಿಕೆ; ಪ್ರಧಾನಿ ಕೀಳು ಮಟ್ಟದ ಹೇಳಿಕೆಗೆ ನಟ ಪ್ರಕಾಶ್ ರಾಜ್ ಖಂಡನೆ

    ಬೆಂಗಳೂರು: ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರಿ ಮುಸ್ಲಿಂರಿಗೆ ಇದೆ ಎಂದು ಕಾಂಗ್ರೆಸ್ ಹೇಳಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಸುಳ್ಳು ಎಂದು ನಟ ಪ್ರಕಾಶ್ ರಾಜ್ ಹೇಳಿದರು.

    ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಅವರು, ಸೋಲಿನ ಭಯದಿಂದ ಪ್ರಧಾನಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
    ಹಿಂದು-ಮುಸ್ಲಿಂ, ಇಂಡಿಯಾ-ಪಾಕಿಸ್ತಾನ ಬಿಟ್ಟರೆ ಬಿಜೆಪಿಯವರಿಗೆ ಬೇರೆ ಏನಿದೆ?. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಬಾಂಡ್ ಅನೈತಿಕ ಎಂದು ಹೇಳಿದರೂ ಹಣಕಾಸು ಮಂತ್ರಿ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಜಾರಿಗೊಳಿಸುತ್ತೇವೆ ಎನ್ನುತ್ತಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು.

    ಮನಮೋಹನ್ ಸಿಂಗ್ ಎಲ್ಲ ಹಿಂದುಳಿದ ವರ್ಗ, ಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಗಬೇಕು ಎಂದು ಹೇಳಿದ್ದರು. ಅದನ್ನು ಪ್ರಧಾನಿ ತಿರುಚಿ ಹೇಳುತ್ತಿದ್ದಾರೆ. ಪ್ರಧಾನಿ ಮಾತಿನಲ್ಲಿ ಅವರ ಹುಳುಕು ಕಾಣುತ್ತದೆ. ಮೊದಲ ಸುತ್ತಿನ ಚುನಾವಣೆಯ ಸಮೀಕ್ಷೆಯಲ್ಲಿ ಬೇಳೆಕಾಳು ಬೇಯುತ್ತಿಲ್ಲ ಎಂದು ಪ್ರಧಾನಿ ಕೀಳುಮಟ್ಟದ ಪ್ರಚಾರ ಮಾಡುತ್ತಿದ್ದಾರೆ.

    ನಿಮ್ಮ ಮಂಗಳಸೂತ್ರ ಕಿತ್ತು ಕೊಡುತ್ತಾರೆ. ಆಸ್ತಿ ಜ್ತು ಮಾಡುತ್ತಾರೆ. ನಿಮ್ಮ ಸಂಪತ್ತನ್ನು ತೆಗೆದು ಮುಸ್ಲಿಂರಿಗೆ ಕೊಡುತ್ತಾರೆ. ಆದ್ದರಿಂದ ನೀವು ನಮಗೆ ವೋಟು ಹಾಕಬೇಕು ಎನ್ನುತ್ತಾರೆ. ಚುನಾವಣಾ ಆಯೋಗ ಕುರುಡಾ? ಕಿವುಡಾ? ಇದನ್ನು ಉಲ್ಲಂಘನೆ ಎಂದೂ ಕೂಡ ಆಯೋಗ ನೋಡುತ್ತಿಲ್ಲ ಎಂದು ಹರಿಹಾಯ್ದರು.

    ಬದಲಾವಣೆ ಗಾಳಿ ಬೀಸುತ್ತಿದೆ

    ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್ ಇದ್ದವರು ಸೂಪಿರಿಯಾರಿಟಿ ಕಾಂಪ್ಲೆಕ್ಸ್ ಇರುವ ತರಹ ಓಡಾಡುತ್ತಾರೆ. ‘ಮಹಾಪ್ರಭು’ ಬೆವರುತ್ತಿದ್ದಾರೆ. ಪ್ರಧಾನಿ ಹುದ್ದೆಯಲ್ಲಿರುವವರು ಪ್ರಪಂಚವೇ ತಲೆತಗ್ಗಿಸುವ ಮಟ್ಟಕ್ಕಿಳಿದು ಮಾತನಾಡುತ್ತಿದ್ದಾರೆ. ಅವರು ಹೆದರುತ್ತಿದ್ದಾರೆ ಎಂದರೆ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ಅರ್ಥ ಎಂದು ಹೇಳಿದರು.

    ‘ಮಹಾಪ್ರಭು’ಗಳಿಗೆ ವಿದೂಷಕರ ಅವಶ್ಯಕತೆ ಇದೆ. ಪ್ರಧಾನಿ ನನ್ನ ಮುಖ ನೋಡಿ ವೋಟು ಹಾಕಿ ಎಂದರೆ ಹೇಗೆ? ಪ್ರಧಾನಿ ಹೊಗಳುವ ವಿದೂಷಕರನ್ನು ನಾವು ಆಯ್ಕೆ ಮಾಡಬೇಕೆ ಎಂದು ಕೇಳಿದರು.

    ಬರ, ತೆರಿಗೆ ಬಗ್ಗೆ ಮಾತೇ ಇಲ್ಲ

    ಎಲ್ಲೂ ಬರ ಪರಿಹಾರ, ತೆರಿಗೆ ಪಾಲು ಹಂಚಿಕೆ ಬಗ್ಗೆ ಮಾತನಾಡುತ್ತಿಲ್ಲ ಏಕೆ? ಇಲ್ಲಿಂದ ಪ್ರತಿನಿಧಿಯಾಗಿರುವ ಹಣಕಾಸು ಸಚಿವರು ನಮಗೆ ದ್ರೋಹ ಮಾಡಿದರು ಎಂದು ಹೇಳಿದರು.

    ಇವರು ಭವಿಷ್ಯ ರೂಪಿಸಬಹುದೆ

    ನಟಿಮಣಿಯೊಬ್ಬರು ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್, 2014ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂತು ಎನ್ನುತ್ತಾರೆ. ಇಂತಹವರು ಭಾರತದ ಭವಿಷ್ಯ ರೂಪಿಸುತ್ತಾರೆಯೆ? ಎಂದು ಕಂಗನಾ ರನೌತ್ ಹೆಸರು ಹೇಳದೇ ಟೀಕಿಸಿದರು.
    ಹೇಮಾಮಾಲಿನಿಯಂತಹ ಹಿರಿಯ ನಟಿಯನ್ನು ಮತ್ತೆ ಚುನಾವಣೆಗೆ ನಿಲ್ಲಿಸಿದ್ದಾರೆ. ಅವರೊಬ್ಬರು ವಿದೂಷಕರಾಗಿದ್ದಾರೆ. ಇವರು ನಮ್ಮ ದೇಶದ ಬಡವರ ಬಗ್ಗೆ ಯೋಚನೆ ಮಾಡುತ್ತಾರೆಯೆ? ಎಂದು ಕೆಣಕಿದರು. ರಾಮಾಯಣ ಧಾರವಾಹಿಯ ನಟನೊಬ್ಬನನ್ನು ಕಣಕ್ಕಿಳಿಸಿದ್ದಾರೆ. ಪ್ರಧಾನಿಗಳು ಮೈಸೂರಿನ ಮಹಾರಾಜನ್ನೂ ವಿದೂಷಕರನ್ನಾಗಿ ಕರೆಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಮೈಸೂರು ಮಹಾರಾಜರು ಆಸ್ತಿ ಬಗ್ಗೆ ಅಫಿಡೆವಿಟ್‌ನಲ್ಲಿ ಸುಳ್ಳು ಹೇಳಿದ್ದಾರೆ. ಇವರೇನು ಔಟ್ ಹೌಸ್‌ನಲ್ಲಿದ್ದಾರಾ? ಆಟೋದಲ್ಲಿ ಓಡಾಡುತ್ತಾರಾ? ಹೇಗೆ ಹಾಡು ಹಗಲೇ ಸುಳ್ಳು ಹೇಳುತ್ತಾರೆ ನೋಡಿ ಎಂದು ಪ್ರಶ್ನಿಸಿದರು.

    ತೇಜಸ್ವಿ ಸೂರ್ಯ, ಮೋಹನ್ ಕೊಡುಗೆ ಏನು?

    ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಅವರ ಕೊಡುಗೆ ಏನು? ಪ್ರಧಾನಿ ಗ್ಯಾರಂಟಿಗೆ ವಾರೆಂಟಿ ಇದೆಯಾ? ನೂರು ಸ್ಮಾರ್ಟ್ ಸಿಟಿ ಎಂದರು 10 ತೋರಿಸಲು ಹೇಳಿ? ಸುಳ್ಳು ತಾನೆ? ಎಂದು ಕೇಳಿದರು.
    ಸಂಸದರು ಒಂದಾದರೂ ಹಳ್ಳಿ ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಿದ್ದಾರಾ? 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದರೆ? ರೈತರ ಸರ್ಕಾರ ಎನ್ನುತ್ತಾರೆ ಎಂಎಸ್‌ಪಿ ಕೊಡುತ್ತಾರಾ? ಭಾರತದ ರಾಜಕಾರಣದ ಇತಿಹಾಸದಲ್ಲೇ ಒಂದು ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನಮ್ಮ ಬರ ಪರಿಹಾರ ಹಣ ಕೊಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಹೋಗುವ ಪರಿಸ್ಥಿತಿ ಬಂತು ಎಂದು ಬೇಸರ ವ್ಯಕ್ತಪಡಿಸಿದರು.

    ಮತದಾರರು ಪಾಠ ಕಲಿಸಬೇಕು

    ಇತ್ತೀಚೆಗೆ ಚೆಂಬು ಪಾಪ್ಯೂಲರ್ ಆಗಿದೆ. ಅದು ಅಕ್ಷಯ ಪಾತ್ರೆ ಎಂದು ದೇವೇಗೌಡ ಹೇಳುತ್ತಾರೆ. ಅಕ್ಷಯ ಪಾತ್ರೆ ಎನ್ನುವವರು ಗದ್ದೆ ಬಯಲಿಗೆ ಚೆಂಬು ಹಿಡಿದುಕೊಂಡು ಹೋಗಬೇಕು ಹಾಗೆ ಮತದಾರರು ಪಾಠ ಕಲಿಸಬೇಕು ಎಂದು ಪ್ರಕಾಶ್ ರಾಜ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts