

ಮೆಕಾಯ್: ಭಾರತ ಟೆಸ್ಟ್ ತಂಡ ತವರಿನಲ್ಲೇ ವೈಟ್ವಾಷ್ ಎದುರಿಸಿರುವ ನಡುವೆ ಅತ್ತ ಬಾರ್ಡರ್&ಗಾವಸ್ಕರ್ ಟ್ರೋಫಿಗೆ ಪೂರ್ವಭಾವಿಯಾಗಿ ಆಸ್ಟ್ರೆಲಿಯಾ ಪ್ರವಾಸ ಕೈಗೊಂಡಿರುವ ಭಾರತ ಎ ತಂಡವೂ ಮುಗ್ಗರಿಸಿದೆ. ನಾಯಕ ನಾಥನ್ ಮೆಕ್ಸ್ವೀನಿ (88*) ಮತ್ತು ಬೆವು ವೆಬ್ಸ್ಟರ್ (61*) ದಿಟ್ಟ ಜತೆಯಾಟದ ಎದುರು ಮಂಕಾದ ಭಾರತ ಎ ತಂಡ ಮೊದಲ ಚತುರ್ದಿನ ಪಂದ್ಯದಲ್ಲಿ ಆಸ್ಟ್ರೆಲಿಯಾ ಎ ಎದುರು 7 ವಿಕೆಟ್ಗಳಿಂದ ಪರಾಭವಗೊಂಡಿದೆ. ಇದರಿಂದ 2 ಪಂದ್ಯಗಳ ಸರಣಿಯಲ್ಲಿ ಋತುರಾಜ್ ಗಾಯಕ್ವಾಡ್ ಪಡೆ 0-1 ಹಿನ್ನಡೆ ಅನುಭವಿಸಿದೆ. ಸರಣಿಯ 2ನೇ ಪಂದ್ಯ ಗುರುವಾರದಿಂದ ಮೆಲ್ಬೋರ್ನ್ನಲ್ಲಿ ನಡೆಯಲಿದೆ.
ಪಂದ್ಯದ 3ನೇ ದಿನದಾಟದಲ್ಲಿ ಭಾರತ ಎ ತಂಡ 312 ರನ್ಗಳಿಗೆ ಸರ್ವಪತನ ಕಂಡಿತು. ಸಾಯಿ ಸುದರ್ಶನ್ (103) ಶತಕ ಸಿಡಿಸಿದರೆ, ಕನ್ನಡಿಗ ದೇವದತ್ ಪಡಿಕ್ಕಲ್ (88) ಶತಕ ತಪ್ಪಿಸಿಕೊಂಡರು. 225 ರನ್ ಗುರಿ ಪಡೆದ ಆಸೀಸ್, 3ನೇ ದಿನದಂತ್ಯಕ್ಕೆ 3 ವಿಕೆಟ್ಗೆ 139 ರನ್ ಗಳಿಸಿತು. ಕೊನೇ ದಿನ ಗೆಲುವಿಗೆ ಮತ್ತೆ 86 ರನ್ ಗಳಿಸಬೇಕಾಗಿದ್ದ ಆಸೀಸ್ ಎ, 3 ವಿಕೆಟ್ಗೆ 226 ರನ್ ಗಳಿಸಿ ಜಯ ಸಾಧಿಸಿತು. ಭಾರತ ಕೊನೇ ದಿನ ಒಂದೂ ವಿಕೆಟ್ ಗಳಿಸಲು ಶಕ್ತವಾಗಲಿಲ್ಲ.
ಭಾರತ ಎ: 107 ಮತ್ತು 312 (ಸಾಯಿ ಸುದರ್ಶನ್ 103, ಪಡಿಕ್ಕಲ್ 88, ಕಿಶನ್ 32, ನಿತೀಶ್ 17, ನವದೀಪ್ ಸೈನಿ 18*, ಓನೀಲ್ 55ಕ್ಕೆ 4, ಮರ್ಫಿ 77ಕ್ಕೆ 3), ಆಸ್ಟ್ರೆಲಿಯಾ ಎ: 195 ಮತ್ತು 75 ಓವರ್ಗಳಲ್ಲಿ 3 ವಿಕೆಟ್ಗೆ 226 (ಹ್ಯಾರಿಸ್ 36, ಮೆಕ್ಸ್ವೀನಿ 88*, ವೆಬ್ಸ್ಟರ್ 61*, ಮುಕೇಶ್ 51ಕ್ಕೆ 1, ಪ್ರಸಿದ್ಧ ಕೃಷ್ಣ 27ಕ್ಕೆ 1).
ಚೆಂಡು ವಿರೂಪ ವಿವಾದ
ಅಂತಿಮ ದಿನದಾಟ ಆರಂಭಕ್ಕೆ ಮುನ್ನ ಅಂಪೈರ್ಗಳು ಚೆಂಡು ಬದಲಾಯಿಸಿದರು. ಆಗ ಕೆಲ ಭಾರತೀಯ ಆಟಗಾರರು ಆಕ್ಷೇಪ ಎತ್ತಿದರು. ಆದರೆ ಚೆಂಡಿನ ಮೇಲೆ ಕೆಲ ಪರಚಿದ ಕಲೆಗಳಿವೆ ಎಂದು ಅಂಪೈರ್ ಶಾನ್ ಕ್ರೇಗ್ ಚೆಂಡು ಬದಲಾವಣೆಯನ್ನು ಸಮರ್ಥಿಸಿಕೊಂಡರು. ಈ ಬಗ್ಗೆ ವಿಕೆಟ್ ಕೀಪರ್ ಇಶಾನ್ ಕಿಶನ್ ತೀವ್ರ ವಾಗ್ವಾದ ನಡೆಸಿದಾಗ ಅಂಪೈರ್ ಕ್ರೇಗ್ ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು. ನಂತರದಲ್ಲಿ ಕ್ರಿಕೆಟ್ ಆಸ್ಟ್ರೆಲಿಯಾ ಪ್ರಕಟಣೆಯೊಂದನ್ನು ನೀಡಿ, ಚೆಂಡಿನ ಸ್ಥಿತಿ ಕೆಟ್ಟಿದ್ದರಿಂದ ಅದನ್ನು ಬದಲಾವಣೆ ಮಾಡಲಾಯಿತು ಮತ್ತು ಕಿಶನ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿತು. ಆದರೆ ಚೆಂಡು ವಿರೂಪಗೊಂಡಿದ್ದಕ್ಕೆ, ನಿಯಮಾವಳಿ ಪ್ರಕಾರ ಭಾರತ ಎ ತಂಡಕ್ಕೆ ಪೆನಾಲ್ಟಿಯನ್ನೂ ವಿಧಿಸದೆ ಇದ್ದುದು ಗೊಂದಲಕ್ಕೆ ಕಾರಣವಾಯಿತು.